Advertisement

Neha ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

06:11 PM Apr 21, 2024 | Team Udayavani |

ಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲುವ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ಏ.22 ರಂದು ಮುಸ್ಲಿಂ ಸಮುದಾಯ ಹುಬ್ಬಳ್ಳಿ-ಧಾರವಾಡದಲ್ಲಿ ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಮೌನ ಮೆರವಣಿಗೆ ಮಾಡಲು ಧಾರವಾಡದ ಅಂಜುಮನ್‌ ಇ-ಇಸ್ಲಾಂ ಸಂಸ್ಥೆಯಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಹೇಳಿದರು‌.

Advertisement

ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 22ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಮುಸ್ಲಿಂ ಸಮುದಾಯದಿಂದ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗುವುದು. ಸಮಸ್ತ ಮುಸ್ಲಿಂ ಬಂಧುಗಳು, ಮೊಹಲ್ಲಾ ಮಸೀದಿ ಮೌಲ್ವಿ, ಮುತವಲ್ಲಿಗಳು ಭಾಗವಹಿಸಲಿದ್ದಾರೆ. ನಂತರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆರೋಪಿಗೆ ಶೀಘ್ರ ಶಿಕ್ಷೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಇಸ್ಲಾಂ ಧರ್ಮದಲ್ಲಿ ಹತ್ಯೆ ಮಾಡುವ ಹಕ್ಕಿಲ್ಲ. ಪ್ರೀತಿಯ ನೆಪದಲ್ಲಿ ನೇಹಾಳನ್ನು ಹತ್ಯೆ ಮಾಡಿದ್ದು ಘೋರ ಅಪರಾಧ. ಇಂತಹ ಘಟನೆಗಳು ಪದೇ ಪದೇ ಸಂಭವಿಸದಂತೆ ಇನ್ಮುಂದೆ ಎಚ್ಚರಿಕೆ ವಹಿಸುವ ಕಾರ್ಯವಾಗಬೇಕಿದೆ ಎಂದರು‌.

ನೇಹಾ ಹತ್ಯೆಯು ನಾಡಿನ ಮುಸ್ಲಿಂ ಸಮುದಾಯಕ್ಕೂ ಬಹಳ ನೋವು ತಂದಿದೆ. ಕ್ರೂರಿ ಫಯಾಜ್‌ ಮಾಡಿರುವ ಕೃತ್ಯದಿಂದ ಇಡೀ ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತಾಗಿದೆ. ಇನ್ಮುಂದೆ ಇಂತಹ ಕೃತ್ಯಗಳು ಮರುಕಳುಹಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ಯುವಕರು ಡ್ರಗ್ಸ್‌ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಶೆಯಲ್ಲಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಇಡೀ ಸಮಾಜ ಖಂಡಿಸಬೇಕು. ಜತೆಗೆ ಮುಸ್ಲಿಂ ಸಮಾಜ ಮಾಡುತ್ತಿರುವ ಈ ಪ್ರತಿಭಟನೆಯು ಇಡೀ ಯುವ ಜನಾಂಗಕ್ಕೆ ಸಂದೇಶವಾಗಬೇಕು ಎಂದ ತಮಟಗಾರ, ಅಂಜುಮನ್‌ ಇಸ್ಲಾಂ ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಇಂತಹ ಅಪರಾಧಗಳು ಆಗದಂತೆ ಸಿಸಿ ಟಿವಿ, ಕಾವಲುಗಾರರ ನೇಮಿಸಿ ಎಚ್ಚರ ವಹಿಸಲಾಗುವುದು ಎಂದರು.

Advertisement

ನೇಹಾ ಘಟನೆ ನಂತರ ಜಸ್ಟಿಸ್‌ ಫಾರ್‌ ಲವ್‌ ಎಂದು ವಾಟ್ಸಪ್‌ ಸ್ಟೇಟಸ್‌ ಇಟ್ಟುಕೊಂಡ ಧಾರವಾಡದ ಮುಸ್ಲಿಂ ಸಮುದಾಯದ ಯುವಕರಿಬ್ಬರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಮಟಗಾರ, ಯಾವುದೇ ಸಮಾಜದಲ್ಲಿ ಕೆಲವು ಹುಳುಗಳು ಇರುತ್ತವೆ. ಸದ್ಯ ಇಡೀ ಸಮುದಾಯದ ದೃಷ್ಟಿಯಿಂದ ಸಂಸ್ಥೆಯ ಕಾರ್ಯ ಮಾಡುತ್ತಿದೆ. ವೈಯಕ್ತಿಕ ತಪ್ಪುಗಳಿಗೆ ಸಂಸ್ಥೆಯು ಜವಾಬ್ದಾರಿ ಆಗಲಾರದು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಸಂಸ್ಧೆಯ ಪದಾಧಿಕಾರಿಗಳಾದ ಬಶೀರ ಜಹಗೀರದಾರ, ಡಾ. ಖಾದೀರ, ಶಫಿ ಕಳ್ಳಿಮನಿ, ರಫೀಕ ಶಿರಹಟ್ಟಿ ಮತ್ತಿತರರು ಇದ್ದರು.

ಕೊಠಡಿಗೆ ನೇಹಾ ಹೆಸರು
ಫಯಾಜ್‌ನಿಂದ ಕೊಲೆಯಾದ ನೇಹಾ ಹೆಸರಿನಲ್ಲಿ ಅಂಜುಮನ್‌ ಶಿಕ್ಷಣ ಸಂಸ್ಥೆಯ ಕಾಲೇಜಿನ ಕೊಠಡಿಗೆ ಹೆಸರಿಡಲು ಸಂಸ್ಥೆಯು ತೀರ್ಮಾನಿಸಿದ್ದು, ಅವರ ಪಾಲಕರು ಈ ಕೊಠಡಿ ಉದ್ಘಾಟಿಸುವರು ಎಂದು ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next