ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿರುವ ಮುಸ್ಲಿಂ ನಾಯಕರು ಒಗ್ಗಟ್ಟಾಗಿದ್ದರೆ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಬಹುದಿತ್ತು ಎಂದು ಮುಸ್ಲಿಂ ನಾಯಕರು ಅಭಿಪ್ರಾಯಪಟ್ಟಿದ್ದು, ಈ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಮುಸ್ಲಿಂ ನಾಯಕರಿಗೆ ಉಪ ಮುಖ್ಯಮಂತ್ರಿ ನೀಡಬೇಕಿತ್ತು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಹೆಚ್ಚು ಕ್ಷೇತ್ರಗಳಿಗೆ ಟಿಕೆಟ್‌ಗೆ ಬೇಡಿಕೆ ಇಡುವ ಸಂಬಂಧ ನಗರದಲ್ಲಿ ಶನಿವಾರ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ, ನಮ್ಮೊಳಗಿನ ಕಚ್ಚಾಟದಿಂದ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತ ರರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.
ಸಚಿವರಾದ ಜಮೀರ್ ಅಹಮದ್, ಯು.ಟಿ. ಖಾದರ್, ಮಾಜಿ ಸಚಿವರಾದ ರೋಷನ್‌ಬೇಗ್, ನಸೀರ್ ಅಹಮದ್, ತನ್ವೀರ್ ಸೇs್, ಸಿ.ಎಂ.ಇಬ್ರಾಹಿಂ, ಸಲೀಂ ಆಹಮದ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ನೀವೆಲ್ಲಾ ಒಗ್ಗಟ್ಟಾಗಿ ಇಲ್ಲದಿದ್ದರೆ ಕಷ್ಟವಾಗುತ್ತದೆ. ನಿಮ್ಮಲ್ಲೇ ಕಾಲೆಳೆಯುವ ಪ್ರವೃತ್ತಿ ಬೇಡ ಎಂದು ನಾಯಕರ ವರ್ತನೆ ಬಗ್ಗೆ ಕಿಡಿ ಕಾರಿ ತಾಕೀತು ಮಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಜೆಡಿಎಸ್‌ನವರು ನಮ್ಮನ್ನು ನಂಬುತ್ತಿಲ್ಲ. ಆದರೆ, ನಮ್ಮ ಬೆಂಬಲ ಪಡೆದ ಕಾಂಗ್ರೆಸ್ ನಮ್ಮನ್ನು ಕಡೆಗಣಿಸಬಾರದು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಐದು ಕಡೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಡುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
ವಿವಿಧೆಡೆಯಿಂದ ಆಗಮಿಸಿದ್ದ ಮುಸ್ಲಿಂ ಸಮುದಾಯದ ಮುಖಂಡರು ಸಭೆಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದನೆ ಮಾಡಿದರು ಎಂದು ಹೇಳಲಾಗಿದೆ.