ಇಂದೋರ್(ಮಧ್ಯ ಪ್ರದೇಶ): ಹಿಂದೂ ಹುಡುಗನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ಡಿನ್ನರ್ ಗೆ ಹೋಗಿ ವಾಪಾಸ್ ಬರುವಾಗ ಗುಂಪೊಂದು ಅವರನ್ನು ತಡೆದು ಪ್ರಶ್ನೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಗುರುವಾರ ರಾತ್ರಿ ಮುಸ್ಲಿಂ ಹುಡುಗಿ, ಹಿಂದೂ ಯುವಕನ ಜೊತೆ ಹೊಟೇಲ್ ವೊಂದರಲ್ಲಿ ಊಟ ಮಾಡಿ ವಾಪಾಸ್ ಆಗುತ್ತಿರುವಾಗ ಯುವಕರ ಗುಂಪೊಂದು ಇಬ್ಬರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ಇಬ್ಬರನ್ನು ಸುತ್ತವರೆದು ಪ್ರಶ್ನೆ ಮಾಡುತ್ತಿರುವಾಗ ದಂಪತಿವೊಂದು ಬಂದು ಜನರಿಂದ ಅವರನ್ನು ರಕ್ಷಿಸುವ ಯತ್ನವನ್ನು ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಗುಂಪು ರಕ್ಷಣೆಗೆ ಬಂದ ದಂಪತಿ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರು ಹೇಳಿದ್ದಾರೆ.
ತನ್ನ ಪೋಷಕರಿಗೆ ಆತನೊಂದಿಗೆ ಊಟಕ್ಕೆ ಹೋಗುತ್ತೇನೆ ಎಂದು ಹೇಳಿಯೇ ಬಂದಿದ್ದೇನೆ ಎಂದು ಯುವತಿ ಹೇಳಿದ್ದು, ಈ ರೀತಿ ನೈತಿಕ ಪೊಲೀಸ್ ಗಿರಿಯನ್ನು ಯುವತಿ ಖಂಡಿಸಿದ್ದಾಳೆ.
ಸದ್ಯ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 7 ಆರೋಪಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪತ್ತೆಕಾರ್ಯ ಮುಂದುವರೆದಿದೆ ಎಂದು ವರದಿ ತಿಳಿಸಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸರಿಗೆ ಸೂಚಿಸಿದ್ದಾರೆ.