ಬೆಂಗಳೂರು: ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಆ ಸಮುದಾಯದ ಪ್ರಾಬಲ್ಯ ಇರುವ 40 ಕ್ಷೇತ್ರಗಳಲ್ಲಿ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂಗೆ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಕ್ಷೇತ್ರಗಳ ಹೊಣೆಗಾರಿಕೆ ನೀಡಲು ತೀರ್ಮಾನಿಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ವಿಶ್ವಾಸ ಮೂಡಿಸ ಬೇಕಿದೆ ಎಂಬ ಅಂಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿ.ಎಂ. ಇಬ್ರಾಹಿಂಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ 40 ಕ್ಷೇತ್ರಗಳಲ್ಲಿ ಸಭೆ ಹಾಗೂ ಇತರ ಕಾರ್ಯಕ್ರಮ ಆಯೋಜಿಸಲು ಸಿ.ಎಂ. ಇಬ್ರಾಹಿಂ, ಬಿ.ಎಂ. ಫಾರೂಕ್ ನೇತೃತ್ವದಲ್ಲಿ ತಂಡ ರಚನೆ, ಸಾಮಾಜಿಕ ಜಾಲತಾಣಗಳ ಮೂಲಕವೂ ಹೆಚ್ಚು ಆ ಸಮುದಾಯದ ಜನರ ತಲುಪಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಇದುವರೆಗೂ ಮುಸ್ಲಿಂ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಅವಕಾಶ ಇದ್ದಾಗ ಉಪ ಮುಖ್ಯಮಂತ್ರಿಯೂ ಮಾಡಲಿಲ್ಲ. ವಿಧಾನಪರಿಷತ್ ವಿಪಕ್ಷ ಸ್ಥಾನ ಕೊಡಲು ನಿರಾಕರಿಸಿತು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಉಪ ಮುಖ್ಯಮಂತ್ರಿಯ ಭರವಸೆ ಕೂಡ ಕೊಟ್ಟಿದೆ ಎಂದು ಸಮುದಾಯದ ವಿಶ್ವಾಸ ಗಳಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪರ ಯಾವೆಲ್ಲ ಕಾರ್ಯಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆಯೂ ಮುಖಂಡರ ಬಳಿ ಸಲಹೆ ಪಡೆದು ಅದನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.