Advertisement

ಮಸ್ಕಿ ತಾಲೂಕಿಗೂ ಸಿಬ್ಬಂದಿ-ಸೌಲಭ್ಯ ಕೊರತೆ

04:21 PM Feb 02, 2018 | |

ರಾಯಚೂರು: ಕಳೆದ ಬಜೆಟ್‌ನಲ್ಲಿ ತಾಲೂಕು ಪಟ್ಟ ಕಟ್ಟಿಕೊಂಡರೂ ಮಸ್ಕಿಯಲ್ಲಿ ಹೊಸ ಸೌಕರ್ಯಗಳೇನು ಸಿಕ್ಕಿಲ್ಲ. ಆದರೆ, ಅದಾಗಲೇ ವಿಶೇಷ ತಹಸೀಲ್ದಾರ್‌ ಕಚೇರಿ ಹೊಂದುವ ಮೂಲಕ ತಕ್ಕಮಟ್ಟಿಗೆ ಸುಧಾರಣೆ ಕಂಡಿದ್ದರಿಂದ ಹೆಚ್ಚಿನ ಸಮಸ್ಯೆಗಳೇನು ಇಲ್ಲ. ಜಿಲ್ಲೆಯಲ್ಲಿ ಅತೀ ದೊಡ್ಡ ಕ್ಷೇತ್ರ ಎಂಬ ಹಿರಿಮೆ ಮಸ್ಕಿ ಕ್ಷೇತ್ರದ್ದು. ಈ ಕಾರಣಕ್ಕೋ ಅಥವಾ ಅಲ್ಲಿನ ಶಾಸಕರ ಆಸಕ್ತಿಯಿಂದಲೋ ತಾಲೂಕು ಘೋಷಣೆಗೆ ಮುಂಚೆಯೇ ಅಲ್ಲಿ ವಿಶೇಷ ತಹಶೀಲ್ದಾರ್‌ ಕಚೇರಿ ಮಂಜೂರಾಗಿತ್ತು. ಅದಕ್ಕಾಗಿ ಒಂದು ಕೋಟಿ ರೂ. ವೆಚ್ಚದ
ಕಟ್ಟಡ ನಿರ್ಮಾಣಗೊಂಡಿತ್ತು. ಹೀಗಾಗಿ ಕಳೆದ ವರ್ಷ ತಾಲೂಕು ಘೋಷಣೆಯಾಗುತ್ತಿದ್ದಂತೆ ವಿಶೇಷ ತಹಶೀಲ್ದಾರ್‌ ಕಚೇರಿಯನ್ನೇ ಉನ್ನತೀಕರಿಸಲಾಯಿತು. ಅದರ ಜತೆಗೆ ಒಂದು ಕೋಟಿ ರೂ. ವೆಚ್ಚದ ವಾಲ್ಮೀಕಿ ಭವನವನ್ನು ತಾಲೂಕು ಪಂಚಾಯಿತಿ ಆಡಳಿತಕ್ಕೆ ತಾತ್ಕಾಲಿಕವಾಗಿ ನೀಡಲಾಗಿದೆ. ಆದರೆ, ನೂತನ ತಾಲೂಕು ಸಿರವಾರದಲ್ಲಿರುವಂತೆ ಇಲ್ಲೂ ಕಾಯಂ ಸಿಬ್ಬಂದಿಗಳಾಗಲಿ, ಇಲಾಖೆಗಳಿಗೆ ಸುಸಜ್ಜಿತ ಕಟ್ಟಡವಾಗಲಿ ಇಲ್ಲ. ವಿಶೇಷ ತಹಶೀಲ್ದಾರ್‌ ಬಿಟ್ಟರೆ ಉಳಿದೆಲ್ಲ ಅಧಿಕಾರಿಗಳನ್ನು ಸಿಂಧನೂರು ಮತ್ತು ಲಿಂಗಸುಗೂರಿನಿಂದ ಪ್ರಭಾರರನ್ನಾಗಿ ನಿಯೋಜಿಸಲಾಗಿದೆ. ನೀರಾವರಿ ಇಲಾಖೆಯ ವಸತಿ ಗೃಹಗಳಿಗೆ ಸುಣ್ಣ ಬಣ್ಣ ಬಳಿದು ಕಚೇರಿಗಳನ್ನಾಗಿ ಬಳಸಲಾಗುತ್ತಿದೆ. ಐದೂವರೆ ಎಕರೆ ಸ್ಥಳ ಗುರುತು: ತಾಲೂಕು ಘೋಷಣೆಯಾಗುತ್ತಿದ್ದಂತೆ ಸ್ಥಳೀಯ ಶಾಸಕ ಪ್ರತಾಪಗೌಡ ಪಾಟೀಲ್‌ ಆಡಳಿತಕ್ಕೆ ಬೇಕಾದ ಕಾರ್ಯಚಟುವಟಿಕೆ ಕೈಗೊಂಡಿದ್ದಾರೆ. ನೀರಾವರಿ ಇಲಾಖೆಯ ಐದೂವರೆ ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 123 ಹಳ್ಳಿಗಳನ್ನೊಳಗೊಂಡ ತಾಲೂಕಿಗೆ ಬೇಕಾದ ಸ್ವಂತ ಕಟ್ಟಡಗಳಿಲ್ಲ ಎನ್ನುವುದು ಸತ್ಯ. ಒಂದು ವೇಳೆ ನಿಗದಿತ ಸ್ಥಳದಲ್ಲಿ ತಾಲೂಕು ಕಚೇರಿ ನಿರ್ಮಿಸಿದಲ್ಲಿ ಕಚೇರಿ ಸಮಸ್ಯೆ ನೀಗಲಿದೆ.

Advertisement

ಗಡಿ ಸಮಸ್ಯೆ: ಸಿರವಾರ ತಾಲೂಕಿನಲ್ಲಿ ಉಲ್ಬಣಿಸಿದ ಗಡಿ ಸಮಸ್ಯೆ ಇಲ್ಲೂ ಇದೆ. ಸಿಂಧನೂರು, ಮಾನ್ವಿ ಹಾಗೂ ಲಿಂಗಸುಗೂರು
ತಾಲೂಕುಗಳ ಗ್ರಾಮಗಳು ಸೇರಿ ಮಸ್ಕಿ ತಾಲೂಕಾಗಿದೆ. ಆದರೆ, ಈ ಮುಂಚೆಯೇ ಇದು ವಿಧಾನಸಭೆ ಕ್ಷೇತ್ರವಾಗಿದ್ದರಿಂದ ಗ್ರಾಮಗಳ
ಸೇರ್ಪಡೆ ಅಷ್ಟೇನು ಕಷ್ಟವಾಗಿಲ್ಲ. ಆದರೆ, ಲಿಂಗಸುಗೂರು ಶಾಸಕರಾಗಿದ್ದ ಮಾನಪ್ಪ ವಜ್ಜಲ್‌ 20 ಹಳ್ಳಿಗಳನ್ನು ಲಿಂಗಸುಗೂರಿಗೆ
ಸೇರಿಸಬೇಕು ಎಂಬ ಒತ್ತಾಯ ಮಾಡಿದ್ದರು. ಇದರಿಂದ ಮಸ್ಕಿಗೆ ಸೇರಿಸಿದ್ದ ನಾಗಲಾಪುರ, ಹುನೂರು, ಸರ್ಜಾಪುರ ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮಗಳನ್ನು ಕೈಬಿಡಲಾಯಿತು. ಸಿಂಧನೂರು ತಾಲೂಕಿನ ಐದು ಗ್ರಾಮ ಪಂಚಾಯತಿಗಳ 20 ಗ್ರಾಮಗಳು ಹಾಗೂ ಒಂದು ಪಟ್ಟಣ ಪಂಚಾಯತಿ ಮಸ್ಕಿ ತಾಲೂಕಿಗೆ ಸೇರಿದೆ. ಗುಂಡಾ ಗ್ರಾಪಂ ಹಳ್ಳಿಗಳ ಜನ ಹೋಬಳಿ ಬದಲಾಗುವುದರಿಂದ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಮಸ್ಕಿಗೆ ಸೇರಲು ಒಪ್ಪಿಲ್ಲ. ಆಕ್ಷೇಪಣೆ ಸಲ್ಲಿಸಿದ್ದರಾದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಇಲ್ಲೂ ಗಡಿ ಗ್ರಾಮಗಳಿಗೆ ತೊಂದರೆ ತಪ್ಪಿದ್ದಲ್ಲ. ಸಿಬ್ಬಂದಿಗಳಿಲ್ಲ: ವಿಶೇಷ ತಹಶೀಲ್ದಾರ್‌, ಕಂದಾಯ ಇಲಾಖೆ, ಜೆಸ್ಕಾಂ ಹೊರತಾಗಿಸಿ ಉಳಿದೆಲ್ಲ ಹುದ್ದೆಗಳು ಖಾಲಿ ಇವೆ.

 ಸಿಂಧನೂರು ಮತ್ತು ಲಿಂಗಸುಗೂರು ತಾಲೂಕುಗಳು ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಅ ಧಿಕಾರಿಗಳು ಎರಡು ಕಡೆ ಕರ್ತವ್ಯ ನಿರ್ವಹಿಸುವುದು ಕಷ್ಟದ ಕೆಲಸ. ಹೀಗಾಗಿ ಯಾವಾಗ ಕಚೇರಿಯಲ್ಲಿ ಸಿಗುತ್ತಾರೋ ಎಂಬ ಗೊಂದಲದಲ್ಲಿ ಜನ ಅಲೆಯುವಂತಾಗಲಿದೆ. ಅಲ್ಲದೇ, ಪ್ರತ್ಯೇಕ ತಾಲೂಕು ಆಡಳಿತ ಭವನ ನಿರ್ಮಿಸುವವರೆಗೆ ಈ ಸಮಸ್ಯೆ ಮುಂದುವರಿಯದೆ ವಿ ಧಿಯಿಲ್ಲ

ಮಸ್ಕಿ ನೂತನ ತಾಲೂಕು ಆಡಳಿತ ಭವನ ನಿರ್ಮಿಸಲು ಈಗಾಗಲೇ ಸ್ಥಳ ನಿಗದಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಾವರಿ ಇಲಾಖೆಯ ಐದೂವರೆ ಎಕರೆ ಜಾಗ ನೀಡಲಾಗಿದೆ. ಸರ್ಕಾರ ಇಷ್ಟೊತ್ತಿಗಾಗಲೇ ಇಲಾಖೆಗಳಿಗೆ ಸಿಬ್ಬಂದಿಯನ್ನು
ನೇಮಿಸಬೇಕಿತ್ತು. ಯಾವುದೇ ಹಣಕಾಸಿನ ನೆರವು ಸಿಕ್ಕಿಲ್ಲ. ಈ ಬಾರಿ ಬಜೆಟ್‌ನಲ್ಲಿ ಹಣ ನೀಡುವ ನಿರೀಕ್ಷೆಯಿದೆ. ನೂತನ
ತಾಲೂಕಿಗೆ ಕನಿಷ್ಠ 20 ಕೋಟಿ ರೂ. ಹಣವಾದರೂ ಬೇಕು. 
 ಪ್ರತಾಪಗೌಡ ಪಾಟೀಲ್‌, ಮಸ್ಕಿ ಶಾಸಕರು.

ಕಳೆದ ಬಜೆಟ್‌ನಲ್ಲಿಯೇ ತಾಲೂಕು ಘೋಷಣೆಯಾಗಿದ್ದರಿಂದ ಈ ವೇಳೆಗಾಗಲೇ ಸರ್ಕಾರ ಎಲ್ಲ ಸೌಲಭ್ಯ ಕಲ್ಪಿಸಬೇಕಿತ್ತು. ಆದರೆ, ಚುನಾವಣೆ ಹೊಸ್ತಿಲಲ್ಲಿ ಚಟುವಟಿಕೆ ಚುರುಕುಗೊಳಿಸಿರುವುದು ಸರಿಯಲ್ಲ. ಕಚೇರಿಗಳಿಗೆ ಸ್ವಂತ ಕಟ್ಟಡಗಳಾಗಲಿ, ಕಾಯಂ ಸಿಬ್ಬಂದಿಯಾಗಲಿ ಇಲ್ಲ. ಇನ್ನಾದರೂ ಶೀಘ್ರದಲ್ಲೇ ಸೌಲಭ್ಯ ಕಲ್ಪಿಸಬೇಕು.
 ಅಬ್ದುಲ್‌ ಗನಿ, ಪ್ರಗತಿಪರ ಚಿಂತಕ, ಮಸ್ಕಿ

Advertisement

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next