ಮಸ್ಕಿ: ಎರಡನೇ ಶ್ರೀ ಶೈಲ ಎಂದು ಪ್ರಸಿದ್ದಿ ಪಡೆದ ಕಲ್ಯಾಣ ಕರ್ನಾಟಕದ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವವು ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಜಾತ್ರೆ ನಿಮಿತ್ತ ಬೆಳಗ್ಗೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಶ್ವರ ಲಿಂಗಕ್ಕೆ ಮಹಾ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ರಥದ ಕಳಸಾರೋಹಣ ನಡೆಸಲಾಯಿತು. ಬೆಳಗ್ಗೆ ೧೧ ಗಂಟೆಗೆ ೧೨೦ ವರ್ಷಗಳಿಗೂ ಪುರಾತನ ಇತಿಹಾಸವಿರುವ ರಥವನ್ನು ಎಳೆದು ಭಕ್ತರು ಭಕ್ತಿ ಸಮರ್ಪಿಸಿದರು.
ಬಳಿಕ ಸಂಜೆ 5.೩೦ ಗಂಟೆಗೆ ಪಲ್ಲಕ್ಕಿಯಲ್ಲಿ ಮಲ್ಲಿಕರ್ಜುನನ ಉತ್ಸವ ಮೂರ್ತಿಯನ್ನು ನೂತನ ರಥದ ಸುತ್ತ ಐದು ಭಾರಿ ಪ್ರದಕ್ಷಣೆ ಹಾಕಿದ ನಂತರ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಮಸ್ಕಿಯ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು,ಕೊಪ್ಪಳದ ಅಭಿನವ ಗವಿಶ್ರೀಗಳು ನೂತನವಾಗಿ ನಿರ್ಮಾಣಗೊಂಡ ರಥಕ್ಕೆ ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಭಕ್ತರು ಉತ್ತುತ್ತಿ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ದೈವದ ಕಟ್ಟೆವರೆಗೆ ರಥ ಎಳೆದು ವಾಪಾಸು ದೇವಸ್ಥಾನದ ಮುಂಭಾಗಕ್ಕೆ ತರಲಾಯಿತು. ಭೋವಿ (ವಡ್ಡರ್) ಸಮಾಜದ ಅನೇಕ ಯುವಕರು ಇಡೀ ದಿನ ಉಪವಾಸ ಹಾಗೂ ಮಡಿವಂತಿಕೆಯಿಂದ ತೆರಿನ ಕೆಳಗೆ ಇದ್ದು ರಥಕ್ಕೆ ಸೊನ್ನೆ ಹಾಕುವ ಮೂಲಕ ರಥೋತ್ಸವದ ಯಶಸ್ವಿಗೆ ಕಾರಣರಾದರು.
ರಥೋತ್ಸವದಲ್ಲಿ ಸಂಸದ ಸಂಗಣ್ಣ ಕರಡಿ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ರಾಜಶೇಖರ ಹಿಟ್ನಾಳ, ಮಹಾದೇವಪ್ಪಗೌಡ ಪಾಟೀಲ್, ಸಿದ್ದನಗೌಡ ತುರುವಿಹಾಳ ದೇವಸ್ಥಾನ ಸಮಿತಿ ಸದಸ್ಯರು,ಮುಖಂಡರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಅದ್ಧೂರಿ ಜಾತ್ರೆಯ ಯಶಸ್ಸಿಗೆ ಸಾಕ್ಷಿಯಾದರು. ಸರ್ಕಲ್ ಇನ್ ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಕಿ, ಪಿಎಸ್ಐ ವೈಶಾಲಿ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.