ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ನ್ಯೂರೋಲಿಂಕ್ ಸಂಸ್ಥೆ, ಮಾನವರ ಮೆದುಳಿಗೆ ಚಿಪ್ ಅಳವಡಿಸುವ ಪ್ರಯೋಗಕ್ಕೆ ಮುಂದಾಗಿದ್ದು, ಮುಂದಿನ ಆರು ತಿಂಗಳ ಒಳಗೆ ಈ ಪ್ರಯೋಗ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಈ ಕುರಿತು ಘೋಷಣೆ ಮಾಡಿರುವ ಎಲಾನ್ ಮಸ್ಕ್, ತಾವು ಕೂಡ ಮೆದುಳಿಗೆ ವೈರ್‌ಲೆಸ್ ಚಿಪ್ ಅಳವಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಪ್ರಯೋಗ ಯಶಸ್ವಿಯಾದರೆ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಪಾರ್ಕಿನ್ಸನ್ಸ್ ರೋಗದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ. ಜತೆಗೆ ಮೆದುಳಿನಲ್ಲಿ ನಿಷ್ಕ್ರಿಯವಾಗಿರುವ ಭಾಗವನ್ನು ಚಿಪ್ ಸಹಾಯದಿಂದ ಉತ್ತೇಜಿಸುವ ಮೂಲಕ ನರರೋಗ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ ಹಾಗೂ ಚಲನೆ ಮತ್ತು ಮೌಖೀಕ ಸಂವಹನ ಸಾಧ್ಯವಾಗಲಿದೆ ಎನ್ನಲಾಗಿದೆ.
“ಪಸ್ತುತ ಚಿಪ್ ಮಾರಾಟ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಇಲಾಖೆಯಿಂದ ಕಂಪನಿಗೆ ಅನುಮತಿ ಇಲ್ಲ. ಆದರೆ ಮಾನವನ ದೇಹಕ್ಕೆ ಚಿಪ್ ಅಳವಡಿಸಲು ಅನುಮತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕೆಲಸಗಳು ಪೂರ್ಣಗೊಂಡಿದೆ,’ ಎಂದು ಮಸ್ಕ್ ತಿಳಿಸಿದ್ದಾರೆ.