Advertisement

ಸಂಗೀತ ಪ್ರಕಾರಗಳು ಮೂಲದಲ್ಲಿ ಬೀಜರೂಪದಲ್ಲಿದ್ದಿರಬಹುದು

01:51 AM Oct 18, 2020 | sudhir |

ಸಂಗೀತ ಭಕ್ತಿಮಾರ್ಗವನ್ನು ಅವಲಂಬಿಸಿದೆಯೋ? ಭಕ್ತಿ ಮಾರ್ಗಕ್ಕಾಗಿ ಸಂಗೀತ ಹುಟ್ಟಿಕೊಂಡಿತೋ? ಎನ್ನುವುದಕ್ಕಿಂತ ಇವೆರಡೂ ಒಂದಕ್ಕೊಂದು ಪೂರಕ, ಸಂಗೀತಕ್ಕೆ ಜಾತಿ ಇಲ್ಲ ಎಂದು ಹಿಂದೂಸ್ಥಾನೀ ಸಂಗೀತದಲ್ಲಿ ದಿಗ್ಗಜರೆನಿಸಿದ ಪಂಡಿತ್‌ ಜಯತೀರ್ಥ ಮೇವುಂಡಿ ಪ್ರತಿಪಾದಿಸುತ್ತಾರೆ. ಅವರು ಅಧಿಕ ಮಾಸದ ಏಕಾದಶಿ ಜಾಗರಣೆ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಗೀತ ಸೇವೆಯನ್ನು ನಡೆಸಿಕೊಡಲು ಬಂದ ಸಂದರ್ಭ “ಉದಯವಾಣಿ’ ಜತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

-ಅಧಿಕ ಮಾಸದ ಏಕಾದಶಿಯಂದು ಸಂಗೀತ ಸೇವೆ ಸಲ್ಲಿಸಲು ಏಕೆ ಆಯ್ದುಕೊಂಡಿರಿ? ಈ ಹಿಂದೆ ಬೇರೆಡೆ ಇಂತಹ ಸಂಗೀತ ಸೇವೆ ಮಾಡಿದ್ದೀರಾ?
ಅಧಿಕ ಮಾಸದಲ್ಲಿ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೆ ಅಧಿಕ ಫ‌ಲವಿದೆ ಎಂಬ ನಂಬಿಕೆ ಇದೆ. ನನ್ನ ಕಾರ್ಯಕ್ಷೇತ್ರ ಸಂಗೀತವಾ ದ್ದರಿಂದ ಅಧಿಕ ಮಾಸವನ್ನು ಆಯ್ದುಕೊಂಡೆ. ಇತ್ತೀಚಿಗೆ ಪಂಢರಪುರಕ್ಕೂ ಹೋಗಿದ್ದೆ. ಅಲ್ಲಿ ಇನ್ನೂ ದೇವಸ್ಥಾನವನ್ನು ತೆರೆದಿಲ್ಲ. ನಾನು ಒಬ್ಬನೇ ಒಂದೆರಡು ಅಭಂಗಗಳನ್ನು ಹಾಡಿದೆ. ಹೋದ ತಿಂಗಳು ಉಡುಪಿಗೆ ಬಂದಾಗ ಪರ್ಯಾಯ ಸ್ವಾಮೀಜಿಯವರು ದೇವರನಾ ಮಗಳನ್ನು ಹಾಡಲು ಹೇಳಿದ್ದರು. ಸಾಥ್‌ ಸಹಿತವಾಗಿ ದೇವರ ಸೇವೆಯನ್ನು ಮಾಡೋಣ ವೆಂದು ಶುಭಕರವಾದ ಏಕಾದಶಿಯಂದು ಆಯ್ದುಕೊಂಡೆ. ನಾನು ದಿಲ್ಲಿ, ಮುಂಬಯಿ, ಕೋಲ್ಕತಾ ಮೊದಲಾದೆಡೆ ಕಾರ್ಯಕ್ರಮ ನೀಡಬಹುದು, ಆದರೆ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ, ಸ್ವಾಮೀಜಿ ಸಮ್ಮುಖದಲ್ಲಿ ಹಾಡುವ ಸುಖ ಇನ್ನೆಲ್ಲಿಯೂ ಸಿಗದು. ಇಲ್ಲಿ ಪಾಸಿಟಿವ್‌ ಎನರ್ಜಿ ಇರುತ್ತದೆ. ಬೇರೆ ಸಮಯ ದಲ್ಲಿಯಾದರೂ ಜನಜಂಗುಳಿ ಇರುತ್ತದೆ. ಯಾವುದೇ ಫ‌ಲಾಪೇಕ್ಷೆ ಇಲ್ಲದೆ ಭಗವಂತನ ಸೇವೆ ಸಲ್ಲಿಸಿರುವುದು ನನಗೆ ಸಂತೃಪ್ತಿ ನೀಡಿದೆ.

– ನೀವು ತಾಯಿಯಿಂದ ಪ್ರೇರಣೆ ಹೊಂದಿದ್ದೀರಿ? ಅದಕ್ಕೂ ಹಿಂದಿನ ನಿಮ್ಮ ವಂಶಾವಳಿಯಲ್ಲಿ ಸಂಗೀತ ಪರಂಪರೆ ಇತ್ತೇ?
ಅಮ್ಮ ಸುಧಾಬಾಯಿ ಮೇವುಂಡಿ ಅವರು ಸಂಗೀತ ಕಛೇರಿಗಳಿಗೆ ನನ್ನನ್ನು ಕರೆದೊಯ್ಯು ತ್ತಿದ್ದರು. ಅವರೇ ನನಗೆ ಸಂಗೀತ ಗುರುಗಳು. ನಮ್ಮ ಹಿಂದಿನ ತಲೆಮಾರಿನವರು ಯತಿಗಳು, ದಾಸರು ಆಗಿ ಹೋಗಿದ್ದರು. ಅವರೆಲ್ಲರ ಆಶೀರ್ವಾದದಿಂದಲೇ ನನಗೆ ಹಾಡುವ ಕಲೆ ಪ್ರಾಪ್ತಿಯಾಗಿದೆ ಎಂದು ಭಾವಿಸುತ್ತೇನೆ.

– ಸಂಗೀತವನ್ನು ಭಕ್ತಿ ಮಾರ್ಗ ಅವಲಂಬಿಸಿದೆಯೋ? ಭಕ್ತಿ ಮಾರ್ಗಕ್ಕಾಗಿ ಸಂಗೀತ ಉದಿಸಿತೋ?
ಸಂಗೀತವೆನ್ನುವುದು ದೇವರ ಕೊಡುಗೆ (ಗಾಡ್‌ ಗಿಫ್ಟ್). ಆದ್ದರಿಂದಲೇ ಎಲ್ಲರಿಗೂ ದಕ್ಕು ವುದಿಲ್ಲ. ದೇವರ ಆಶೀರ್ವಾದ
ಬೇಕೇ ಬೇಕು. ದೇವರ ಕೊಡುಗೆ ಇರುವುದರಿಂದ ಭಕ್ತಿಯ ಪಾತ್ರ ಇದ್ದೇ ಇದೆ. ಏನಿದ್ದರೂ ಸಂಗೀತವೂ ಆಧ್ಯಾತ್ಮವೂ ಒಂದಕ್ಕೊಂದು ಪೂರಕ.

– ಈಗ ಹಿಂದೂಸ್ಥಾನೀ (ಉತ್ತರಾದಿ), ಕರ್ಣಾಟಕೀ (ದಕ್ಷಿಣಾದಿ) ಸಂಗೀತ ಪ್ರಕಾರಗಳು ಬರುವ ಮುನ್ನ ಇದ್ದ ಸಂಗೀತ ಪರಂಪರೆ ಏನು?
ಸುಮಾರು 900 ವರ್ಷಗಳ ಹಿಂದೆ ದೇಸೀ ಸಂಗೀತ ಎಂದಿತ್ತು. ಅದನ್ನು ದ್ರುಪದ್‌ ಸಂಗೀತ ಎನ್ನುತ್ತಿದ್ದರು. ಉತ್ತರ ಭಾಗದಲ್ಲಿದ್ದ ಕಾರಣ ಉತ್ತರಾದಿ ಸಂಗೀತವೆನ್ನುತ್ತಿದ್ದರು. ಮುಸ್ಲಿಮರು ಬಂದ ಬಳಿಕ ಕವಾಲಿ (ಖಯ್ನಾಲ್‌) ಪರಂಪರೆ ಮುಂದುವರಿಯಿತು. ಆಗ ಹಿಂದೂಸ್ಥಾನೀ ಸಂಗೀತ ಎಂಬ ಹೆಸರು ಬಂತು. ಖಯ್ನಾಲ್‌ ಅಂದರೆ ವಿಚಾರ ಮಾಡಿ ಹಾಡುವುದು. ಕರ್ಣಾಟಕೀ ಸಂಗೀತಕ್ಕೂ ಬಹಳ ಸುದೀರ್ಘ‌ ಇತಿಹಾಸವಿದೆ.

Advertisement

– ದಕ್ಷಿಣಾದಿ ಸಂಗೀತದಲ್ಲಿ ಭಕ್ತಿಯ ಪ್ರಾಧಾನ್ಯವಿದ್ದಂತೆ ಹಿಂದೂಸ್ಥಾನೀ ಸಂಗೀತದಲ್ಲಿಯೂ ಇದೆಯೆ?
ಕರ್ಣಾಟಕೀ ಸಂಗೀತದಲ್ಲಿ ಕೀರ್ತನೆ/ರಚನೆ ಎಂದು ಕರೆದರೆ, ಹಿಂದೂಸ್ಥಾನೀ ಸಂಗೀತದಲ್ಲಿ ಬಂಧೀಶ್‌ ಎನ್ನುತ್ತೇವೆ. ಹಿಂದೀ ಭಜನ್‌, ಮರಾಠಿ ಅಭಂಗ್‌ಗಳು ಸಾಕಷ್ಟು ಇವೆ. ದ್ರುಪದ್‌ ಸಂಗೀತ ಪರಂಪರೆಯಲ್ಲಿಯೂ ಹೀಗೆ ಇದೆ. ಡಿವೈನಿಟಿ ಇರುವುದರಿಂದಲೇ ಹಿಂದೂಸ್ಥಾನೀ ಗಾಯಕ ಅಬ್ದುಲ್‌ ಕರೀಂ ಖಾನ್‌ ಕರ್ಣಾಟಕ ಸಂಗೀತಕ್ಕೆ ಒಲವು ತೋರಿದ್ದರು. ಅಕºರ್‌ ಆಸ್ಥಾನದಲ್ಲಿದ್ದ ಅದಾರಂಗ್‌-ಸದಾರಂಗ್‌ ಅವರು ಭಕ್ತಿ ಮತ್ತು ಶೃಂಗಾರ ಪ್ರಾಧ್ಯಾನ್ಯ ಬಂಧೀ ಶ್‌ಗಳನ್ನು ರಚಿಸಿದ್ದಾರೆ. ಮುಸ್ಲಿಂ ಕವಿಗಳು ಹಿಂದೂ ದೇವತೆಗಳು ಮತ್ತು ಅಲ್ಲಾನ ಕುರಿತೂ ಬಂಧೀಶ್‌ಗಳನ್ನು ರಚಿಸಿದ್ದಾರೆ. ಉರ್ದುವೂ ಅಲ್ಲದ, ಹಿಂದಿಯೂ ಅಲ್ಲದ ಪಾರ್ಸಿಯ ಲ್ಲಿರುವ ಅಮೀರ್‌ ಖುಸ್ರೋರಂತಹವರ ಬಂಧೀಶ್‌ಗಳನ್ನೂ (ರೊಮ್ಯಾನ್ಸ್‌ = ಶೃಂಗಾರ ಸಾಹಿತ್ಯ) ಹಾಡುತ್ತೇವೆ.

– ಜಾನಪದ ಸಂಗೀತ, ಯಕ್ಷಗಾನ ಸಂಗೀತ, ಸುಗಮ ಸಂಗೀತ, ಸಿನೆಮಾ ಸಂಗೀತ.. ಹೀಗೆ ನಾನಾ ಪ್ರಕಾರಗಳು ಹುಟ್ಟುವ ಮೊದಲು ಇವೆಲ್ಲವು ಬೀಜರೂಪದಲ್ಲಿ ಮೂಲ ಸಂಗೀತದಲ್ಲಿದ್ದಿರಬಹುದೆ?
ಈ ಸಾಧ್ಯತೆಗಳಿವೆ. ಎಲ್ಲ ಪ್ರಕಾರದ ಸಂಗೀತಗಳಿಗೂ ಅವುಗಳದ್ದೇ ಆದ ಮಹತ್ವ ಇದೆ. ಜಾನಪದ ಸಂಗೀತವಿರುವ ಹಳ್ಳಿಗಳಿಗೆ ಹೋದರೆ ಅಲ್ಲಿ ಶಬ್ದ ಪ್ರಾಧಾನ್ಯ (ಸಾಹಿತ್ಯ) ಇರುತ್ತದೆ. ಜನಪದವಾಗಲೀ, ಯಕ್ಷಗಾನವಾ ಗಲೀ ಭಗವದ್ಭಕ್ತಿಯನ್ನೇ ಸಾರುತ್ತವೆ. ಪಾಶ್ಚಾತ್ಯ ಸಂಗೀತ ಪ್ರಕಾರದವರೂ “ಗಾಡ್ಸ್‌ ಗ್ರೇಸ್‌’, ಮುಸ್ಲಿಮರು “ಅಲ್ಲಾ’ ಎನ್ನಬಹುದು, ಯಾರು ಏನೇ ಹಾಡಿದರೂ ದೇವರಿಗೆ ಶರಣಾಗುವ ಆಂತರ್ಯವಿದೆ. ಸಂಗೀತಕ್ಕೆ ಜಾತಿ ಇಲ್ಲ.

 ಸಂಗೀತವನ್ನು ಸಂಸ್ಕೃತಿ ಎಂದು ಜಾತ್ಯತೀತವಾಗಿ ವ್ಯಾಖ್ಯಾನಿಸಲಾಗುತ್ತದೆ, ಭಕ್ತಿಯ ವಿಷಯ ಬರುವಾಗ ಅದು ಧಾರ್ಮಿಕವಾಗುತ್ತದೆ. ಇದಕ್ಕೆ ಏನಂತೀರಿ?
“ಸಂಸ್ಕೃತಿ’ ಅಂದರೆ (“ಸಂ’= ಒಳ್ಳೆಯ, “ಕೃತಿ’= ಕಾರ್ಯ) ಒಳ್ಳೆಯ ಕೆಲಸ. ಸಂಗೀತವೂ ಇದೇ ಆಗಿದೆ. ಇದರಲ್ಲಿ ಕೆಟ್ಟದ್ದೇನಿದೆ?

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next