ಬೀದರ: ಕೃತಿ ಮತ್ತು ಶ್ರುತಿ ಸೇರಿದಾಗ ಸಂಸ್ಕೃತಿ ಹೊರಹೊಮ್ಮುತ್ತದೆ. ಸಾಹಿತ್ಯ, ಸಂಗೀತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪಂ| ಪುಟ್ಟರಾಜ ಗವಾಯಿಗಳ ಸಂಗೀತ ಸೇವೆ ಅಪ್ರತಿಮ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ನುಡಿದರು. ನಗರದ ಬಸವ ಕೇಂದ್ರದಲ್ಲಿ ಗಾನಯೋಗಿ ಸಂಗೀತ ಪರಿಷತ್ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರ ಬಾಳಿಗೆ ಸಂಗೀತ ಜೀವ ನೀಡಿದೆ. ಭಿಕ್ಷೆ ಬೇಡುವ ಅನೇಕರಿಗೆ ಸಂಗೀತ ಶಿಕ್ಷಣ ನೀಡಿ ಬಾಳಿಗೊಂದು ಬೆಳಕು ನೀಡಿರುವ ಏಕೈಕ ಸಂಸ್ಥೆ ಗದುಗಿನ ಪುಣ್ಯಾಶ್ರಮ. ಭಾಷಣ, ಉಪನ್ಯಾಸ ಸಾಕೆನಿಸಬಹುದು. ಆದರೆ ಸಂಗೀತ ಮಾತ್ರ ಬೇಕೇ ಬೇಕೆನಿಸುತ್ತದೆ. ಸಂಗೀತಕ್ಕೆ ಮನಸ್ಸು ಶಾಂತಗೊಳಿಸುವ ಶಕ್ತಿ ಇದೆ ಎಂದರು.
ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಸಂಗೀತ ಮಾನಸಿಕ ನೆಮ್ಮದಿಗೆ ಮಹಾ ಔಷಧ. ಜೀವನದಲ್ಲಿ ಸಂಕಷ್ಟ, ಬೇಜಾರು ಎದುರಿಸುವಾಗ ಸಂಗೀತಕ್ಕೆ ಮೊರೆ ಹೋಗುತ್ತಾರೆ. ಸಂಗೀತ ಇರುವ ಮನೆ ನೆಮ್ಮದಿಯ ತಾಣ ಎಂದು ಹೇಳಿದರು.
ಹುಲಸೂರಿನ ಡಾ| ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಪುಟ್ಟರಾಜ ಗವಾಯಿಗಳು ಜನ್ಮ ತಾಳದಿದ್ದರೆ ವಿಕಲಚೇತನರ ಬಾಳು ಶಾಶ್ವತವಾಗಿ ಕತ್ತಲಾಗಿರುತಿತ್ತು. ಜಿಲ್ಲೆಯಲ್ಲಿಯೂ ಅನೇಕ ಕಲಾವಿದರು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ಸಂಗೀತ ನಿಗಮ ಮಂಡಳಿ ಸ್ಥಾಪಿಸಿ ಸಂಗೀತ ಕಲಿತ ಅಂಧರ ಮತ್ತು ಅಂಗವಿಕಲರೂ ಉನ್ನತ ಸ್ಥಾನಕ್ಕೆ ಬರುವ ಹಾಗೆ ಚಿಂತನೆ ಮಾಡಲು ಸಲಹೆ ನೀಡಿದರು.
ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಶಿವಸ್ವಾಮಿ ಚೀನಕೇರಿ ಅಧ್ಯಕ್ಷತೆ ವಹಿಸಿ, ಅಂಧರಿಗೆ ಸಂಗೀತ ಆರ್ಥಿಕ ಸದೃಢತೆ ನೀಡಬಲ್ಲದು. ಸಂಗೀತದಿಂದ ಮದವೇರಿದ ಆನೆಯೂ ಸಹ ಶಾಂತವಾಗುವುದು. ಸಂಗೀತದಿಂದ ತಲ್ಲಣಗೊಂಡಿರುವ ಮನಸ್ಸಿಗೆ ಮುದ ನೀಡಿ ಶಾಂತಚಿತ್ತಗೊಳಿಸುವ ಅತ್ಯದ್ಭುತ ಶಕ್ತಿ ಇದೆ. ಪರಿಷತ್ ಮುಂದಿನ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಿದೆ ಎಂದು ತಿಳಿಸಿದರು.
ಸರ್ಕಾರಿ ಐಟಿಐ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಇನ್ನಿತರರು ಇದ್ದರು. ನವಲಿಂಗ ಪಾಟೀಲ ಪ್ರಸ್ತಾವಿಕ ಮಾತನಾಡಿದರು. ಜಗನ್ನಾಥ ನಾನಕೇರಿ,
ವಿಶ್ವೇಶ್ವರ್ ಹಿರೇಮಠ, ಸಂತೋಷ ಕಾಮಶೆಟ್ಟಿ, ಜನಾರ್ಧನ ವಾಘಮಾರೆ, ಶಿವಲಿಂಗ ಎರಗಲ್, ಚನ್ನಬಸಪ್ಪ ನೌಬಾದೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪರಿಷತ್ ತಾಲೂಕು ಘಟಕ ರಚಿಸಿ ಮಹೇಶ ಮಜಗೆ ಅವರನ್ನು ನೇಮಿಸಲಾಯಿತು.