ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಸಂಗೀತ ಕ್ಷೇತ್ರದ ಸಾಧಕರನ್ನು ಸರ್ಕಾರ ಕಡೆಗಣನೆ ಮಾಡಿದೆ ಎಂದು
ಹಿರಿಯ ಸಂಗೀತ ಕಲಾವಿದರು ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಂಗೀತ ಕಲಾವಿದರಾದ ಬಿ.ಕೆ.ಸುಮಿತ್ರಾ, ವೈ. ಕೆ.ಮುದ್ದುಕೃಷ್ಣ, ಸಾಂಸ್ಕೃತಿಕ ಕಲಾ ಪ್ರಕಾರ ಬೆನ್ನೆಲುಬಾಗಿರುವ ಸುಗಮ ಸಂಗೀತ, ಗಮಕ ಕಲೆ, ಕಥಾ ಕೀರ್ತನ, ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಸಂಗೀತ ಕ್ಷೇತ್ರವನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ನಿರ್ಲಕ್ಷ್ಯ ಮಾಡಿರುವುದು ನೋವಿನ ಸಂಗತಿ ಎಂದು ದೂರಿದರು.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಹಲವು ಮಂದಿ ನಮ್ಮಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ಸಂಗೀತ ಕ್ಷೇತ್ರದಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸಂಗೀತ ಕ್ಷೇತ್ರದ ಸಾಧಕನ್ನು ಗುರುತಿಸುವ ಕೆಲಸ ಮಾಡಲಿ ಎಂದು ಹೇಳಿದರು.
ಹಿರಿಯ ಸಂಗೀತ ಕಲಾವಿದರಾದ ಪಂಡಿತ್ ವಿನಾಯಕ ತೊರವಿ ಮತ್ತು ಮೈಸೂರು ವಿ.ಸುಬ್ರಹ್ಮಣ್ಯಂ ಮಾತನಾಡಿ, ಸಂಗೀತವಿಲ್ಲದೆ ಯಾವುದೇ ಸಭಾಕಾರ್ಯಕ್ರಮಗಳು ಆರಂಭವಾಗುವುದಿಲ್ಲ. ಸಂಗೀತಕ್ಕೆ ದೊರೆಯಬೇಕಾದ ಪ್ರಾತಿನಿಧ್ಯ ದೊರೆತಿಲ್ಲ. ಇದು
ಮುಜುಗರಪಡುವ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ತಪ್ಪು ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಲಿ ಎಂದರು.