Advertisement

Music ನಿರ್ಗುಣಿ ಭಜನೆಗಳ ಸರದಾರ ಕುಮಾರ ಗಂಧರ್ವ

11:55 PM Aug 19, 2023 | Team Udayavani |

ಮರೆಯಲಾಗದ, ಮರೆಯಬಾರದ ಅನನ್ಯ ಗಾಯಕರು ಕುಮಾರ ಗಂಧರ್ವ. ನಿರ್ಗುಣಿ ಭಜನೆಗಳ ಮೂಲಕ ಅವರು ತಂದ ಹೊಸತನಕ್ಕೆ ಎಣೆಯಿಲ್ಲ. ಅವರ ಜನ್ಮಶತಮಾನೋತ್ಸವ ವರ್ಷ ಆರಂಭವಾಗಿದೆ. ವರ್ಷವಿಡೀ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಆ. 20) ಒಂದು ಕಾರ್ಯಕ್ರಮ ನಡೆಯುತ್ತಿದೆ…

Advertisement

ನಿರ್ಗುಣಿ ಭಜನೆಗಳಿಗೆ ಸಾಂಗೀತಿಕ ಮೌಲ್ಯ ದೊರಕಿಸಿ ಕೊಟ್ಟ ಕೀರ್ತಿ ಕುಮಾರ ಗಂಧರ್ವರಿಗೆ ಸಲ್ಲುತ್ತದೆ. ಅನಾರೋಗ್ಯ ಪರ್ವದ ಅನಂತರ ಅವರು ನಿರ್ಗುಣಿ ಭಜನೆಗಳನ್ನು ಹಾಡತೊಡಗಿದಾಗ ಮೂಗು ಮುರಿದವರೇ ಹೆಚ್ಚು. ಯಾಕೆಂದರೆ ನಿರ್ಗುಣಿ ಭಜನೆಗಳನ್ನು ಆ ಕಾಲದಲ್ಲಿ ಭಿಕಾರಿಗಳು, ಫ‌ಕೀರರು, ಸೂಫಿಗಳು ಮಾತ್ರ ಹಾಡುತ್ತಿದ್ದರು. ಅವುಗಳನ್ನು ವೇದಿಕೆಯ ಮೇಲೆ ಹಾಡುವುದನ್ನು ಶಿಷ್ಟ ಸಂಗೀತಗಾರರು ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ. ಆದರೆ ಅದನ್ನು ಸಾಧ್ಯಗೊಳಿಸಿದವರು ಕುಮಾರ ಗಂಧರ್ವರು. “ಇದೇನಿದು ಕುಮಾರರು ಭಿಕಾರಿಗಳ ಹಾಡನ್ನು ಹಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದವರೇ, ಮುಂದೊಂದು ದಿನ ಅವರ ನಿರ್ಗುಣಿ ಭಜನೆಗಳನ್ನು ಕೇಳಿ ತಲೆದೂಗುವಂತಾ ಯಿತು. ಕುಮಾರರು ಈ ನಿರ್ಗುಣಿ ಭಜನೆಗಳಿಂದ ಆಕರ್ಷಿತರಾದ ಕುರಿತು ಒಂದು ಪ್ರಸಂಗವಿದೆ.

“ಒಂದು ದಿನ ಒಬ್ಬ ಭಿಕ್ಷುಕ ಕುಮಾರರ ಮನೆಗೆ ಬಂದು ಸಂಗೀತದ ಭಿಕ್ಷೆ ಬೇಡಿದ. ಆತನ ಚಹರೆಯನ್ನು ಗಮನಿಸಲಾಗಿ ಪರಿಚಿತ ಮುಖವೆನಿ ಸಿತು. ಅವನು ಅನೇಕ ಸಲ ಕುಮಾರರ ಬಳಿಗೆ ಭಿಕ್ಷೆ ಯಾಚಿಸಿ ಬಂದಿದ್ದ. ಆಗೆಲ್ಲ, “ಭಿಕ್ಷೆ ಬೇಡುವುದನ್ನು ನಿಲ್ಲಿಸಿ ದುಡಿದು ತಿನ್ನು’ ಎಂದು ಬೈಸಿಕೊಂಡು ಮರಳುತ್ತಿದ್ದ. ಮತ್ತೂಂದು ದಿನ ಆತ ಬಂದಾಗ ಕುಮಾರರ ಎದುರು ನಿರ್ಗುಣಿ ಭಜನೆಯ ಮುಖಡಾ ಒಂದನ್ನು ಹಾಡಿದ. ಕುಮಾರರಿಗೆ ಆಶ್ಚ ರ್ಯ ವಾಯಿತು. ಇದೊಂದು ಒಳ್ಳೆಯ ಭಜನೆ ಅನ್ನಿಸಿತು. ಅದರಿಂದ ಪ್ರಭಾವಿತರಾದ ಅವರು ನಿರ್ಗುಣಿ ಭಜನೆಗಳ ಸಾಗರವನ್ನೇ ತಮ್ಮದಾಗಿಸಿ ಕೊಂಡರು’ ಎಂದು ಅನೇಕ ಚರಿತಕಾರರು ದಾಖಲಿಸುತ್ತಾರೆ.

ನಿರ್ಗುಣ ಭಜನೆಗಳ ಬೆನ್ನುಹತ್ತಿ
ಹೆಸರೇ ಹೇಳುವಂತೆ ಗುಣವಿಲ್ಲದ್ದು ಯಾವುದೋ ಅದು ನಿರ್ಗುಣಿ. ಲಘು ಸಂಗೀತದ ಪ್ರಕಾರವಾದ “ಭಜನೆ’ಯಲ್ಲಿ ಸ್ಥೂಲವಾಗಿ ಎರಡು ಪ್ರಕಾರಗಳಿವೆ. ಸಗುಣ ಭಜನೆಗಳು ಮತ್ತು ನಿರ್ಗುಣ ಭಜನೆಗಳು. ದಾಸರ ಪದಗಳು, ಸ್ತುತಿಪರ ವಚನಗಳು, ದೇವತಾ ಸ್ತುತಿಪದ್ಯಗಳು ಸಗುಣ ಭಜನೆಯಲ್ಲಿ ಬರುತ್ತವೆ. ಸಗುಣ ಭಜನೆಗಳಲ್ಲಿ ನಿಶ್ಚಿತ ಆಕಾರವಿರುತ್ತದೆ. ಉಪಾಸಕನಿ¨ªಾನೆ. ನಿರ್ಗುಣಿ ಭಜನೆಗಳಲ್ಲಿ ಇದಾವುದೂ ಇಲ್ಲ. ಇಲ್ಲಿರುವುದು ಬರೀ ತತ್ತÌ ಮಾತ್ರ. ಸ್ಥಿತಿ ಮಾತ್ರ. ನಿರಾಕಾರವಾದ ದೇವರನ್ನು ಕುರಿತಾದ ಇಲ್ಲವೆ ತತ್ತÌವನ್ನು ಸಾರುವವು ನಿರ್ಗುಣಿ ಭಜನೆಗಳು ಎಂದು ಸಾಮಾನ್ಯಾರ್ಥದಲ್ಲಿ ಹೇಳಬಹುದು.ಅನಾರೋಗ್ಯದ ನಿಮಿತ್ತ 1948ರಲ್ಲಿ ವಲಸೆ ಬಂದು ಅನಂತರ ಖಾಯಂ ಆಗಿ ಕುಮಾರರು ನೆಲೆ ನಿಂತ ಮಧ್ಯಪ್ರದೇಶದ ದೇವಾಸ, ನಾಥಪಂಥದ ಶೀಲನಾಥ ಮಹಾರಾಜರ ನೆಲೆಯಾಗಿತ್ತು. 1901ರಿಂದ ಅವರು ದೇವಾಸದಲ್ಲಿ ನೆಲೆನಿಂತಿದ್ದರು. ಅವರೇ ಅಲ್ಲಿ ನಿರ್ಗುಣಿ ಭಜನೆಗಳನ್ನು ಬಿತ್ತಿದವರು. ಹೀಗಾಗಿ ದೇವಾಸ ನಿರ್ಗುಣಿ ಭಜನೆಗಳ ಮುಖ್ಯ ಕೇಂದ್ರಸ್ಥಾ ನವೂ ಆಗಿತ್ತು. ಶೀಲನಾಥ ಮಹಾರಾಜರು ನಾಥ ಸಂಪ್ರದಾಯದ ಭಜನೆಗಳನ್ನೆಲ್ಲ ಸಂಗ್ರಹಿಸಿದ್ದರು. ಪುಸ್ತಕ ರೂಪದಲ್ಲಿಯೂ ಪ್ರಕಟಿಸಿದ್ದರು. ಅದರ ಒಂದು ಪ್ರತಿಯನ್ನು ಕುಮಾರರು ದೊರಕಿಸಿಕೊಂಡು ಅವುಗಳ ಅಧ್ಯಯನ ಮಾಡಿದರು.

ಕೇಳುಗರನ್ನೂ ಕಾಡಬೇಕು…
ನಾಥ ಪಂಥೀಯ ನಿರ್ಗುಣಿಗಳ ಜೀವನ ವಿಧಾನ ಭಿನ್ನ. ರಾತ್ರಿ ಯಿಡೀ ಧುನಿ ಉರಿಸಿ ಜಾಗರಣೆ ಮಾಡುತ್ತಾರೆ. ಜೀವನದ ಮೇಲಿನ ಅದಮ್ಯ ವಿಶ್ವಾಸದಿಂದಾಗಿಯೇ ಅವರು ತುಂಬ ಸಶಕ್ತವಾದ ಸ್ವರಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ಅಂಥ ಸ್ವರದ ಮೇಲೆ ಕುಮಾರರೂ ಪ್ರಭುತ್ವ ಸಾಧಿಸಿದರು. ನಿರ್ಗುಣಿ ಜೀವನದೊಳಗಿನ ದಿಗಂಬರತ್ವ, ಔದಾಸೀನ್ಯ, ಗಟ್ಟಿತನ, ತಾದ್ಯಾತ್ಮವನ್ನುಸಾಧಿಸಿ ಕೊಂಡರು. ಅನಂತರ ಶೀಲನಾಥ ಮಹಾರಾಜರು ಸಂಗ್ರಹಿಸಿದ ನಿರ್ಗುಣಿ ಭಜನೆಗಳನ್ನು ಹಾಡಲು ಆರಂಭಿಸಿ ದರು. ಒಂದೆಡೆ ದಾಖಲಿಸುತ್ತಾರೆ. ಮೊದಲು ನಾನು ಸುನತಾ ಹೈ ಗುರುಗ್ಯಾನಿ ಕಂಪೋಸ್‌ ಮಾಡಿದೆ. ನಿರ್ಗುಣ ದಲ್ಲಿ ನಿರ್ವಾತವನ್ನು (ವ್ಯಾಕ್ಯೂಮ…) ನಿರ್ಮಾಣ ಮಾಡುವುದರಲ್ಲಿನ ಅದ್ಭುತ ಅನುಭವ ಗಟ್ಟಿತನದಿಂದ ಬರುತ್ತದೆ. ಆ ಶೂನ್ಯತೆ ಎಷ್ಟು ಪರಿ ಣಾಮಕಾರಿ ಯಾಗಿರಬೆಧೀಕೆಂದರೆ, ಅದು ಎಲ್ಲರ ಅನುಭವಕ್ಕೂ ಬರಬೇಕು. ಯಾರ ಕೈಗೂ ಸಿಗಬಾರದು. ಕೇಳುಗರೆಲ್ಲ ಆ ಫೇಕ್‌ (ಸ್ವರಗಳ ಎಸೆತ)ಗಳ ಆನಂದವನ್ನು ಸವಿಯಬೇಕು. ಹಾಗೆ ನಿರ್ಗುಣಿ ಭಜನೆಗಳ ವಿನ್ಯಾಸವಿರಬೇಕು.
ನಿರ್ಗುಣಿ ಭಜನೆಗಳನ್ನು ಹಾಡುವವರು ಯಾವ ರೀತಿ ಸ್ವರ ಹೊರಡಿಸುತ್ತಾರೋ ಅದೇ ರೀತಿ ಅವರ ಜೀವನ ಇರುತ್ತದೆ. ಹಾಗಿಲ್ಲದೆ ಆ ರೀತಿಯ ಸ್ವರ ಸ್ವಾಭಾವಿಕವಾಗಿ ಹೊರಡಿಸಲಾಗದು. ಅವರ ವಿಚಾರಗಳಿಗೆ ಅನುಗುಣವಾಗಿ ಸ್ವರಗಳು ಹೊರಡು ತ್ತವೆ. “ಮೈ ಜಾಗೂ, ಮ್ಹಾರಾ ಸತುYರು ಜಾಗೆ, ಆಲಮ ಸಾರಿ ಸೋವೈ’ ಎಂಬುದೇ ಅವರ ಜಗತ್ತು.

Advertisement

ಆಭರಣ ಕಳಚಿಟ್ಟು ಕೂತರು!
ದಿಲ್ಲಿಯ ಓರ್ವ ಶ್ರೀಮಂತರ ಮನೆಯಲ್ಲಿ ವಿಶಾಲವಾದ ದೀವಾನಖಾನೆಯಲ್ಲಿ ಕುಮಾರ ಗಂಧರ್ವರ ಕಾರ್ಯಕ್ರಮ. ಮೊಗಸಾಲೆಯ ತುಂಬ ಮಾಲಕನ ಶ್ರೀಮಂತಿಕೆಯನ್ನು ಬಿಂಬಿಸುವ ವಸ್ತುಗಳು, ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿವೆ. ಆ ಮೊಗಸಾಲೆಯಲ್ಲಿಯೇ ಕುಮಾರರು ಹಾಡಲು ಕುಳಿತಿ¨ªಾರೆ. ಅವರು ನಿರ್ಗುಣಿ ಭಜನೆಗಳನ್ನು ಹಾಡತೊಡಗಿದಂತೆಲ್ಲ ಶ್ರೀಮಂತಿಕೆಯನ್ನು ಮೆರೆ ಯುವ ಆ ವಸ್ತುಗಳು ತಮ್ಮ ಅರ್ಥ ಕಳೆದು ಕೊಳ್ಳತೊಡಗಿದುವು. “ಹಿರನಾ ಸಮಝ ಬೂಝ ಚರನಾ’ ಎಂಬ ಭಜನೆ ಆರಂಭವಾದಾಗಲಂತೂ ಮನೆತುಂಬ ವೈರಾಗ್ಯದ ಛಾಯೆ ಆವರಿಸತೊಡಗಿತು. ಮೊದಲಿಗೆ ಮೊಗಸಾಲೆಯಲ್ಲಿರುವ ಅಲಂಕಾರಿಕ, ವೈಭೋಗದ ವಸ್ತುಗಳೆಲ್ಲ ಅರ್ಥವನ್ನು ಕಳೆದುಕೊಳ್ಳ ತೊಡಗಿವೆ ಅನ್ನಿಸಿತು. ಅನಂತರ ಆ ಮನೆಯ ಹೆಂಗಳೆಯರು ಪದೇ ಪದೇ ತಮ್ಮ ಮೈಮೇಲಿನ ಆಭರಣಗಳನ್ನು ನೋಡಿಕೊಳ್ಳತೊ ಡಗಿ ದರು. ಅಲ್ಲಿ ನೆರೆದವರಿಗೆಲ್ಲ ವೈರಾಗ್ಯ ಉಂಟಾಯಿತು. ಸಾವು ತಮ್ಮ ಮನೆಯ ಪಕ್ಕದಲ್ಲೇ ಬಂದ ಕುಳಿತಿದೆ ಎನ್ನುವಷ್ಟು ತೀವ್ರವಾಗಿ ಭಾವ ಪರವಶರಾದರು. ಕುಮಾರರು ಕಾರ್ಯಕ್ರಮ ಮುಗಿಸುವಾಗ ಮ ನೆಯ ಗೃಹಿಣಿಯರೆಲ್ಲ ತಮ್ಮ ಆಭರಣಗಳನ್ನು ಕಳಚಿಟ್ಟು ಬಂದು ಹಾಡು ಕೇಳಲು ಕುಳಿತುಕೊಂಡಿದ್ದರು. ಇದು ಕುಮಾರರು ಭಾವ ಪರವಶರಾಗಿ ಹಾಡುತ್ತಿದ್ದ ನಿರ್ಗುಣಿ ಭಜನೆಗಳ ತಾಕತ್ತು.

ಭಿನ್ನ ತಾಲದ ಅನ್ವೇಷಕ
ನಿರ್ಗುಣಿ ಭಜನೆಗಳಿಗೆ ತಂಬೂರಿಗಿಂತ ಏಕತಾರಿಯೇ ಉತ್ತಮವೆಂದು ಭಾವಿಸಿ ಬಳಸಿದರು. ಏಕತಾರಿ ಯನ್ನು ಮೀಟುವುದರ ಲಯದಲ್ಲಿ ವಿಶೇಷತೆಯಿದೆ. ಆ ಲಯವನ್ನು ಕುಮಾರರು ಸಾಧಿಸಿದರು. ಏಕತಾರಿಯ ಲಯದಿಂದಲೇ ಕುಮಾರರಲ್ಲಿ ಸಾವಿರ ಸಾವಿರ ಕಲ್ಪನೆಗಳು ಅರಳಿದವು. ಅದರ ಆಧಾರದಿಂದಲೇ ಅವರು “ಸತವಾ’ ಎಂಬ ಏಳು ಮಾತ್ರೆಯ ತಾಲವನ್ನು ರೂಪಿಸಿದರು. ರೂಪಕ ತಾಲಕ್ಕಿಂತ ಭಿನ್ನವಾದ ತಾಲವಿದು. ಹೀಗಾಗಿ ಕುಮಾರರು ಎಲ್ಲಿಯೇ ನಿರ್ಗುಣಿ ಭಜನಗೆಳನ್ನು ಹಾಡಿದರೂ ಅಲ್ಲಿ ವೈರಾಗ್ಯ ಪೂರ್ಣವಾದ ವಾತಾವರಣ ಮೂಡುತ್ತಿತ್ತು. ನಿರ್ಗುಣಿ ಭಜನೆಗಳು “ಕುಮಾರ ಸಂಗೀತ’ದ ಒಂದು ಉಜ್ವಲ ಅಧ್ಯಾಯ. ಸಂತ ಕಬೀರರ ನಿರ್ಗುಣಿ ಭಜನೆಗಳ ಬಗೆಗೆ ಕುಮಾರರ ಅನ್ನಿಸಿಕೆ ಇದು: “ಅಲ್ಲಿ ಗುಪ್ತವಾದುದೇನೂ ಇಲ್ಲ. ಮುಕ್ತ ವಿಚಾರಗಳೇ ಆತನ ವಿಶೇಷತೆ. ಯುಗನ ಯುಗನ ಹಮ್‌ ಜೋಗಿ’ ಎಂದು ಯಾರು ಹೇಳುತ್ತಾರೆ? ಇದು ಆತ್ಮದ ಕೂಗು. ನಗ್ನವಾದ ಶಬ್ದಗಳೇ ಕಬೀರನ ವಿಶೇಷತೆ. ಅದನ್ನು “ಉಡ ಜಾಯೇಗಾ ಹಂಸ ಅಕೇಲಾ’ ಎಂಬ ನಿರ್ಗುಣಿ ಭಜನೆಯಲ್ಲಿ ಕಾಣುತ್ತೇವೆ. ಆತನ ನಿರ್ಗುಣಗಳಲ್ಲಿ ನಿರಾಕಾರದ ಗುಣ ನಿರ್ಭಯವಾಗಿ ಹಾಡುತ್ತದೆ. “ಹಮರಿ ಬಹುರಿ ಅಕೇಲಾ’ ಎನ್ನುವಾಗ ಉಂಟಾಗುವ ಶೂನ್ಯತೆ ಅಪಾರವಾದುದು.

ಶಿರೀಷ ಜೋಶಿ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next