ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪರ್ಕಳ ವತಿಯಿಂದ ಹಿರಿ-ಕಿರಿಯ ಕಲಾವಿದರ ಒಗ್ಗೂಡುವಿಕೆಯಲ್ಲಿ ಸಂಗೀತ ನಾದ – ನೀರಾಜನ ಕಾರ್ಯಕ್ರಮ ನಡೆಯಿತು. ಗುರು ಉಮಾಶಂಕರಿಯವರ ನಾದಾರ್ಚನೆಯ ಬಳಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು ಮತ್ತು ಕೃತಿ ಮತ್ತು ತನ್ಮಯಿ ಅವರಿಂದ ಕೀರ್ತನೆಗಳು ಪ್ರಸ್ತುತಗೊಂಡವು. ಅನಂತರ ಅರ್ಜುನ್ ಮುದ್ಲಾಪುರ ಅವರ ವೀಣಾವಾದನ ನಡೆಯಿತು. ಕೆ. ಆರ್. ರಾಘವೇಂದ್ರ ಆಚಾರ್ಯ ಅವರ ತ್ಯಾಗರಾಜರ ಕೃತಿಗಳು, ದೇವರ ನಾಮಗಳು, ಸಂಗೀತ ಪ್ರಿಯರನ್ನು ರಂಜಿಸಿದವು. ಮಣಿಪಾಲದ ಪ್ರೇಮ್‌ಚಂದ್ ಪೈ ವಯಲಿನ್ ವಾದನವನ್ನು ಹಿಂದೂಸ್ಥಾನಿ ಶೈಲಿಯಲ್ಲಿ ಪ್ರಸ್ತುತ ಪಡಿಸಿದರು. ಹಂಸಭಾರತಿ ಮತ್ತು ಹೇಮವರ್ಷಿಣಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ಕಚೇರಿಯಲ್ಲಿ ಕೀರವಾಣಿ ಪ್ರಧಾನ ರಾಗವಾಗಿ ದೇವಿ ನೀಯೆ ತುಣೈ ಕೃತಿಯ ಮೂಲಕ ನಿರೂಪಣೆಗೊಂಡಿತು. ಸರಿಗಮ ಭಾರತೀಯ ವಿದ್ಯಾರ್ಥಿಗಳಾದ ವರ್ಧನ್, ಪೂರ್ಣ, ಚೈತನ್ಯ ಕೃತಿಗಳನ್ನು ಪ್ರಸ್ತುತ ಪಡಿಸಿದರು.
ವಿಷ್ಣು ಶರ್ಮ ಆಭೋಗಿಯಲ್ಲಿ ವರ್ಣ, ಗೌಳ ರಾಗದಲ್ಲಿ ಪ್ರಣಾಮಮ್ಯಹಂ, ನಾಟ ಕುರುಂಜಿಯಲ್ಲಿ ಮಾಮವ ಸದಾ ವಂದೇ, ತಿಲ್ಲಾನದೊಂದಿಗೆ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಅನಿಕೇತ್ ವೇಣುವಾದನದಿಂದ ಮೆಚ್ಚುಗೆಯನ್ನು ಪಡೆದರು.
ಗೋಷ್ಠಿ ಗಾಯನ ರೂಪದಲ್ಲಿ ತ್ಯಾಗರಾಜರ “ಪಂಚರತ್ನ’ ಕೃತಿಗಳು ಮತ್ತು ದೀಕ್ಷಿತರ ನವಾವರಣ ಕೃತಿಗಳು ಪ್ರಸ್ತುತಗೊಂಡವು. ಜ್ಯೋತಿಲಕ್ಷ್ಮಿ ಅವರಿಂದ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಪೂರ್ವಿ ಕಲ್ಯಾಣಿ ರಾಗದ ಮೀನಾಕ್ಷಿ ಮೇಮುದಂ ಮತ್ತು ಶ್ರೀ ರಾಗದ ನವಾವರಣ ಕೃತಿ ಹಾಗೂ ಕೀರವಾಣಿ ರಾಗದಲ್ಲಿ ಅಂಬವಾಣಿ ಕೃತಿಗಳು ನಿರೂಪಣೆಗೊಂಡವು. ಹಿಂದೂಸ್ಥಾನೀ ಸಂಗೀತ ಕಾರ್ಯಕ್ರಮದಲ್ಲಿ ದೇವಿ ಸಾರಂಗ ಅವರು ಬಡಾಖ್ಯಾಲ್‌ನ್ನು ಯಮನ್ ರಾಗದಲ್ಲಿ, ದೇವರ ನಾಮಗಳನ್ನು ಮರಾಠಿ ಅಭಂಗ್ ಮತ್ತು ರಾಗಮಾಲಿಕೆಯನ್ನು ಎರಡೂ ಸ್ಥಾಯಿಗಳಲ್ಲೂ ಪ್ರಸ್ತುತ ಪಡಿಸಿದರು.ಉದ್ಯಾವರ ಮಾಧವ ಆಚಾರ್ಯ ನಿರ್ದೇಶನದಲ್ಲಿ “ರುಕ್ಮಿಣೀಶ ವಿಜಯ’ ನೃತ್ಯರೂಪಕವನ್ನು ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸಿದರು.ಪಕ್ಕವಾದ್ಯ ಕಲಾವಿದರುಗಳಾಗಿ ವಯಲಿನ್‌ನಲ್ಲಿ ವೈಭವ್ ಪೈ, ಶರ್ಮಿಳಾ ರಾವ್, ವೇಣುಗೋಪಾಲ್ ಶ್ಯಾನುಭೋಗ್, ವಸಂತಿ ರಾಮ ಭಟ್, ಸುಮೇಧ ಅಮೈ ಹಾಗೂ ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್ಯ, ಹಿರಣ್ಮಯ, ಬಾಲಚಂದ್ರ ಭಾಗವತ್, ಸುನಾದ ಕೃಷ್ಣ ಮತ್ತು ತಬ್ಲಾದಲ್ಲಿ ಶಶಿಕಿರಣ್, ಪರಮೇಶ್ವರ ಹೆಗ್ಡೆ ಸಹಕರಿಸಿದರು.
ಜ್ಯೋತಿಷ್ಮತಿ