Advertisement

ಸಂಗೀತ, ನೃತ್ಯ ಮನೋರಂಜನೆಗೆ ಸೀಮಿತವಲ್ಲ

12:03 PM Aug 07, 2018 | |

ಬೆಂಗಳೂರು: ಸಂಗೀತ ಹಾಗೂ ನೃತ್ಯ ಪ್ರಕಾರಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಬದಲಾಗಿ ಸಮಾಜಕ್ಕೆ ಸಂದೇಶ ಸಾರುವಂತಹ ವೇದಿಕೆಗಳಾಗಿವೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫ‌ಯಾಜ್‌ ಖಾನ್‌ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಸೋಮವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ನೃತ್ಯಗಳು ಸಮಾಜದ ಒಂದು ಭಾಗವಾಗಿದ್ದು, ಪ್ರತಿಯೊಬ್ಬರ ವ್ಯಕ್ತಿಯನ್ನು ತನ್ನತ್ತ ಸೆಳೆಯುವಂತಹ ಶಕ್ತಿಯನ್ನು ಹೊಂದಿವೆ. ಕಲೆ ಹಾಗೂ ಸಾಹಿತ್ಯವಿಲ್ಲದ ಸಮಾಜ ನರಕದಂತಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಸಂಗೀತ, ನೃತ್ಯ ಸೇರಿದಂತೆ ಎಲ್ಲ ರೀತಿಯ ಕಲಾ ಪ್ರಕಾರಗಳು ಸಮೃದ್ಧವಾಗಿ ಬೆಳವಣಿಗೆಯಾಗಿದ್ದು, ಪ್ರತಿಯೊಬ್ಬರೂ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕಲಾ ಪ್ರಕಾರಗಳನ್ನು ಸವಿಯುವ ಮೂಲಕ ಅವುಗಳನ್ನು ಗೌರವಿಸಬೇಕು ಎಂದು ಹೇಳಿದರು.

ಅಕಾಡೆಮಿಯ ವತಿಯಿಂದ ಕಳೆದ ಎರಡು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿದ್ವಾಂಸರ ಮೂಲಕ ಪುಸ್ತಕಗಳನ್ನು ಹೊರತಂದಿದ್ದು, ಇವು ಕೇವಲ ಪಠ್ಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕ ಕೃತಿಗಳಾಗಿದ್ದು, ಕೃತಿಗಳಿಂದ ಜನರು ಸಂಗೀತದ ಕುರಿತು ಹಲವಾರು ವಿಷಯಗಳನ್ನು ತಿಳಿಯಬಹುದಾಗಿದೆ ಎಂದು ಹೇಳಿದರು.

ವಿಮರ್ಶಕ ಡಾ.ಎಂ.ಸೂರ್ಯ ಪ್ರಸಾದ್‌ ಮಾತನಾಡಿ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಹಾಗೂ ನೃತ್ಯ ಪ್ರಕಾರಗಳು ಸಮಾನವಾಗಿ ಬೆಳೆಯುತ್ತಿದ್ದು, ದೇಶ-ವಿದೇಶಗಳಲ್ಲಿ ಅಪಾರವಾದ ಗೌರವ ಮನ್ನಣೆಗೆ ಪಾತ್ರವಾಗಿವೆ. ನಮ್ಮ ಸಂಗೀತ ಗಟ್ಟಿತನದಿಂದ ಕೂಡಿದ್ದು, ಗಟ್ಟಿತನದಿಂದ ಕೂಡಿದ ಕಲೆ ಎಲ್ಲವನ್ನೂ ಮೀರಿ ಬೆಳೆಯುವ ಶಕ್ತಿಯನ್ನು ಹೊಂದಿರುತ್ತವೆ ಎಂದರು. 

Advertisement

ಕಾರ್ಯಕ್ರಮದಲ್ಲಿ ರಾಗವಲ್ಲಿರಸಾಲ, ಸಂಗೀತ ಶಾಸ್ತ್ರಗ್ರಂಥ ಚಂದ್ರಿಕೆ, ಸಂಗೀತ ಶಾಸ್ತ್ರ ಮಂದಾಕಿನಿ (ಭಾಗ 1 ಮತ್ತು ಭಾಗ 2), ತೌಲನಿಕ ಸಂಗೀತ ಸಮೀಕ್ಷೆ ಹಾಗೂ ಕಲಾನ್ವೇಷಣೆ ಕೃತಿಗಳು ಬಿಡುಗಡೆಗೊಂಡವು. ಈ ವೇಳೆ ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್‌, ಲೇಖಕರಾದ ಡಾ.ನಾಗವಲ್ಲಿ ನಾಗರಾಜ್‌, ಶತಾವಧಾನಿ ಆರ್‌.ಗಣೇಶ್‌, ವಸಂತ ಮಾಧವಿ, ಡಾ.ಡಿ.ಎ.ಉಪಾಧ್ಯ, ಡಾ.ಎಸ್‌.ಕಾರ್ತಿಕ್‌ ಹಾಜರಿದ್ದರು. 

ಕೈಕೊಟ್ಟ ವಿದ್ಯುತ್‌ – ಸೊಳ್ಳೆ ಕಾಟ: ಕಾರ್ಯಕ್ರಮದ ಆರಂಭದಲ್ಲಿಯೇ ಸಭಾಂಗಣದಲ್ಲಿ ವಿದ್ಯುತ್‌ ಕೈಕೊಟ್ಟ ಪರಿಣಾಮ ಅತಿಥಿಗಳು ಹಾಗೂ ಸಭಿಕರು ತೊಂದರೆ ಅನುಭವಿಸುವಂತಾಯಿತು. ಸುಮಾರು ಒಂದು ಗಂಟೆ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದರಿಂದ ಅತಿಥಿಗಳು ಮೈಕ್‌ ಇಲ್ಲದೆ ಮಾತನಾಡಬೇಕಾಯಿತು. ಆಯೋಜಕರು ಕೈಯಲ್ಲಿ ಮೊಬೈಲ್‌ ಟಾರ್ಚ್‌ ಹಿಡಿದು ಅತಿಥಿಗಳನ್ನು ತೋರಿಸಬೇಕಾಯಿತು. ಇದರ ನಡುವೆ ಸಭಾಂಗಣದಲ್ಲಿ ಸೊಳ್ಳೆಗಳ ಕಾಟ ತೀವ್ರವಾಗಿದ್ದರಿಂದ ಸಭಿಕರು ಕಾರ್ಯಕ್ರಮದಿಂದ ಎದ್ದು ಹೋಗಿದ್ದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next