ಮಂಗಳೂರು: ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ, ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದಿಂದ ನಡೆಯಲಿರುವ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಸಂಬಂಧಿಸಿ ಶುಕ್ರವಾರ ನಡೆದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆದಿದೆ.
ಪರೀಕ್ಷೆ ಆಯೋಜಿಸುವ ಕುರಿತು ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾಲ್ಕು ಮಂದಿ ಸಿಂಡಿಕೇಟ್ ಸದಸ್ಯರ “ಉಪಸಮಿತಿ’ ರಚಿಸಲಾಗಿದೆ.
ಸಮಿತಿ ಸದಸ್ಯರು ವಿವಿಧ ಕಲಾ ಸಂಸ್ಥೆಗಳ ಪ್ರಮುಖರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿ 10 ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ ನಿರ್ದೇಶನ ನೀಡಿದ್ದಾರೆ.
ಪ್ರಸ್ತುತ ಶಾಲೆಗಳು ಆರಂಭವಾಗಿರುವುದರಿಂದ ಯಾವ ರೀತಿ ಪರೀಕ್ಷೆ ಆಯೋಜಿಸಬಹುದು. ಸಾವಿರಾರು ಅಭ್ಯರ್ಥಿಗಳ ಅರ್ಜಿ ಪರಿಶೀಲನೆ, ಪರೀಕ್ಷಾ ಮೇಲ್ವಿಚಾರಕ ನೇಮಕವೂ ಬಾಕಿ ಇರುವುದು, ಮೊದಲಾದ ಅಂಶಗಳ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ. ಸಮಿತಿ ವರದಿ ನೀಡಿದ ಬಳಿಕ ಪರಿಶೀಲಿಸಿ ಪರೀಕ್ಷೆಗೆ ಸಂಬಂಧಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಲಪತಿ ನಾಗೇಶ್ ಬೆಟ್ಟಕೋಟೆ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಉದಯವಾಣಿ ವರದಿ
ಈ ಬಾರಿ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ವಿಳಂಬವಾಗಿರುವ ಕುರಿತು “ಉದಯವಾಣಿ’ ಜೂ.21ರ ಸಂಚಿಕೆಯಲ್ಲಿ “ಸಂಗೀತ, ನೃತ್ಯ, ಪರೀಕ್ಷೆಗೆ ಮುಹೂರ್ತ ಸನ್ನಿಹಿತ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.