ಢಾಕಾ: ಕ್ರಿಕೆಟ್ ಅತಿ ಜನಪ್ರಿಯವಾಗಿರುವ ದೇಶಗಳಲ್ಲಿ ಬಾಂಗ್ಲಾ ಕೂಡಾ ಒಂದು. ಇತ್ತೀಚೆಗಿನ ವರ್ಷಗಳಲ್ಲಿ ಬಾಂಗ್ಲಾ ತಂಡ ನಿಧಾನಕ್ಕೆ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. ಅಲ್ಲಿನ ದೇಶೀಯ ಕ್ರಿಕೆಟ್ ಗುಣಮಟ್ಟವೂ ಏರುತ್ತಿದೆ. ಹಾಗಾಗಿ ಅಲ್ಲಿ ನಡೆಯುವ ಘಟನೆಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅಂತಹದ್ದೇ ಒಂದು ಚರ್ಚಿತ ಘಟನೆ ಅಲ್ಲಿನ ಬಂಗಬಂಧು ಟಿ20 ಕಪ್ ನಲ್ಲಿ ನಡೆದಿದೆ.
ಸೋಮವಾರ ನಡೆದ ಟಿ20 ಪಂದ್ಯದಲ್ಲಿ ಬೆಕ್ಸಿಮ್ಕೊ ಢಾಕಾ ನಾಯಕ ಮುಶ್ಫೀಕರ್ ರಹೀಂ, ಸಹ ಆಟಗಾರ ನೇಸಮ್ ಅಹ್ಮದ್‌ಗೆ ಬಹುತೇಕ ಹೊಡೆದೇ ಬಿಟ್ಟರು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನೇಸಮ್ ಅಹ್ಮದ್ ಭೀತಿಗೊಂಡಿದ್ದು ಎದ್ದು ಕಾಣುತ್ತಿತ್ತು. ಇದನ್ನು ಅಭಿಮಾನಿಗಳಾಗಲೀ, ಸಾಮಾಜಿಕ ತಾಣಿಗರಾಗಲೀ ಸಕಾರಾತ್ಮಕವಾಗಿ ಸ್ವೀಕರಿಸಲಿಲ್ಲ. ಮುಶ್ಫೀಕರ್ ರಹೀಂ ತಮ್ಮ ಮುಂಗೋಪದಿಂದಾಗಿ ಹಿಂದೆಯೂ ಬಹಳ ಸುದ್ದಿ ಮಾಡಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾ ವಿಕೆಟ್ ಕೀಪರ್ ರೇಸ್: ಪಂತ್‌ಗಿಂತ ಮುಂದಿದ್ದಾರೆ ಅನುಭವಿ ಸಾಹಾ!
ಆಗಿದ್ದೇನು?: ಸೋಮವಾರ ಬೆಕ್ಸಿಮ್ಕೊ ಢಾಕಾ- ಫಾರ್ಚೂನ್ ಬಾರಿಶಾಲ್ ನಡುವೆ ನಿರ್ಗಮನ ಸುತ್ತಿನ ಪಂದ್ಯ ನಡೆಯುತ್ತಿತ್ತು. ಬಾರಿಶಾಲ್‌ಗೆ ಬಾಕಿ 19 ಎಸೆತದಲ್ಲಿ 45 ರನ್ ಬೇಕಿತ್ತು. ಆತಿಫ್ ಹೊಸೇನ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. 17ನೇ ಓವರ್ ಕೊನೆಯ ಎಸೆತದಲ್ಲಿ ಆತಿಫ್ ಕ್ಯಾಚ್ ನೀಡಿದರು. ಇದನ್ನು ಹಿಡಿಯಲು ಮುಶ್ಫೀಕರ್ ಧಾವಿಸಿದರು. ಇನ್ನೊಂದು ಕಡೆಯಿಂದ ನೇಸಮ್ ಬಂದರು.
ಇನ್ನೇನು ಇಬ್ಬರೂ ಡಿಕ್ಕಿಯಾಗಬೇಕು ಅಷ್ಟರಲ್ಲಿ ಮುಶ್ಫೀಕರ್ ಕ್ಯಾಚ್ ಹಿಡಿಯಲು ಯಶಸ್ವಿಯಾದರು. ತಾನು ಹಿಡಿಯುತ್ತೇನೆ, ಬಿಟ್ಟು ಬಿಡು ಎಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದೇ ಮುನ್ನುಗ್ಗಿದ ಸಹ ಆಟಗಾರನ ಮೇಲೆ ಮುಶ್ಫೀಕರ್‌ಗೆ ಕ್ರೋಧವುಕ್ಕಿತು. ಅದರ ಪರಿಣಾಮ ಇಷ್ಟೆಲ್ಲ ಘಟನೆ. ಅಂತೂ ಬೆಕ್ಸಿಮ್ಕೊ ಪಂದ್ಯ ಗೆಲ್ಲಲು ಯಶಸ್ವಿಯಾಯಿತು.