Advertisement
ಪಾಕ್‌ನ ಉಗ್ರ ಸಂಘಟನೆಗಳಾದ ಲಷ್ಕರ್ -ಎ-ತಯ್ಯಬಾ ಮತ್ತು ಜಮಾತ್-ಉದ್ -ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ನಾನೇ ನನ್ನ ಕೈಯಾರೆ ಪೋಷಿಸಿ, ಬೆಳೆಸಿದೆ ಎಂದು ಮಾಜಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರ್ರಫ್ ಘಂಟಾ ಘೋಷವಾಗಿ ಒಪ್ಪಿಕೊಂಡಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ಮುಷರ್ರಫ್ ಹೇಳಿಕೊಂಡಿದ್ದಾರೆ. ಕಾಶ್ಮೀರದ ಉಗ್ರ ಕೃತ್ಯಗಳಲ್ಲಿ ಸಯೀದ್ ತೊಡಗಿಸಿಕೊಂಡಿ ದ್ದಾರೆ. ಅದಕ್ಕೆ ನನ್ನ ಬೆಂಬಲವಿದೆ. ಲಷ್ಕರ್ ಹಾಗೂ ಜಮಾತ್-ಉದ್-ದಾವಾ ಉಗ್ರರು ನಮ್ಮ ಅತಿದೊಡ್ಡ ಬಲ. ಅಮೆರಿಕದ ಜತೆ ಸೇರಿ ಭಾರತವು ಅವರನ್ನು ಉಗ್ರರು ಎಂದು ಘೋಷಿಸಿದೆ ಎಂದಿದ್ದಾರೆ. ಆದರೆ ನಿಮ್ಮದೇ ಅವಧಿಯಲ್ಲಿ ಲಷ್ಕರ್ ಸಂಘಟನೆಯನ್ನು ನಿಷೇಧಿಸಲಾಗಿತ್ತು ಎಂದಿದ್ದಕ್ಕೆ, ವಿಭಿನ್ನ ಸನ್ನಿವೇಶದಲ್ಲಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದಿದ್ದಾರೆ.
ನನಗೆ ಲಷ್ಕರ್ ಮತ್ತು ಹಫೀಜ್ ಇಷ್ಟ ಎಂಬುದು ಅವರಿಗೆ ಗೊತ್ತಿದೆ. ಅವರ ಅತಿದೊಡ್ಡ ಬೆಂಬಲಿಗ ನಾನು. ಹಫೀಜ್ ಸಯೀದ್‌ನನ್ನು ನಾನು ಭೇಟಿಯಾಗಿದ್ದೇನೆ. ಕಾಶ್ಮೀರಕ್ಕಾಗಿ ಸಯೀದ್ ನಡೆಸುತ್ತಿರುವ ಹೋರಾಟವನ್ನು ಮತ್ತು ಭಾರತೀಯ ಸೇನೆಯನ್ನು ಕುಗ್ಗಿಸುವ ಕೆಲಸವನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ ಮುಷ್.
ಸಯೀದ್ ವಿಚಾರಣೆ ವಿಳಂಬ: ಉಗ್ರರ ಪಟ್ಟಿಯಿಂದ ಕೈಬಿಡುವಂತೆ ಹಫೀಜ್ ಸಯೀದ್ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದ್ದು, ಸಯೀದ್ ಅರ್ಜಿ ವಿಚಾರಣೆ ವಿಳಂಬ ವಾಗಲಿದೆ. ಈ ಸಂಬಂಧ ವಿಚಾರಣೆ ನಡೆಸಬೇಕಿರುವ ಒಂಬಡ್ಸ್ ಪರ್ಸನ್ ಹುದ್ದೆ ಖಾಲಿ ಇರುವುದರಿಂದ, ಈ ಹುದ್ದೆ ಭರ್ತಿಯಾಗುವವರೆಗೂ ಅರ್ಜಿ ಪರಿಶೀಲನೆ ನಡೆಯಲಾರದು. ಮುಂದಿನ ಕೆಲವು ತಿಂಗಳುಗಳಲ್ಲಿ ನೇಮಕಾತಿ ನಡೆದ ನಂತರ ಸಯೀದ್ ಅರ್ಜಿ ವಿಚಾರಣೆಗೆ ಕೈಗೊಳ್ಳಬಹುದಾಗಿದೆ ಎಂದು ವಿಶ್ವಸಂಸ್ಥೆಯೇ
ಮಾಹಿತಿ ನೀಡಿದೆ.