Advertisement

ಬಿಸಿಲ ನಗರಿಯ ಹಲವು ವಿಶೇಷ

04:31 PM Apr 16, 2022 | Team Udayavani |

ಮಧ್ಯಪ್ರಾಚ್ಯದ ಒಂದು ಸುಂದರ, ವಿಶಿಷ್ಟ ಮತ್ತು ಶಾಂತಿಯುತ ದೇಶ ಒಮಾನ್‌. ಆಕರ್ಷಣೀಯ ಸಮುದ್ರ ತೀರಗಳು, ಬೆಟ್ಟಗುಡ್ಡಗಳು, ವಿಶೇಷವಾದ ಮರುಭೂಮಿ.. ಹೀಗೆ ವೈವಿಧ್ಯಮಯವಾದ ಭೌಗೋಳಿಕ ಪ್ರಾಂತ್ಯಗಳೊಂದಿಗೆ ವಿವಿಧ ಅಭಿರುಚಿಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಒಮಾನ್‌ನ ರಾಜಧಾನಿ ಮಸ್ಕತ್‌. ತನ್ನ ಸುಂದರ ಭೌಗೋಳಿಕ ವಿನ್ಯಾಸವೇ ಇದರ ಪ್ರಮುಖ ಆಕರ್ಷಣೆ. ಇಲ್ಲಿನ ವಿಶಿಷ್ಟ ಸಂಸ್ಕೃತಿ, ಸ್ನೇಹಪರ ಜನರು ಪ್ರವಾಸಿಗರಿಗೆ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ಮರುಭೂಮಿಯ ನಗರವಾಗಿರುವ ಮಸ್ಕತ್‌ಗೆ ಭೇಟಿ ನೀಡಲು ಪ್ರಶಸ್ತ ಸಮಯ ನವೆಂಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಉತ್ತಮ. ಅನಂತರ ಬೇಸಗೆ ತೀವ್ರಗೊಳ್ಳುವುದರಿಂದ ಬಿಸಿಲಿನ ಜಳ ಜಾಸ್ತಿಯಾಗುತ್ತದೆ.

Advertisement

ಮಸ್ಕತ್‌ ಕೋರ್ನಿಷ್‌

ಅರೇಬಿಕ್‌ ಭಾಷೆಯಲ್ಲಿ ಸಮುದ್ರ ತೀರಕ್ಕೆ ಕೋರ್ನಿಷ್‌ ಎನ್ನುತ್ತಾರೆ. ಮಸ್ಕೃತ್‌ ನಗರದಲ್ಲಿ ಅತ್ಯಂತ ಸುಂದರವಾದ ಕೋರ್ನಿಷ್‌ ಇದ್ದು, ಇದರಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದೇ ಒಂದು ಸುಂದರ ಅನುಭವ. ಒಂದು ಕಡೆ ಕಲ್ಲಿನ ಗುಡ್ಡಗಳು ಈ ತೀರವನ್ನು ಅತ್ಯಾಕರ್ಷಕಗೊಳಿಸಿವೆ.

ಮತ್ರಾ ಸೂಕ್‌

ಸೂಕ್‌ ಎಂದರೆ ಮಾರುಕಟ್ಟೆ. ಮಸ್ಕತ್‌ನಲ್ಲಿ ಕೋರ್ನಿಷ್‌ಗೆ ಕಾಣುವಂತೆ ನಿರ್ಮಾಣವಾಗಿದೆ ಇಲ್ಲಿನ ಸಾಂಪ್ರದಾಯಿಕ ಅಲ್‌ಧಾಲಂ ಮಾರುಕಟ್ಟೆ. ಇದು ಪ್ರಾಚೀನ ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಮಾರಾಟ ಮಾಡುವ ಕೇಂದ್ರವಾಗಿದೆ. ವಿಶ್ವದ ಅತ್ಯಂತ ಹಳೆಯ ಮಾರುಕಟ್ಟೆ ಸ್ಥಳಗಳಲ್ಲಿ ಒಂದಾಗಿದೆ. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ಮಾರುಕಟ್ಟೆಗೆ ಈಗಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದು ಎರಡು ಮುಖ್ಯ ದ್ವಾರಗಳನ್ನು ಹೊಂದಿದ್ದು, ಸದಾ ಜನನಿಬಿಡವಾಗಿರುತ್ತದೆ. ಮರದ ಮೇಲ್ಛಾವಣಿ ಸ್ವಲ್ಪ ಸೂರ್ಯನ ಬೆಳಕನ್ನು ಒಳ ಪ್ರವೇಶಿಸಲು ಬಿಡುತ್ತದೆ. ಹೀಗಾಗಿ ಈ ಸೂಕ್‌ ಅನ್ನು ಅಲ್‌ ಧಾಲಂ ಅಥವಾ ಕತ್ತಲೆಯ ಮಾರುಕಟ್ಟೆ ಎಂದು ಕರೆಯಲಾಗುತ್ತದೆ.

Advertisement

ಸುಲ್ತಾನ್‌ ಕಬೂಸ್‌ ಗ್ರ್ಯಾಂಡ್‌ ಮೊಸ್ಕ್

ಮಸ್ಕತ್‌ನಲ್ಲಿರುವ ಸುಲ್ತಾನ್‌ ಕಬೂಸ್‌ ಗ್ರ್ಯಾಂಡ್‌ ಮೊಸ್ಕ್ 4.16 ಸಾವಿರ ಞ2 ವಿಸ್ತೀರ್ಣವನ್ನು ಹೊಂದಿದೆ. 20 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಇಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಒಮಾನ್‌, ಇಸ್ಲಾಮಿಕ್‌ ಮತ್ತು ಮಧ್ಯಪ್ರಾಚ್ಯ ವಾಸ್ತುಶಿಲ್ಪದ ಶೈಲಿಗಳ ಸಮ್ಮಿಲನವಾಗಿ ಆಧುನಿಕ ವಾಸ್ತು ಶಿಲ್ಪ ವಿನ್ಯಾಸವನ್ನು ಇಲ್ಲಿ ಕಾಣಬಹುದಾಗಿದೆ. 2001ರಲ್ಲಿ ಉದ್ಘಾಟಿಸಲ್ಪಟ್ಟ ಈ ಭವ್ಯ ಮಸೀದಿಯು ಮಸ್ಕತ್‌ಗೆ ಭೇಟಿ ನೀಡಿದವರೆಲ್ಲ ನೋಡಲೇಬೇಕಾದ ಸ್ಥಳ.

ಅರಮನೆಗಳು

ಅಲ್‌ ಅಲಂ ಅರಮನೆ, ಮತ್ರಾ ಕೋಟೆ, ಜಾಲಿಲಿ ಕೋಟೆ, ಮಿರಾನಿ ಕೋಟೆ ಮುಂತಾದವು ಮಸ್ಕತ್ತಿನ ಆಯಕಟ್ಟು ಪ್ರದೇಶಗಳಲ್ಲಿ ನಿರ್ಮಿತವಾಗಿರುವ ಸುಂದರ ಸ್ಮಾರಕಗಳಾಗಿದ್ದು ಮಸ್ಕತ್ತಿನ ಸೌಂದರ್ಯವನ್ನು ಹೆಚ್ಚಿಸಿವೆ.

ವಸ್ತು ಸಂಗ್ರಹಾಲಯಗಳು

ಒಮಾನ್‌, ಮಸ್ಕತ್‌ನ ಇತಿಹಾಸ, ಸಂಸ್ಕೃತಿ ಯನ್ನು ತಿಳಿಯಲು ಸಹಕರಿಸುವ ಸುಂದರ ವಸ್ತು ಸಂಗ್ರಹಾಲಯಗಳು ಮಸ್ಕತ್ತಿನಲ್ಲಿವೆ. ಆರ್ಮ್ಡ್ ಫೋರ್ಸಸ್‌ ಮ್ಯೂಸಿಯಂ, ಬೈಟ್‌ ಅಲ್‌ ಬರಂದ, ಮಸ್ಕತ್‌ ಗೇಟ್‌ ಮ್ಯೂಸಿಯಂ ಮೊದಲಾದವುಗಳು ಇಲ್ಲಿನ ಪ್ರಮುಖ ಸಂಗ್ರಹಾಲಯಗಳು. ಒಮಾನ್‌ನ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ಬೆಳಕನ್ನು ಚೆಲ್ಲುವ ಈ ವಸ್ತುಸಂಗ್ರಹಾಲಯಗಳನ್ನು ಬಹಳ ಸುಂದರವಾಗಿ ಮತ್ತು ವ್ಯವಸ್ಥಿತವಾಗಿ ಇಡಲಾಗಿದೆ.

ಸುಂದರ ಉದ್ಯಾನಗಳು

ಮಸ್ಕತ್‌ ನಗರದ ಸೌಂದರ್ಯಕ್ಕೆ ಇಲ್ಲಿನ ಹಸುರು ತುಂಬಿದ ವಿಶಾಲ ಉದ್ಯಾನಗಳು ಉತ್ತಮ ಕೊಡುಗೆಯನ್ನು ನೀಡಿವೆ. ರಿಯಾಮ್‌ ಉದ್ಯಾನ, ಕಲ್ಲು ಪಾರ್ಕ್‌, ಕುರುಮ್‌ ನ್ಯಾಟೂರಲ್‌ ಉದ್ಯಾನ, ಅಲ್‌ ಸಹ್ವಾ ಪಾರ್ಕ್‌ಗಳನ್ನು ಹೆಸರಿಸಬಹುದು. ಒಂದೊಂದು ಉದ್ಯಾನವೂ ಹಸುರು ಹುಲ್ಲುಹಾಸು ಮತ್ತು ವೃಕ್ಷಗಳಿಂದ ತುಂಬಿದ್ದು, ಇದು ಮರುಭೂಮಿ ಎಂಬುದನ್ನೇ ಮರೆಯುವಂತೆ ಮಾಡುತ್ತದೆ.

ಚಾರಣ ಪ್ರಿಯರ ಸ್ವರ್ಗ

ಒಮಾನ್‌ ಕಡಿದಾದ ಗುಡ್ಡಗಳಿಂದ ಕೂಡಿದ್ದು ಸಾಹಸ ಪ್ರಿಯ ಪ್ರವಾಸಿಗರು ಚಾರಣದ ಅನುಭವಗಳನ್ನು ಪಡೆಯಬಹುದು. ಮಸ್ಕತ್‌ ನಗರದಲ್ಲಿಯೇ ಅನೇಕ ಚಾರಣ ಪ್ರದೇಶಗಳಿವೆ.

ಪ್ರತಿ ಬೆಟ್ಟವನ್ನು ಹತ್ತಿದಾಗಲೂ ಅತ್ಯಂತ ಸುಂದರ ದೃಶ್ಯಾವಳಿಯನ್ನು ಕಣ್ತುಂಬಿ ಕೊಳ್ಳಬಹುದು.

ಆಧುನಿಕ, ಸುಸಜ್ಜಿತ, ಹವಾನಿಯಂತ್ರಿತ ಮಾರುಕಟ್ಟೆಗಳೇ ಇಲ್ಲಿನ ಜನಪ್ರಿಯ ಮಾಲ್‌ ಗಳು. ತನ್ನ ನೈಸರ್ಗಿಕ ಸೌಂದರ್ಯದೊಂದಿಗೆ ಅನೇಕ ಮಾಲ್‌ಗ‌ಳು ಮಸ್ಕತ್‌ ಅನ್ನು ಆಧುನಿಕ ನಗರಕ್ಕೆ ಸರಿಸಮನಾಗಿ ನಿಲ್ಲಿಸುತ್ತದೆ. ಬೃಹದಾಕಾರದ ಮೀನಿನ ತೊಟ್ಟಿಯನ್ನು ಹೊಂದಿರುವ ಮಾಲ್‌ ಆಫ್ ಮಸ್ಕತ್‌, ಹೊಸದಾಗಿ ಉದ್ಘಾಟನೆಯಾಗಿರುವ ಮಾಲ್‌ ಆಫ್ ಒಮಾನ್‌, ಇಮಾನ್‌ ಅವೆನ್ಯೂ ಮಾಲ್‌ ಇದರಲ್ಲಿ ಪ್ರಮುಖವಾದವುಗಳು.

ಹೀಗೆ ಹಲವಾರು ಆಕರ್ಷಣೆಗಳೊಂದಿಗೆ ಇಲ್ಲಿನ ಸುಸಜ್ಜಿತ ರಸ್ತೆ, ಇಲ್ಲಿನ ಶಾಂತಿ ಸುವ್ಯವಸ್ಥೆ ಪ್ರವಾಸಿಗರಿಗೆ ಒಂದು ಸುಂದರ ಅನುಭೂತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

ಸುಧಾ ಶಶಿಕಾಂತ್‌, ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next