ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ದೂರದ ಮಾತು. ಒಂದು ವೇಳೆ ಅಧಿಕಾರಕ್ಕೆ ಬಂದರೆ ನಾವು ಮುಂದೆ ಲಿಂಗಾಯತ ಸಿಎಂ ಮಾಡುತ್ತೇವೆ ಎಂದು ಈಗಲೇ ಘೋಷಣೆ ಮಾಡಲಿ ನೋಡೋಣ ಎಂದು ಬೃಹತ್ ಕೈಗಾರಿಕೆ ಸಚಿವ, ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಸವಾಲು ಹಾಕಿದರು.
ಗುರುವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಹೋಗಿದ್ದರಿಂದ ನಮಗೆ ಯಾವುದೇ ಪರಿಣಾಮ ಬೀರಲ್ಲ. ಹುಬ್ಬಳ್ಳಿಯಲ್ಲಿ ಶೆಟ್ಟರ ಬಿಟ್ಟರೆ, ಬಿಜೆಪಿಯ ಯಾವುದೋ ಒಬ್ಬ ಪದಾಧಿಕಾರಿಯೂ ಕಾಂಗ್ರೆಸ್ ಸೇರಿಲ್ಲ. ಶೆಟ್ಟರ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಶಾಸಕರಾಗಿಯೇ ಕೂಡುವುದಕ್ಕಿಂತ ರಾಜ್ಯಸಭೆಗೆ ಕಳುಹಿಸಿ, ಕೇಂದ್ರದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದರು. ಆದರೂ, ಅವರು ಹಠ ಹಿಡಿದು ಪಕ್ಷ ತೊರೆದಿದ್ದಾರೆ ಎಂದರು.
ನಾವು ವಿರೋಧಿಸಿದ ತತ್ವ-ಸಿದ್ಧಾಂತದ ಪಕ್ಷ ಸೇರಿದ್ದಾರೆ. ಕಾಂಗ್ರೆಸ್‌ನವರು 2018ರಲ್ಲಿ ಜಾತಿ ಒಡೆಯಲು ಮುಂದಾಗಿ ಕೈ ಸುಟ್ಟಿಕೊಂಡಿದ್ದರು. ಅದನ್ನು ಜನ ಇನ್ನೂ ಮರೆತಿಲ್ಲ. ಶೆಟ್ಟರ ಅವರು, ಹೇಳಿದವರಿಗೆ ಟಿಕೆಟ್ ಕೊಡುವುದಾಗಿ ಹೇಳಿದರೂ, ಹಠ ಬಿಡಲಿಲ್ಲ. ಲಕ್ಷ್ಮಣ ಸವದಿ ಅವರು 2004ರಲ್ಲಿ ಬಿಜೆಪಿಗೆ ಬಂದಿದ್ದಾರೆ. ಡಿಸಿಎಂ ಮಾಡಿದರೂ, ಅವರು ಪಕ್ಷದ ಋಣ ತೋರಿಸಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ಎಷ್ಟು ಬಾರಿ ಲಿಂಗಾಯಿತ ಸಿಎಂ ಮಾಡಿದ್ದಾರೆ ಹೇಳಲಿ. ವೀರೇಂದ್ರ ಪಾಟೀಲರನ್ನು ಒಬ್ಬೆ ಮಾಡಿದ್ದರು. ಅದೂ, ಅಧಿಕಾರದಿಂದ ಕೆಳಗಿಳಿಸುವಾಗ ಕೀಳಾಗಿ ನಡೆಸಿಕೊಂಡರು. ಬಿಜೆಪಿ ಸರ್ಕಾರ, ಈ ವರೆಗೆ ನಾಲ್ಕು ಜನ ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ನಾಯಕರನ್ನು ಸಿಎಂ ಮಾಡಿದೆ ಎಂದು ತಿಳಿಸಿದರು. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ 47 ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನವರು ಲಿಂಗಾಯತರನ್ನು ಸಿಎಂ ಮಾಡ್ತಾರಾ ಎಂದು ಘೋಷಿಸಲಿ. ಆಗ ಲಿಂಗಾಯತರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಮುಂದೆಯೂ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಲು ಬಿಜೆಪಿ ವರಿಷ್ಟರು ಚಿಂತನೆ ನಡೆಸಿದ್ದಾರೆ. ಆ ತಾಕತ್ತು ಬಿಜೆಪಿಗೆ ಇದೆ. ಮುಂದಿನ ಮುಖ್ಯಮಂತ್ರಿ ನಿರಾಣಿಯವರು ಆಗಲಿ ಎಂದು ಜನರು, ಅಭಿಮಾನದಿಂದ ಹೇಳುತ್ತಾರೆ. ಅದನ್ನು ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಪ್ರಸ್ತುತ ಚುನಾವಣೆಯಲ್ಲಿ ಎಸ್‌ಸಿ ಸಮಾಜಕ್ಕೆ 37, ಎಸ್.ಟಿ ಸಮಾಜಕ್ಕೆ 17, ಒಕ್ಕಲಿಗರಿಗೆ 17, ಬ್ರಾಹ್ಮಣರಿಗೆ 17 ಟಿಕೆಟ್ ನೀಡಿದೆ. ಎಲ್ಲ ಸಮುದಾಯವರಿಗೂ ಸೂಕ್ತ ಆದ್ಯತೆ ನೀಡಲಾಗಿದೆ. ಈ ಚುನಾವಣೆಯಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ 15 ಸ್ಥಾನಗಳಲ್ಲಿ ಕನಿಷ್ಟ 12 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀಳಗಿಯಲ್ಲಿ ನಿರೀಕ್ಷೆ ಮೀರಿ ಸ್ಪಂದನೆ: ಬೀಳಗಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಸ್ಪಂದನೆ ಸಿಗುತ್ತಿದೆ. ನನ್ನ ಅವಧಿಯಲ್ಲಿ 1.27 ಲಕ್ಷಕ್ಕೂ ಅಧಿಕ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಿಸಲಾಗಿದೆ. ನೀರಾವರಿ ವಂಚಿತ ಎತ್ತರ ಪ್ರದೇಶದ ಭೂಮಿಗೆ ನೀರಾವರಿ ಕಲ್ಪಿಸಲು 1 ಸಾವಿರ ಕೊಳವೆ ಬಾವಿ ಕೊರೆಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ 25 ರ್‍ಯಾಂಕ್ ಬರಲು ತರಬೇತಿ ನೀಡಲಾಗಿದೆ. ಪ್ರತಿ ಜಿ.ಪಂ. ವ್ಯಾಪ್ತಿಗೆ ತಲಾ 1 ಒಂದು ಅಂಬ್ಯುಲೆನ್ಸ ನೀಡಲಾಗಿದೆ. ಹೆರಕಲ್ ನಲ್ಲಿ ಬೃಂದಾವನ ಮಾದರಿಯಲ್ಲಿ ಪಾರ್ಕ್, ಆಲಮಟ್ಟಿಯಿಂದ ಹಿನ್ನೀರ ವ್ಯಾಪ್ತಿಯಲ್ಲಿ ಜಲ ಸಾಗರ, ಚಿಕ್ಕಸಂಗಮದಲ್ಲಿ ಪಕ್ಷಧಾಮ ಹೀಗೆ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈ ಕಾರ್ಯ ನನಗೆ ತೃಪ್ತಿ ತಂದಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ ಉಪಸ್ಥಿತರಿದ್ದರು.