ಬೆಂಗಳೂರು: ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಅಸಮಧಾನದ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಮತ್ತು ರಾಮದಾಸ್ ಅವರು ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಫೋಟೊವೊಂದು ವೈರಲ್ ಆಗಿದೆ.
ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಸಮಧಾನಗೊಂಡಿರುವ ಇವರು ನಿರಾಣಿಯವರ ಮನೆಯಲ್ಲಿ ಸಭೆ ಸೇರಿದ್ದಾರೆ ಎಂದು ಈ ಚಿತ್ರ ವೈರಲ್ ಆಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮುರುಗೇಶ್ ನಿರಾಣಿ, ಈ ಚಿತ್ರ ಎರಡುವರೆ ತಿಂಗಳ ಹಳೆಯದಾಗಿದೆ ಎಂದಿದ್ದಾರೆ.
ಎರಡುವರೆ ತಿಂಗಳ ಹಿಂದೆ ರಾಮದಾಸ್ ಮತ್ತು ಉಮೇಶ್ ಕತ್ತಿಯವರು ನನ್ನ ಮನೆಗೆ ಬಂದಿದ್ದರು. ಅದು ಸ್ನೇಹಪೂರ್ವಕ ಭೇಟಿಯಷ್ಟೇ. ಸಿಎಂ ಬಿಎಸ್ ವೈ ವಿರುದ್ಧ ಯಾವುದೇ ಅಸಮಧಾನದಿಂದ ಭೇಟಿಯಾಗಿಲ್ಲ ಎಂದಿದ್ದಾರೆ. ಬೇರೆ ಬೇರೆ ಶಾಸಕರು ಭೇಟಿಯಾಗುವ ಪರಿಪಾಠವಿದೆ. ಈ ಹಿನ್ನಲೆಯಲ್ಲಿ ಭೇಟಿಯಾಗಿದ್ದೇವೆ ಅಷ್ಟೇ ಎಂದಿದ್ದಾರೆ.
ಉಮೇಶ್ ಕತ್ತಿಯವರು ಹಿರಿಯ ಶಾಸಕರು. ಮೊದಲ ಹಂತದಲ್ಲಿ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಆದರೆ ಆಗಿಲ್ಲ ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಪದವಿ ಕೊಡಬೇಕು ಎಂದು ನಿರಾಣಿ ಹೇಳಿದ್ದಾರೆ.
ಸಚಿವನನ್ನಾಗಿ ಮಾಡಿದರೆ ನಾನು ಉತ್ತಮ ಕೆಲಸ ಮಾಡಬಲ್ಲೆ. ಆದರೆ ನನಗೆ ಯಾವುದೇ ಅಸಮಧಾನವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.