ಧಾರವಾಡ: ಸಾಂಸ್ಕೃತಿಕ ಮಟ್ಟ ಕುಸಿಯುತ್ತಿರುವ ಇಂದಿನ ದಿನಮಾನದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾತ್ರಾ ಮಹೋತ್ಸವ, ಉತ್ಸವಗಳಲ್ಲಿ ಯುವ ಪೀಳಿಗೆ ತೊಡಗಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಮುರುಘಾ ಮಠದಲ್ಲಿ ಗುರುವಾರದಿಂದ ಆರಂಭಗೊಂಡ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಯುವಕರು ಉತ್ಸವ, ಸಮಾರಂಭಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ.
ಈ ಕಾರ್ಯಗಳು ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿಂತಿರುತ್ತವೆ.ಇದಲ್ಲದೇ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕೇವಲ ಕೊಲೆ-ದರೋಡೆ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಇಂತಹ ಸಮಯದಲ್ಲಿ ನಮ್ಮತನ ಉಳಿಸಿಕೊಳ್ಳುವುದಕ್ಕಾಗಿ ಜಾತ್ರಾ ಮಹೋತ್ಸವ ನಡೆಯುತ್ತವೆ.
ಸಮಾಜದ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆ ಹೆಚ್ಚೆಚ್ಚು ತೊಡಗುವಂತೆ ಮಾಡಬೇಕು ಎಂದರು. ವೀರಣ್ಣ ಮತ್ತಿಗಟ್ಟಿ ಮಾತನಾಡಿ, ಮಾನವೀಯ ಮೌಲ್ಯಗಳು ವಿಕಸನಗೊಳ್ಳಲು ಶಿಕ್ಷಣ ಮುಖ್ಯ. ಆ ಕಾಲದಲ್ಲಿ ಶಿಕ್ಷಣ ನೀಡಲು ಕಾಯಕಲ್ಪ ಹಾಕಿದ್ದು ಧಾರವಾಡದ ಮುರುಘಾ ಮಠ ಎಂದು ಹೇಳಿದರು.
ಚಿತ್ರದುರ್ಗದ ಮುರುಘ ರಾಜೇಂದ್ರ ಸಂಸ್ಥಾನ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೋಹನ ಲಿಂಬಿಕಾಯಿ, ಪಂಪಾವತಿ ಮರಿಗೌಡರ ಪಾಟೀಲ, ನೀಲಂ ಬಾಳಿಕಾಯಿ ಇದ್ದರು.