ಒಂದು ಕಡೆ ಅಲೆಗಳ ಭೋರ್ಗರೆತ, ಇನ್ನೊಂದು ಕಡೆ ಮಳೆಯ ಆರ್ಭಟ, ಇದರ ನಡುವೆ ಇಂಪೆನಿಸುವ ಒಂದು ಪ್ರೇಮ ಕಾವ್ಯ… ಮಾತು, ಮೌನ, ಪ್ರೀತಿ, ಶೃಂಗಾರ, ವಿರಹ ಜೊತೆಗೊಂದಿಷ್ಟು ಕೌತುಕ, ರೋಚಕತೆ ಇವುಗಳ ಸಂಗಮವೇ ಮರ್ಫಿ.
ಈ ವಾರ ತೆರೆಕಂಡ ಮರ್ಫಿ ಸಿನಿಮಾ, ಕಡಲ ಅಲೆಗಳ ನಡುವೆ ದೋಣಿ ಸಾಗುವಂತೆ ಪ್ರೇಕ್ಷಕರನ್ನು ಸಂಬಂಧಗಳ ಅಲೆಯಲ್ಲಿ ತೇಲಿಸುತ್ತದೆ. ಚಿತ್ರ ಮುಗಿದ ಮೇಲೂ ಮರ್ಫಿಯ ಪಾತ್ರಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ.
ನೋಡುವ ದೃಶ್ಯ, ಕೇಳುವ ಸಂಭಾಷಣೆ, ಕಥೆ ಸಾಗುವ ಹಾದಿ ಎಲ್ಲವೂ ರೋಮಾಂಚನ. ಚಿತ್ರಕ್ಕೆ ಕಥೆ ಬರೆದಿರುವ ಪ್ರಭು ಮುಂಡ್ಕೂರ್ ಅವರೇ ನಾಯಕನ ಸ್ಥಾನ ಅಲಂಕರಿಸಿದ್ದರಿಂದ ಚಿತ್ರವನ್ನು ಅತ್ಯಾಪ್ತವಾಗಿ ಪ್ರಸ್ತುತಪಡಿಸಿದ್ದಾರೆ. ಇದನ್ನು ಕಥೆ ಎನ್ನುವುದಕ್ಕಿಂತ ಕಾಡುವ ಪ್ರೇಮ ಕಾವ್ಯ ಎಂದರೆ ಬಹು ಸೂಕ್ತ. ಡೆವಿಡ್, ಜನನಿ, ಜೊಸೆಫ್ ಕಥೆಯ ಮುಖ್ಯ ಪಾತ್ರಗಳು.
ಇಲ್ಲಿ ಮರ್ಫಿ ಹೆಸರು ಸಾಂದರ್ಭಿಕ. ಇಲ್ಲೊಂದು ವಿಶೇಷ ವಸ್ತುವಿದೆ. ಈ ಮೂರು ಪಾತ್ರಗಳಿಗೆ ಕೊಂಡಿಯಾಗಿ, ಹೃದಯದ ಸಂವಹನಕ್ಕೆ ಕಿವಿಯಾಗಿರುವ ಆ ವಸ್ತು, ಚಿತ್ರವನ್ನು ಮುನ್ನಡೆಸುವ ಒಂದು ಮುಖ್ಯ ಪಾತ್ರವಾಗಿದೆ. ಆ ವಸ್ತು ಏನೆಂಬುದನ್ನು ಸಿನಿಮಾದಲ್ಲಿ ನೋಡಿದರೆ ಚೆನ್ನ.
ಸದಾ ಭೋರ್ಗರೆವ ಅಲೆಗಳು ಒಮ್ಮೆಲೆ ಶಾಂತವಾದಾಗ ಆವರಿಸುವ ಗಾಢ ಮೌನವೇ ಚಿತ್ರದ ಮಧ್ಯಂತರ. ಅಪ್ಪನ ಪ್ರೀತಿಗೆ ನೆರವಾಗುವ ಮಗ, ಮಗನ ಪ್ರೀತಿಗೆ ಪ್ರಿಯಕರನನ್ನು ತ್ಯಜಿಸುವ ಅಮ್ಮ, ಕಥೆಗೆ ತಿರುವು ನೀಡುವ ಅಪಘಾತ… ಎಲ್ಲ ಅಸ್ಪಷ್ಟಗಳಿಗೆ ಚಿತ್ರಾಂತ್ಯದಲ್ಲಿ ಉತ್ತರ ದೊರೆಯುತ್ತದೆ.
ಮಾತು-ಮೌನಗಳ ನಡುವೆ ಮರ್ಫಿ ಬರ್ಫಿಯಂತೆ ಸಿಹಿ ನೆನಪುಗಳನ್ನು ಬಿಚ್ಚಿಡುತ್ತದೆ. ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್ ಅವರ ಅಭಿನಯ ಇಷ್ಟವಾಗುವ ಜೊತೆಗೆ ಪಾತ್ರದ ತೀವ್ರತೆ ಹೆಚ್ಚಿಸುತ್ತದೆ.. ಪಾತ್ರಗಳ ಭಾವೋದ್ವೆಗ, ರಮ್ಯತೆ, ರೋಚಕತೆಗಳನ್ನು ರಸವತ್ತಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಳಾ ಹಾಗೂ ದತ್ತಣ್ಣ ಅವರ ಪಾತ್ರಗಳೂ ಗಮನ ಸೆಳೆಯುತ್ತವೆ. ಚಿತ್ರ ಸಾಗುವ ಹಾದಿಯಲ್ಲಿ ನಡುವೆ ಅರಳುವ ಕಾವ್ಯದ ಮಾತುಗಳು, ಕೊಂಕಣಿ ಸಂಭಾಷಣೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಆದರ್ಶ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರಗು ತಂದಿದೆ. ಕಥೆಗೆ ತಕ್ಕ ಪ್ರಕೃತಿಯ ಸೊಬಗು ಇಲ್ಲಿ ಅನಾವರಣವಾಗಿದೆ. ಕಾಡುವ ಕಥೆಯೊಂದನ್ನು ಕಣ್ತುಂಬಿಕೊಳ್ಳಬೇಕೆಂದರೆ “ಮರ್ಫಿ’ ಉತ್ತಮ ಆಯ್ಕೆ.
ನಿತೀಶ ಡಂಬಳ