ಹೊಸ ಬಗೆಯ ಸಿನಿಮಾ ಮಾಡಬೇಕು, ರೆಗ್ಯುಲರ್ ಶೈಲಿಯನ್ನೇ ಬ್ರೇಕ್ ಮಾಡಬೇಕು, ಆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಬೇಕು ಎಂದು ಕನಸು ಕಾಣುವ ಸಿನಿ ಮನಸ್ಸುಗಳಿಗೇನು ಕೊರತೆಯಿಲ್ಲ. ಆದರೆ, ಕನಸು ನನಸು ಮಾಡುವುದು ಸುಲಭದ ಮಾತಲ್ಲ. ಈ ವಿಚಾರದಲ್ಲಿ “ಮರ್ಫಿ’ ತಂಡ ಕನಸನ್ನು ಸಾಕಾರಗೊಳಿಸಿದೆ.
ಹೌದು, “ಮರ್ಫಿ’ ಹೀಗೊಂದು ಸಿನಿಮಾ ಕನ್ನಡದಲ್ಲಿ ತಯಾರಾಗಿದ್ದು, ಚಿತ್ರ ಇಂದು ತೆರೆಕಾಣುತ್ತಿದೆ. ಈ ಹಿಂದೆ “ಉರ್ವಿ’ ಸಿನಿಮಾ ನಿರ್ದೇಶನ ಮಾಡಿರುವ ಪ್ರದೀಪ್ ವರ್ಮಾ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಪ್ರಭು ಮುಂಡ್ಕೂರು ಈ ಸಿನಿಮಾದ ನಾಯಕ.ಈ ಸಿನಿಮಾ ಮೂಲಕ ಹೊಸ ಬ್ರೇಕ್ ಸಿಗುವ ನಿರೀಕ್ಷೆ ಪ್ರಭು ಅವರಿಗಿದೆ. ಈ ಚಿತ್ರವನ್ನು ಸೋಮಣ್ಣ ಟಾಕೀಸ್ ಹಾಗೂ ವರ್ಣಸಿಂಧು ಸ್ಟುಡಿಯೋಸ್ ಸೇರಿ ನಿರ್ಮಿಸಿದೆ. ನಿರ್ದೇಶನದ ಜೊತೆಗೆ ಪ್ರದೀಪ್ ವರ್ಮಾ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ.
ಚಿತ್ರದಲ್ಲಿ ಪ್ರಭು ಮುಂಡ್ಕೂರ್, ರೋಶಾನಿ ಪ್ರಕಾಶ್, ಇಳಾ, ಮಹಾಂತೇಶ್, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ.
“ಮರ್ಫಿ’ ಸಂಬಂಧಗಳ ಮೌಲ್ಯ ಸಾರುವ ಸಿನಿಮಾ ಎನ್ನುವುದು ನಾಯಕ ಪ್ರಭು ಮಾತು. ಈ ಕುರಿತು ಮಾತನಾಡುವ ಅವರು, “ಇವತ್ತು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಾರರ್, ಆ್ಯಕ್ಷನ್, ಅಂಡರ್ ವರ್ಲ್ಡ್ನಂತಹ ಡಾರ್ಕ್ ಶೇಡ್ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಆದರೆ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯದಂತಹ ಮೌಲ್ಯ ಸಾರುವ ಸಿನಿಮಾಗಳು ಬರುತ್ತಿಲ್ಲ. ಇದೇ ಕಾರಣದಿಂದ ನಾನು ಹಾಗೂ ಪ್ರದೀಪ್ ವರ್ಮಾ ಒಂದು ಮೌಲ್ಯಯುತ “ಯು’ ಸರ್ಟಿಫಿಕೇಟ್‌ನ, ಇಡೀ ಕುಟುಂಬ ನೋಡುವ ಸಿನಿಮಾ ಮಾಡಬೇಕೆಂಬ ಕನಸು ಕಂಡೆವು. ಆ ಕನಸು ಈಗ ನನಸಾಗಿದೆ. ಸಂಬಂಧಗಳ ಮೌಲ್ಯವೇನು, ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಅಂಶವಿದೆ. ಸಿನಿಮಾದ ಜಾನರ್ ಬಗ್ಗೆ ಹೇಳುವುದಾದರೆ ಇದೊಂದು ರೊಮ್ಯಾಂಟಿಕ್ ಡ್ರಾಮಾ. ಹಲವು ಶೇಡ್‌ನೊಂದಿಗೆ ಕಥೆ ಸಾಗಿದೆ’ ಎನ್ನುತ್ತಾರೆ.
ಸಿನಿಮಾದ ಕಥೆ ಗೋವಾ ಹಿನ್ನೆಲೆಯಲ್ಲಿ ಸಾಗುತ್ತದೆ. ಅದೇ ಕಾರಣದಿಂದ ಚಿತ್ರದ ಬಹುಪಾಲು ಚಿತ್ರೀಕರಣ ಗೋವಾದಲ್ಲಿ ನಡೆದಿದೆ