ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಶುಕ್ರವಾರ ತಡರಾತ್ರಿ ಧೂಳಿನ ವಿಚಾರದಲ್ಲಿ ಜೆಸಿಬಿ ಮಾಲೀಕನನ್ನು ಪರಿಚಯಸ್ಥನೇ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ಹೆಮ್ಮಿಗೆಪುರ ನಿವಾಸಿ ಎಚ್.ಎಸ್. ಲಿಂಗ ಮೂರ್ತಿ(48) ಕೊಲೆಯಾದವರು. ಈ ಸಂಬಂಧ ಲಿಂಗಮೂರ್ತಿ ಸಹೋದರ ಗೋವಿಂದರಾಜು ದೂರು ನೀಡಿದ್ದು ಹೆಮ್ಮಿಗೆಪುರ ನಿವಾಸಿ ಚಿರಂಜೀವಿ ಅಲಿಯಾಸ್ ಚಿರಿ (40) ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಲಿಂಗಮೂರ್ತಿ ಮತ್ತು ಅವರ ಸಹೋದರ ಗೋವಿಂದರಾಜು ಗುತ್ತಿಗೆದಾರರಾಗಿದ್ದು ಹೆಮ್ಮಿಗೆಪುರ ಐರಾ ಸ್ಕೂಲ್ ಪಕ್ಕದ ಖಾಲಿ ಜಾಗದಲ್ಲಿ ಸುರಿದಿದ್ದ ಮಣ್ಣನ್ನು ಶುಕ್ರವಾರ ತಡರಾತ್ರಿ ಜೆಸಿಬಿ ಯಂತ್ರದ ಮೂಲಕ ಲಿಂಗಮೂರ್ತಿ ಮಟ್ಟ ಮಾಡುತ್ತಿದ್ದರು. ಅದೇ ವೇಳೆ ಸ್ಥಳಕ್ಕೆ ಇಬ್ಬರು ಸಹಚರರ ಜತೆ ಬಂದ ಚಿರಂಜೀವಿ, ಮಣ್ಣನ್ನು ಮಟ್ಟ ಮಾಡುವುದು ಮಾತ್ರವಲ್ಲ, ನೀರು ಹಾಕು. ಇಲ್ಲವಾದರೆ ಧೂಳು ಹೆಚ್ಚಾಗುತ್ತದೆ ಎಂದು ಏರು ಧ್ವನಿಯಲ್ಲಿ ಹೇಳಿದ್ದಾನೆ. ಅದಕ್ಕೆ ಲಿಂಗಮೂರ್ತಿ ನೀರು ಹಾಕುವುದು ನಮ್ಮ ಕೆಲಸ ಅಲ್ಲ. ಯಾವ ಕಾರಣಕ್ಕೆ ಗುತ್ತಿಗೆ ಪಡೆದುಕೊಂಡಿದ್ದೆವೋ ಆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಲಿಂಗಮೂರ್ತಿ ಕೂಡಲೇ ಸಹೋದರ ಗೋವಿಂದರಾಜುಗೆ ಕರೆ ಮಾಡಿ ಚಿರಂಜೀವಿ ಗಲಾಟೆ ಮಾಡುತ್ತಿರುವ ವಿಚಾರ ತಿಳಿಸಿ ಸ್ಥಳಕ್ಕೆ ಬರುವಂತೆ ಕೋರಿದ್ದಾರೆ. ಮತ್ತೂಂದೆಡೆ ಗಲಾಟೆ ವಿಕೋಪಕ್ಕೆ ಹೋದಾಗ ಆರೋಪಿಗಳು ಚಾಕುವಿನಿಂದ ಲಿಂಗಮೂರ್ತಿ ಎದೆಗೆ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಿಂಗಮೂರ್ತಿ ಮತ್ತೂಮ್ಮೆ ಸಹೋದರನಿಗೆ ಕರೆ ಮಾಡಿ ಚಿರಂಜೀವಿ ಎದೆಗೆ ಚಾಕು ಹಾಕಿದ್ದಾನೆ. ಬೇಗ ಬರುವಂತೆ ಹೇಳಿದ್ದಾನೆ. ಆಗ ಕೂಡಲೇ ಗೋವಿಂದರಾಜು, ಸ್ನೇಹಿತ ಕುಮಾರ್ ಹಾಗೂ ಮಂಜು ಎಂಬುವರು ಸ್ಥಳಕ್ಕೆ ಬಂದು ಲಿಂಗಮೂರ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಲಿಂಗಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪ್ಟಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತಡರಾತ್ರಿಯೇ ಪ್ರಮುಖ ಆರೋಪಿ ಚಿರಂಜೀವಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಣ್ಣು ದಾನ ಮಾಡಿದ ಲಿಂಗಮೂರ್ತಿ :
ಲಿಂಗಮೂರ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ವೈದ್ಯರು ತೀವ್ರ ರಕ್ತಸ್ರಾವ ವಾಗಿರುವುದರಿಂದ ಬದುಕುವುದು ಕಷ್ಟ ಎಂದಿದ್ದಾರೆ. ಆಗ ಕೂಡಲೆ ಲಿಂಗಮೂರ್ತಿ, ನಾನು ಬದುಕುವುದಿಲ್ಲ ಎಂದಾದರೆ, ನನ್ನ ಎರಡು ಕಣ್ಣು ಗಳನ್ನು ದಾನ ಮಾಡುತ್ತೇನೆ ಎಂದಿದ್ದಾರೆ. ಕೆಲ ಹೊತ್ತಿನ ಬಳಿ ಲಿಂಗಮೂರ್ತಿ ಮೃತಪ್ಟಟಿದ್ದಾರೆ ಎಂದು ಪೊಲೀಸರು ಹೇಳಿದರು.
ಸಹೋದರರ ವಿರುದ್ಧ ಹಿಂದೆಯೂ ಗಲಾಟೆ :
ಚಿರಂಜೀವಿ ಈ ಹಿಂದೆಯೂ ಲಿಂಗಮೂರ್ತಿ ಮತ್ತು ಅವರ ಸಹೋದರ ಗೋವಿಂದರಾಜು ವಿರುದ್ಧ ಉದ್ದೇಶಪೂರ್ವಕವಾಗಿ ಗಲಾಟೆ ಮಾಡುತ್ತಿದ್ದ. ಶುಕ್ರವಾರ ತಡರಾತ್ರಿ 12 ಗಂಟೆ ಸುಮಾರಿಗೆ ಉದ್ದೇಶಪೂರ್ವಕವಾಗಿಯೇ ಜೆಸಿಬಿ ಯಂತ್ರದ ಕೆಲಸ ಮಾಡುವ ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾನೆ. ಅಲ್ಲದೆ ಕೊಲೆ ಮಾಡುವ ಉದ್ದೇಶದಿಂದಲೇ ಚಾಕುವನ್ನು ಜತೆಗೆ ತಂದಿದ್ದ ಎಂದು ಪೊಲೀಸರು ಹೇಳಿದರು.