ಬೆಂಗಳೂರು: ಯಲಹಂಕ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್‌ಕುಮಾರ್ (27) ಎಂಬಾತನನ್ನು ಅಲ್ಲಾಳಸಂದ್ರದ ಸಮೀಪ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ಕುರಿತು ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಅರುಣ್ ಕುಮಾರ್ ಸಂಬಂಧಿ ಅಭಿಷೇಕ್ ನೀಡಿದ ಮಾಹಿತಿ ಆಧರಿಸಿ ವಿಶೇಷ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.
ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಅರುಣ್, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದ. ಹೀಗಾಗಿ ಆತನನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. ಹಳೆ ವೈಷಮ್ಯ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ. ರಾಜಕೀಯ ನಂಟು ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ತೆಗೆಯುವಾಗ ಬಂದ್ರು: ಸಂಬಂಧಿ ಅಭಿಷೇಕ್ ಹಾಗೂ ಸ್ನೇಹಿತರ ಜತೆ ಭಾನುವಾರ ರಾತ್ರಿ ಯಶವಂತಪುರಕ್ಕೆ ಸಿನಿಮಾ ವೀಕ್ಷಿಸಲು ಅರುಣ್ ತೆರಳಿದ್ದರು. ಆತ ತನ್ನ ಕಾರನ್ನು ಅಲ್ಲಾಳಸಂದ್ರ ಸೇತುವೆ ಸಮೀಪ ನಿಲ್ಲಿಸಿದ್ದರಿಂದ, ಸಿನಿಮಾ ನೋಡಿದ ನಂತರ ಸ್ನೇಹಿತರು ಅರುಣ್‌ನನ್ನು ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಡ್ರಾಪ್ ಮಾಡಿದ್ದರು.
ಈ ವೇಳೆ ಅಭಿಷೇಕ್ ಜತೆ ಕಾರು ತೆಗೆಯಲು ಹೋದ ಅರುಣ್‌ಕುಮಾರ್ ಮೇಲೆ ಮೂರ್‍ನಾಲ್ಕು ಮಂದಿ ಮುಸುಕುಧಾರಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಇದನ್ನು ನೋಡಿ ಆತಂಕಗೊಂಡ ಅಭಿಷೇಕ್ ಪ್ರಾಣ ಉಳಿಸಿಕೊಳ್ಳಲು ಓಡಿಹೋಗಿದ್ದಾರೆ. ಇತ್ತ ಅರುಣ್‌ಕುಮಾರ್‌ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ, ಗ್ರಾನೈಟ್ ಮಳಿಗೆಯೊಳಗೆ ಹೋದ ಕೂಡಲೇ ಮನಸೋ ಇಚ್ಛೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದೆ.
ದುಷ್ಕ,ರ್ಮಿಗಳಿಂದ ತಪ್ಪಿಸಿಕೊಂಡ ಅಭಿಷೇಕ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಸ್ಥಳೀಯರು ಅರುಣ್‌ಕುಮಾರ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು. ಆದರೆ ಆವೇಳೆಗಾಗಲೇ ಅರುಣ್ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣ ಮೂರ್ತಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ವಿಶೇಷ ತಂಡಕ್ಕೆ ಸೂಚಿಸಿದ್ದಾರೆ.