ಹೊಸದಿಲ್ಲಿ: ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಸೇನಾ ಅಧಿಕಾರಿಯೊಬ್ಬರ 35 ರ ಹರೆಯದ ಪತ್ನಿಯನ್ನು ಕತ್ತು ಸೀಳಿ ಹತ್ಯೆಗೈಯಲಾಗಿದ್ದು, ನಿಗೂಢ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೋರ್ವ ಅಧಿಕಾರಿಯನ್ನು ಭಾನುವಾರ ಬಂಧಿಸಿದ್ದಾರೆ.
ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ ದ್ವಿವೇದಿ ಅವರ ಶವ ಶನಿವಾರ ಕತ್ತು ಸೀಳಿಕೊಂಡ ರೀತಿಯಲ್ಲಿ ದೆಹಲಿಯ ಕಂಟೋನ್‌ಮೆಂಟ್ ರೈಲು ನಿಲ್ದಾಣದ ಬಳಿ ಪತ್ತೆಯಾಗಿತ್ತು. ಮೊದಲು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎನ್ನಲಾಗಿತ್ತು.
ಪೊಲೀಸರ ತನಿಖೆ ವೇಳೆ ಮೇಜರ್ ನಿಖಿಲ್ ಹಂದಾ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಮೀರತ್‌ನಲ್ಲಿ ಭಾನುವಾರ ವಶಕ್ಕೆ ಪಡೆಯಲಾಗಿದೆ.
ಬೆಳಗ್ಗೆ 10.30 ರ ವೇಳೆಗೆ ಶೈಲಜಾ ಅವರು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಗಾಗಿ ಹೊಂಡಾ ಸಿಟಿ ಕಾರಿನಲ್ಲಿ ತೆರಳಿದ್ದು ಬಳಿಕ ಶವವಾಗಿ ಪತ್ತೆಯಾಗಿದ್ದರು. ಮೊದಲು ಅಪರಿಚಿತ ಮಹಿಳೆಯ ಶವವೆಂದು ಹೇಳಲಾಗಿತ್ತು ಬಳಿಕ ಸಂಜೆ ಪತಿ ಮೇಜರ್ ಅಮಿತ್ ಪತ್ನಿಯ ಶವದ ಗುರುತು ಪತ್ತೆ ಹಚ್ಚಿದ್ದರು.
ಫೋನ್ ಕರೆಗಳ ದಾಖಲೆ ಪರಿಶೀಲಿಸಿದಾಗ ಆರೋಪಿ ಮೇಜರ್ ನಿಖಿಲ್ ಹಂದಾ ಶೈಲಜಾಗೆ ಕರೆ ಮಾಡಿರುವುದು ಕಂಡು ಬಂದಿದ್ದು, ಕಿರುಕುಳವನ್ನೂ ನೀಡಿದ್ದರು ಎನ್ನಲಾಗಿದೆ.
ಅಮೀತ್ ದ್ವಿವೇದಿ ಅವರು ನಾಗಾಲ್ಯಾಂಡ್‍ನ ಜಾಕ್ಲೀಸ್ ಯುನಿಟ್‍ನ ಕರ್ತವ್ಯ ನಿರತರಾಗಿದ್ದರು, ಪತ್ನಿ ಶೈಲಜಾ ಮತ್ತು ಆರರ ಹರೆಯದ ಪುತ್ರನೊಂದಿಗೆ ವಾಸವಾಗಿದ್ದರು. 2 ತಿಂಗಳ ಹಿಂದಷ್ಟೇ ರಜೆ ಯ ಮೇಲೆ ದೆಹಲಿಗೆ ಬಂದಿದ್ದರು. ಕೆಲ ದಿನಗಳಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸದಸ್ಯರಾಗಿ ಸುಡಾನ್‍ಗೆ ತೆರಳುವವರಿದ್ದರು.