Advertisement

ಅನೈತಿಕ ಸಂಬಂಧದ ಹಿನ್ನೆಲೆ ನಡೆದ ಕೊಲೆ: ಇಬ್ಬರ ಬಂಧನ

03:45 AM Jul 04, 2017 | Team Udayavani |

ಮಡಿಕೇರಿ: ಮಕ್ಕಂದೂರು ಗ್ರಾಮದಲ್ಲಿ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ರಾಜಲಿಂಗಂ(45) ಮೃತ ದೇಹದ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದು, ಅನೈತಿಕ ಸಂಬಂಧವೇ ಈ ಭೀಕರ ಕೊಲೆಗೆ ಕಾರಣವೆಂದು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್‌ ತಿಳಿಸಿದ್ದಾರೆ.

Advertisement

ರಾಜಲಿಂಗಂ ಅವರ ಪತ್ನಿ ಮಣಿ ಹಾಗೂ ಆಕೆಯ ಪ್ರಿಯಕರ ಅದೇ ಬಡಾವಣೆಯ ನಿವಾಸಿ, ಜೀಪ್‌ ಚಾಲಕ ಉಮ್ಮರ್‌(40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ರಾಜೇಂದ್ರಪ್ರಸಾದ್‌, ಆರೋಪಿ ಉಮ್ಮರ್‌ ನೀಡಿದ ಸುಳಿವಿನಂತೆ ಮೃತ ರಾಜಲಿಂಗಂನ ದೇಹದಿಂದ ಬೇರ್ಪಡಿಸಲಾಗಿದ್ದ ತಲೆ ಮತ್ತು ಒಂದು ಕಾಲನ್ನು ಕೂಡ ಪತ್ತೆ ಹಚ್ಚಲಾಗಿದೆ ಎಂದರು.
    
ಕಳೆದ ಜೂ.24 ರಂದು ಮಕ್ಕಂದೂರಿನ ಕುಪ್ಪಂಡ ಮಂದಣ್ಣ ಎಂಬವರ ತೋಟದ ಕೆರೆಯ ಬಳಿಯಲ್ಲಿ ವ್ಯಕ್ತಿಯೊಬ್ಟಾತನ ಕಾಲು ಕತ್ತರಿಸಿ ಬಿದ್ದಿರುವುದು ಮತ್ತು ಕೆರೆಯಲ್ಲಿ ರುಂಡವಿಲ್ಲದ ಮುಂಡ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಕೊಲೆಯಾದ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವ ಸಂದರ್ಭ ಜೂ.16 ರಂದು ಮಣಿ ಎಂಬಾಕೆ ತನ್ನ ಪತಿ ರಾಜಲಿಂಗಂ ನಾಪತ್ತೆಯಾಗಿರುವ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿದು ಬಂತು.

ನಾಪತ್ತೆಯಾದ ವ್ಯಕ್ತಿಯೇ ಹತ್ಯೆಯಾದ ವ್ಯಕ್ತಿಯಾಗಿರಬಹುದು ಎನ್ನುವ ಅನುಮಾನಗಳ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ದೇಹವನ್ನು ಮಣಿ ಅವರಿಗೆ ತೋರಿಸಲಾಯಿತು. ಈ ಸಂದರ್ಭ ಮೃತ ವ್ಯಕ್ತಿಯ ಕೈಯಲ್ಲಿದ್ದ ವ ಎನ್ನುವ ಗುರುತಿನಿಂದ ಹತ್ಯೆಯಾದ ವ್ಯಕ್ತಿ ರಾಜಲಿಂಗಂ ಎನ್ನುವುದು ದೃಢ ಪಟ್ಟಿದೆ.

ಪ್ರಕರಣವನ್ನು ಭೇದಿಸುವ ಸಲುವಾಗಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್‌ ಮತ್ತು ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನ ರಚಿಸಿ ತನಿಖೆಯನ್ನು ಚುರುಕು ಗೊಳಿಸಲಾಯಿತು. ಈ ಸಂದರ್ಭ ರಾಜಲಿಂಗಂ ಅವರ ಪತ್ನಿ ಮಣಿ ಅವರಿಗೆ ಮತ್ತು ಜೀಪ್‌ ಚಾಲಕ ಉಮ್ಮರ್‌ ನಡುವೆ ಅನೈತಿಕ ಸಂಬಂಧವಿರುವುದು ಪತ್ತೆಯಾಯಿತು. ಈ ಸುಳಿವನ್ನು ಆಧರಿಸಿ ಶನಿವಾರ ಸುಂಟಿಕೊಪ್ಪದ ಗದ್ದೆಹಳ್ಳದ ಬಳಿ ಆರೋಪಿ ಉಮ್ಮರ್‌ನನ್ನು ಮತ್ತು ಹತ್ಯೆಗೆ ಆತನಿಗೆ ಪ್ರೇರಣೆ ನಿಡಿದ ಮಣಿಯನ್ನು ಬಂಧಿಸಲಾಯಿತೆಂದು ಎಸ್‌ಪಿ ರಾಜೇಂದ್ರಪ್ರಸಾದ್‌ ತಿಳಿಸಿದರು.

ಹತ್ಯೆಗೈದು ರುಂಡ, ಮುಂಡ ಬೇರ್ಪಡಿಸಿದ
ಆರೋಪಿ ಉಮ್ಮರ್‌ ಕಾರ್ಮಿಕರನ್ನು ಜೀಪ್‌ನಲ್ಲಿ ತೋಟಗಳಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದು, ಅದೇ ಜೀಪ್‌ನಲ್ಲಿ ಮಣಿ ತೆರಳುತ್ತಿದ್ದಳು. ಈ ಸಂದರ್ಭ ಅವರಿಬ್ಬರ ನಡುವೆ ಸಂಪರ್ಕವೇರ್ಪಟ್ಟಿತ್ತು. ಈ ವಿಷಯ ಅರಿತ ರಾಜಲಿಂಗಂ ಮನೆಯಲ್ಲಿ ಪತ್ನಿ ಮಣಿಯೊಂದಿಗೆ ಕಲಹ ನಡೆಸುತ್ತಿದ್ದ. ಇದರಿಂದ ಬೇಸತ್ತ ಮಣಿ ತನ್ನ ಪ್ರಿಯಕರ ಉಮ್ಮರ್‌ನೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಲಾಗಿದೆ.

Advertisement

ಅದರಂತೆ ಜೂ. 13ರಂದು ರಾತ್ರಿ ಮದ್ಯ ಸೇವಿಸಿ ಸುಂಟಿಕೊಪ್ಪದ ಸ್ವಾಗತ್‌ ಬಾರ್‌ ಬಳಿ ಇದ್ದ ರಾಜಲಿಂಗಂನನ್ನು ಉಮರ್‌ ತನ್ನ ಜೀಪ್‌ನಲ್ಲಿ ಸಿಂಕೋನ ಎಸ್ಟೇಟ್‌ನ ಪಕ್ಕದ ರಸ್ತೆಗೆ ಕರೆದೊಯ್ದು ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ ಹಿಂದಿರುಗಿದ್ದ. ಬಳಿಕ ಹತ್ಯೆ ಬಯಲಾಗುವ ಆತಂಕದಿಂದ ಉಮ್ಮರ್‌ ಮತ್ತೆ ಸ್ಥಳಕ್ಕೆ ತೆರಳಿ ಮೃತ ರಾಜಲಿಂಗಂನ ತಲೆ ಮತ್ತು ಎರಡು ಕಾಲುಗಳನ್ನು ಕತ್ತರಿಸಿ, ಮಕ್ಕಂದೂರಿಗೆ ತನ್ನ ಜೀಪಿನಲ್ಲಿ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾನೆ.  ಕಾಲು ಹಾಗೂ ತಲೆಯನ್ನು ಸಮೀಪದಲ್ಲಿ ಹೂತು ಹಾಕಿದ್ದ. ನಂತರ ದೇಹಕ್ಕೆ ಕಲ್ಲೊಂದನ್ನು ಕಟ್ಟಿ ಕೆರೆಗೆ ಹಾಕಿ ತೆರಳಿದ್ದಾಗಿ ಎಸ್‌ಪಿ ರಾಜೇಂದ್ರಪ್ರಸಾದ್‌ ಮಾಹಿತಿ ನೀಡಿದರು. ಆರೋಪಿ ಉಮ್ಮರ್‌ನ ಬಂಧನದೊಂದಿಗೆ ಆತ ನೀಡಿದ ಮಾಹಿತಿಯಂತೆ ಜಿಲ್ಲಾ ಉಪ ದಂಡಾಧಿಕಾರಿಗಳ ಸಮಕ್ಷಮದಲ್ಲಿ ಹೂತು ಹಾಕಿದ್ದ ತಲೆ ಮತ್ತು ಕಾಲನ್ನು ಹೊರತೆಗೆದು ಕ್ರಮ ಕೈಗೊಂಡಿರುವುದರೊಂದಿಗೆ, ಕೃತ್ಯಕ್ಕೆ ಬಳಸಿದ್ದ  ಜೀಪು ಹಾಗೂ ಹತ್ಯಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾ ಗಿದ್ದು, ಉಮ್ಮರ್‌ನನ್ನು ನ್ಯಾಯಾಂಗ ಬಂಧನಕ್ಕೆ ಮತ್ತು ಮಣಿಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ರಾಜೇಂದ್ರಪ್ರಸಾದ್‌ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸ್‌ಐ ಎಸ್‌. ಶಿವ ಪ್ರಕಾಶ್‌, ಸುಂಟಿಕೊಪ್ಪ ಠಾಣಾ ಪಿಎಸ್‌ಐ ಎಚ್‌.ಎಸ್‌. ಬೋಜಪ್ಪ, ಸಿಬಂದಿ ಗಳಾದ ತೀರ್ಥಕುಮಾರ್‌, ಶಿವರಾಜೇಗೌಡ, ಕಾಳಿ ಯಪ್ಪ, ಮಂಜು, ಪೂವಪ್ಪ, ಇಬ್ರಾಹಿಂ, ಕಿರಣ್‌, ಶೋಭಾ, ದಿವ್ಯ, ಮುಸ್ತಾಫ‌, ಸುದೀಶ್‌ ಕುಮಾರ್‌, ಪುಂಡರೀಕಾಕ್ಷ‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next