ಹರ್ಯಾಣ: 2014ರ ಕೊಲೆ ಪ್ರಕರಣದಲ್ಲಿಯೂ ಸ್ವಯಂಘೋಷಿತ ದೇವಮಾನವ ರಾಮ್ ಪಾಲ್ ಹಾಗೂ ಇತರ 13 ಮಂದಿಗೆ ಚಂಡೀಗಢ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದಕ್ಕೂ ಮೊದಲು ಕೊಲೆ ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಕೋರ್ಟ್ ಅಕ್ಟೋಬರ್ 11ರಂದು ರಾಮ್ ಪಾಲ್ ಅನ್ನು ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ ನಾಲ್ಕು ಮಹಿಳೆಯರು ಮತ್ತು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೋರ್ಟ್ ರಾಮ್ ಮತ್ತು ಇತರ 14 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಭಾರತೀಯ ದಂಡ ಸಂಹಿತೆ ಕಲಂ 302(ಕೊಲೆ), 343(ಅಕ್ರಮವಾಗಿ ಕೂಡಿಹಾಕುವುದು) ಮತ್ತು 120ಬಿ(ಒಳಸಂಚು) ಕಾಯ್ದೆಯನ್ವಯ ರಾಮ್ ಪಾಲ್ ಮತ್ತು ಸಹಚರರು ದೋಷಿ ಎಂದು ಕೋರ್ಟ್ ಆದೇಶ ನೀಡಿದೆ.
2014ರ ನವೆಂಬರ್ ನಲ್ಲಿ ಆರೋಪಿ ರಾಮ್ ಪಾಲ್ ನನ್ನು ಬಂಧಿಸುವಂತೆ ಪಂಜಾಬ್ ಹರ್ಯಾಣ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಈ ಸಂದರ್ಭದಲ್ಲಿ ಪೊಲೀಸರು ರಾಮ್ ಪಾಲ್ ಸಟ್ಲೋಕ್ ಅಶ್ರಮದೊಳಕ್ಕೆ ಪ್ರವೇಶಿಸಲು ಹೋದ ವೇಳೆ ರಾಮ್ ಪಾಲ್ ಅನುಯಾಯಿಗಳು ಅಡ್ಡಿಪಡಿಸಿ, ಹಿಂಸಾಚಾರ ನಡೆಸಿದ್ದರು. ಎರಡು ವಾರಗಳ ಘರ್ಷಣೆಯ ನಂತರ ಕೊನೆಗೂ ನವೆಂಬರ್ 19ರಂದು ರಾಮ್ ಪಾಲ್ ನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಅಶ್ರಮದಲ್ಲಿ ಇದ್ದು ಸುಮಾರು 20 ಸಾವಿರ ಮಂದಿಯನ್ನು ಹೊರಹಾಕಿದ್ದರು.
ಘಟನೆ ನಂತರ ರಾಮ್ ಪಾಲ್ ಹಾಗೂ ಇತರರ ವಿರುದ್ಧ 6ಕ್ಕೂ ಅಧಿಕ ಎಫ್ಐಆರ್ ದಾಖಲಾಗಿತ್ತು. ಅಲ್ಲದೇ ಎರಡು ಪ್ರಕರಣಗಳಲ್ಲಿ ರಾಮ್ ಪಾಲ್ ಖುಲಾಸೆಗೊಂಡಿದ್ದು, ಇನ್ನೂ ಎರಡು ಪ್ರಕರಣಗಳು ಬಾಕಿ ಉಳಿದಿದೆ ಎಂದು ವರದಿ ತಿಳಿಸಿದೆ.