Advertisement

ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದವನ ಕೊಲೆ

09:32 AM Jul 30, 2018 | |

ಉಡುಪಿ: ಮಣಿಪಾಲದಲ್ಲಿ ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದ ಗುರುಪ್ರಸಾದ್‌ ಭಟ್‌ (45) ಅವರನ್ನು ಜು. 29ರಂದು ಚೂರಿಯಿಂದ ಇರಿದು ಹತ್ಯೆಗೈಯಲಾಗಿದೆ. ಅಪರಾಹ್ನ 1.20ರ ವೇಳೆಗೆ ಘಟನೆ ನಡೆದಿದ್ದು ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಮಣಿಪಾಲ-ಪೆರಂಪಳ್ಳಿ ರಸ್ತೆಯ ಕಟ್ಟಡವೊಂದರಲ್ಲಿ ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದ ಗುರುಪ್ರಸಾದ್‌ ಮತ್ತು ಇನ್ನೋರ್ವ ಕೆಲಸದವರು ಕ್ಲಬ್‌ ನಲ್ಲಿ ದ್ದಾಗ ದಾಳಿ ನಡೆಸಿದ ತಂಡ ವೊಂದು ದೊಡ್ಡ ಚೂರಿಯಿಂದ ಇರಿದು ಪರಾರಿಯಾಗಿದ್ದು ಗುರು ಪ್ರಸಾದ್‌ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ.

Advertisement

ನಾಲ್ವರ ಕೃತ್ಯ?
ಬಿಳಿ ಬಣ್ಣದ ಬಾಡಿಗೆ ಆಮ್ನಿಯಲ್ಲಿ ಬಂದಿದ್ದ ನಾಲ್ವರ ತಂಡ ಈ ಕೃತ್ಯ ಎಸಗಿದೆ. ಕಟ್ಟಡದ ಮೊದಲ ಅಂತಸ್ತಿ ನಲ್ಲಿರುವ ರಿಕ್ರಿಯೇಷನ್‌ ಕ್ಲಬ್‌ಗ ನುಗ್ಗಿ ಅಲ್ಲಿದ್ದ ಗುರುಪ್ರಸಾದ್‌ ಅವರ ಕುತ್ತಿಗೆಯ ಹಿಂಭಾಗಕ್ಕೆ ಚೂರಿಯಿಂದ ಇರಿದು ಹತ್ಯೆಗೈಯಲಾಗಿದೆ.

ಜನವಿರಲಿಲ್ಲ
ಈ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ಇಸ್ಪೀಟು, ಕೇರಂ ಗೇಮ್‌ಗಳೂ ನಡೆಯುತ್ತಿದ್ದವು. ರವಿವಾರ ಕ್ಲಬ್‌ಗ ಬರುವವರು ಕಡಿಮೆ.  ಮಧ್ಯಾಹ್ನದ ಅನಂತರ ಬರುವವರಿರುತ್ತಾರೆ. ಆದರೆ ಹಿಂದಿನ ದಿನ ಶನಿವಾರ ತಡ ರಾತ್ರಿವರೆಗೂ ಇಲ್ಲಿ ಗೇಮ್‌ಗಳು ನಡೆಯುತ್ತವೆ. ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಘಟನೆ ನಡೆಯುವ ವೇಳೆ ಕೆಲಸದವರೊಬ್ಬರಿದ್ದರು. ಇನ್ನೋರ್ವ ಕೆಲಸದವರು ಹೊರಹೋಗಿದ್ದರು ಎಂದು ತಿಳಿದುಬಂದಿದೆ.

“ಶೀಘ್ರ ಪತ್ತೆ ವಿಶ್ವಾಸ’
ಮಣಿಪಾಲದ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಶಾಸಕ ಕೆ. ರಘುಪತಿ ಭಟ್‌ ಅವರನ್ನು ಮಾಧ್ಯಮದವರು ಮಾತನಾಡಿಸಿ ದಾಗ, “ಗುರುಪ್ರಸಾದ್‌ ಭಟ್‌ ನನ್ನ ಸೋದರ ಮಾವನ ಮಗ. ಆದರೆ ಈತನ ಜತೆ ಮಾತನಾಡದೆ ಅನೇಕ ವರ್ಷಗಳೇ ಆಗಿವೆ. ಆತ ಅವನ ವ್ಯವಹಾರದ ಬಗ್ಗೆ ಕುಟುಂಬಿಕರ ಜತೆ ಮಾತ ನಾಡುತ್ತಿರಲಿಲ್ಲ. ರಿಕ್ರಿಯೇಷನ್‌ ವಿಚಾರ ಕುಟುಂಬಿಕರಿಗೆ ಗೊತ್ತಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು. “ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವುದಾಗಿ ಎಸ್‌ಪಿ ತಿಳಿಸಿದ್ದಾರೆ’ ಎಂದು ಭಟ್‌ ಇದೇ ಸಂದರ್ಭದಲ್ಲಿ ಹೇಳಿದರು.

ನೆರವಾಗಲಿದೆ ಸಿಸಿಟಿವಿ
ರಿಕ್ರಿಯೇಷನ್‌ ಕ್ಲಬ್‌ ಲಾಡ್ಜ್ ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಇರುವ ಕಟ್ಟಡದಲ್ಲೇ ಇದೆ. ಇಲ್ಲಿನ ಕಟ್ಟಡಗಳಲ್ಲಿ ಹಾಗೂ ಕ್ಲಬ್‌ನ ಒಳಗೆ ಕೂಡ ಸಿಸಿಟಿವಿ ಅಳವಡಿಸಲಾಗಿದ್ದು ಅವುಗಳಲ್ಲಿ  ಕೃತ್ಯದ ಎಲ್ಲ ದೃಶ್ಯಗಳು ಸೆರೆಯಾಗಿವೆ. ಇದನ್ನು ಪೊಲೀಸರು ಕೂಡ ಗಮನಿಸಿದ್ದಾರೆ. ಹಾಗಾಗಿ ಕೊಲೆಗಾರರ ಪತ್ತೆಗೆ ಸಿಸಿಟಿವಿ ಫ‌ೂಟೇಜ್‌ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಪಿ ಲಕ್ಷ್ಮಣ್‌ ನಿಂಬರಗಿ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ವೃತ್ತ ನಿರೀಕ್ಷಕ ಸಂಪತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. “ಅಪರಿಚಿತ ವ್ಯಕ್ತಿಗಳು ಕೃತ್ಯವೆಸಗಿದ್ದಾರೆ. ಬೇರೆ ಮಾಹಿತಿ ತನಿಖೆಯಿಂದ‌ ಗೊತ್ತಾಗಲಿದೆ’ ಎಂದು ಎಸ್‌ಪಿ ಪ್ರತಿಕ್ರಿಯಿಸಿದ್ದಾರೆ.

Advertisement

ಮೂವರ ಬಂಧನ
ಆರೋಪಿಗಳಾದ ಕಲ್ಯಾಣಪುರದ ಸುಜಿತ್‌ ಪಿಂಟೋ, ಕಕ್ಕುಂಜೆಯ ರಾಜೇಶ ಪೂಜಾರಿ ಮತ್ತು ಕೊಡಂಕೂರಿನ ಪ್ರದೀಪ್‌ ಅಲಿಯಾಸ್‌ ಅನ್ನು ಅವರನ್ನು ರಾತ್ರಿ 7.30ರ ವೇಳೆಗೆ ಪೊಲೀಸರು ಕಂಡೂರಿನ ಬಳಿ ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಹಿಂದಿನ ದಿನ ಜಗಳ?
ಶನಿವಾರ ತಡರಾತ್ರಿಯವರೆಗೂ ಗುರುಪ್ರಸಾದ್‌ ಮತ್ತು ವ್ಯಕ್ತಿಯೋರ್ವನ ನಡುವೆ ಮೊಬೈಲ್‌ನಲ್ಲಿ ಭಾರೀ ವಾಗ್ವಾದವಾಗುತ್ತಿತ್ತು. ಹಣಕಾಸಿನ ವಿಚಾರ ವಾಗಿಯೇ ಪರಸ್ಪರ ಮಾತುಕತೆ ನಡೆಯುತ್ತಿತ್ತು ಎನ್ನಲಾಗಿದ್ದು ಫೋನ್‌ ಕರೆ ವಿವರ ಕೂಡ ಪೊಲೀಸರಿಗೆ ನೆರವಾಗಲಿದೆ. ಹಣಕಾಸಿನ ವಿಚಾರವಾಗಿ ಇತರ ಹಲವರೊಂದಿಗೂ ವೈಷಮ್ಯವಿತ್ತು ಎನ್ನಲಾಗಿದೆ.

ಹಲವು ವ್ಯವಹಾರ
ಗುರುಪ್ರಸಾದ್‌ ಭಟ್‌ ಉಡುಪಿ ಪುತ್ತೂರಿನ ನಿವಾಸಿ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್‌ವರ್ಟರ್‌, ಕಾರ್‌ ಗ್ಯಾಸ್‌, ಸೈಬರ್‌, ಲ್ಯಾಂಡ್‌ ಲಿಂಕ್ಸ್‌, ಮರದ ಕೆತ್ತನೆ ಮೊದಲಾದ ವ್ಯವಹಾರಗಳನ್ನು ನಡೆಸಿದ್ದರು. ಮಾತ್ರ ವಲ್ಲದೆ ಟ್ಯಾಬ್ಲಾಯ್ಡ ಪತ್ರಿಕೆಯನ್ನು ಕೂಡ ನಡೆಸುತ್ತಿದ್ದರು. ಪ್ರಸ್ತುತ 5 ತಿಂಗಳುಗಳಿಂದ ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದರು. ಕೆಲವೊಮ್ಮೆ ರಾತ್ರಿ ಕ್ಲಬ್‌ನಲ್ಲೇ ಉಳಿದುಕೊಳ್ಳುತ್ತಿದ್ದರು. ಶನಿವಾರ ಕೂಡ ಕ್ಲಬ್‌ನಲ್ಲಿಯೇ ತಂಗಿದ್ದರು. ರವಿವಾರ ಬೆಳಗ್ಗೆ ತಾನೇ ಗೇಮ್‌ ಆಡಿದ್ದರು ಎನ್ನುತ್ತಾರೆ ಅವರ ನಿಕಟ ಸಂಪರ್ಕದಲ್ಲಿದ್ದವರು.

Advertisement

Udayavani is now on Telegram. Click here to join our channel and stay updated with the latest news.

Next