ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಂದಲೂ ಕೆಲಸ ಮಾಡಿರುವ ಕೆ.ಎಂ.ಮುನಿಯಪ್ಪರವರನ್ನು ಬಿಟ್ಟು ಬೇರೆಯವರಿಗೆ ಬಿ ಫಾರಂ ನೀಡಬಾರದೆಂದು ಮಧುಗಿರಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ಟಿ. ಗೋವಿಂದ ರೆಡ್ಡಿ ಒತ್ತಾಯಿಸಿದ್ದಾರೆ.
ಪಟ್ಟಣದ ಕಾಮಧೇನು ಹೋಟೆಲ್ ನಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪರವರು ಕಳೆದ ನಾಲ್ಕು ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿದ್ದಾರೆ. ತಾಲೂಕಿನ ಪ್ರತಿಹಳ್ಳಿಗೂ ಭೇಟಿ ಮಾಡಿ ಕ್ಷೇತ್ರದ ಜನತೆಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಮನೆಮಾತಾಗಿದ್ದಾರೆ. ಅಲ್ಲದೆ ಪಕ್ಷದ ಪರವಾಗಿ ಗ್ರಾಮ ಪಂಚಾಯತ್ ಚುನಾವಣೆಗೆ ನಿಂತ ಪ್ರತಿಯೊಬ್ಬರ ಬೆಂಬಲಕ್ಕೆ ನಿಂತು ಅವರ ಗೆಲುವಿಗೆ ಕಾರಣರಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ರವರು ಬಂದಾಗ ತಾಲೂಕಿನಿಂದ ಅತಿ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸಲು ಮುನಿಯಪ್ಪರ ಶ್ರಮ ಅಪಾರವಾಗಿದೆ. ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕೊರಟಗೆರೆ ತಾಲೂಕಿನ ಮುಖಂಡರು ಮೊದಲು ಮುನಿಯಪ್ಪರ ಜತೆ ಇದ್ದರು ಈಗ ಅವರಿಂದ ದೂರವಾಗುತ್ತಿರವ ಬೆಳವಣಿಗೆ ಪಕ್ಷಕ್ಕೆ ,ನೈಜ ಕಾರ್ಯಕರ್ತರಿಗೆ ಈ ಮುಖಂಡರ ನಡೆ ಮುಜುಗರ ಪಡುವಂತೆ ಮಾಡಿದೆ. ಈ ಬೆಳವಣಿಗೆಯನ್ನು ಕಾರ್ಯಕರ್ತರು ಸಹಿಸುವುದಿಲ್ಲ ಎಂದು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಪ್ರೀತಿ ವಿಶ್ವಾಸ ಗಳಸಿರುವ, ಜನರ ಜೊತೆ ನಿತ್ಯ ಸಂಪರ್ಕ ಹೊಂದಿರುವ ಮುನಿಯಪ್ಪ ರವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕು. ಬಿಜೆಪಿ ಪರ ಕೆಲಸ ಮಾಡಿರುವ ಮುನಿಯಪ್ಪರನ್ನು ಬಿಟ್ಟು ಬೇರೆ ಯಾರ ಹೆಸರನ್ನು ಚುನಾವಣಾ ಸಮಿತಿಗೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿದರು.
ಈಗಾಗಲೇ ಹಲವು ಮಂದಿ ನಾನೇ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತಿದ್ದಾರೆ ಅವರಿಂದ ಪಕ್ಷಕ್ಕೆ ಹಾಗೂ ಜನಸಾಮಾನ್ಯರಿಗೆ ಆಗಿರುವ ಸಹಾಯ, ಸಹಕಾರವೇನು ಎಂದು ಪ್ರಶ್ನಿಸಿರುವ ಗೋವಿಂದರೆಡ್ಡಿ ಚುನಾವಣೆಯ ಸಂದರ್ಭದಲ್ಲಿ ನನ್ನ ಹತ್ತಿರ ಹಣವಿದೆ ಎಂದು ಬರುವ ಜನರಿಗೆ ಮಣೆ ಹಾಕಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು,ಜನರ ಆಶಯಕ್ಕೆ ವಿರುದ್ಧವಾಗಿ ಪಕ್ಷಕ್ಕಾಗಿ ಕೆಲಸ ಮಾಡಿರುವ ಮುನಿಯಪ್ಪರವರನ್ನು ಕಡೆಗಣಿಸಿದರೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಹಿನ್ನಡೆಯ ಜತೆಗೆ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ವಿರೋಧ ಪಕ್ಷದವರು ಈಗಾಗಲೇ ಹೇಳುವಂತೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡವರನ್ನು ಪಕ್ಷದ ಅಭ್ಯರ್ಥಿ ಎಂದು ನಾಯಕರು ಪ್ರಚಾರ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಳಾಸಂದ್ರ ಮಂಜಣ್ಣ,ಕೋಳಾಲ ನರೇಂದ್ರ,ಕಾರ್ತಿಕ್, ಆನಂದ, ನಾಗರಾಜ್, ರವಿಕುಮಾರ್ ಭಾಗವಹಿಸಿ ಮಾತನಾಡಿದರು.