ಗುಳೇದಗುಡ್ಡ: ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಅಧ್ಯಕ್ಷೆ ಯಲ್ಲವ್ವ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ 5 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ಪುರಸಭೆ 2022-23ನೇ ಸಾಲಿನ ಬಜೆಟ್ ಗೆ ವಿರೋಧ ಪಕ್ಷಗಳಾದ ಜೆಡಿಎಸ್-ಬಿಜೆಪಿ ಸದಸ್ಯರು ಒಪ್ಪಿಗೆ ಸೂಚಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ನ ಮೂವರು ಸದಸ್ಯರು ವಿರೋಧಿಸಿದ ಘಟನೆ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಯಲ್ಲವ್ವ ಗೌಡರ 2022-23ನೇ ಸಾಲಿನ ಬಜೆಟ್ ಮಂಡಿಸುವುದಕ್ಕಿಂತ ಮೊದಲೇ ಸಭೆ ಆರಂಭವಾದಾಗ ಕಾಂಗ್ರೆಸ್ ಸದಸ್ಯರಾದ ರಾಜು ಹೆಬ್ಬಳ್ಳಿ, ರಾಜವ್ವ ಹೆಬ್ಬಳ್ಳಿ, ವಿದ್ಯಾ ಮುರಗೋಡ ಬಜೆಟ್‌ಗೆ ನಮ್ಮ ವಿರೋಧವಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಬಜೆಟ್‌ನ ಕರಡುಪ್ರತಿ ಮೊದಲೇ ನೀಡಬೇಕಾಗಿತ್ತು, ಆದರೆ ಸಭೆಯಲ್ಲಿ ನೀಡಿದ್ದೀರಿ. ಇದರಿಂದ ನಾವು ಬಜೆಟ್ ಬಗ್ಗೆ ತಿಳಿದುಕೊಳ್ಳಲು ಆಗುವುದಿಲ್ಲ. ಬಜೆಟ್ ಬಗ್ಗೆ ನಮಗೆ ಚರ್ಚಿಸಲು ಸಾಧ್ಯವಾಗಲ್ಲ. ಆದ್ದರಿಂದ ಬಜೆಟ್ ಸಭೆ ಮುಂದೂಡಿ ಎಂದು ನಾಮ ನಿರ್ದೇಶನ ಸದಸ್ಯ ವಸಂತಸಾ ದೋಂಗಡೆ ಆಗ್ರಹಿಸಿದರೆ, ಹಿಂದಿನ ಸಾಮಾನ್ಯ ಸಭೆ ಠರಾವು ಪ್ರತಿ ನೀಡಿ, ಸಭೆ ಆರಂಭಿಸಿ. ಇಲ್ಲದಿದ್ದರೆ ಸಭೆ ಮುಂದೂಡಿ ಎಂದು ನಾಮ ನಿರ್ದೇಶನ ಸದಸ್ಯ ಶಿವಾನಂದ ಯಣ್ಣಿ ಆಗ್ರಹಿಸಿದರು. ಈ ವೇಳೆ ಸಭೆಯಲ್ಲಿ ಗೊಂದಲ ಉಂಟಾಯಿತು.
ಉಳಿತಾಯ ಬಜೆಟ್: 2022-23ನೇ ಸಾಲಿನಲ್ಲಿ ಪುರಸಭೆ ಆಸ್ತಿಕರ 95 ಲಕ್ಷ ರೂ., ವಾಣಿಜ್ಯ ಮಳಿಗಳ ಬಾಡಿಗೆ 40 ಲಕ್ಷ ರೂ, ಕಟ್ಟಡ ಪರವಾನಗಿ ಶುಲ್ಕ 28 ಲಕ್ಷ ರೂ., ಖಾತಾ ಬದಲಾವಣೆ 13 ಲಕ್ಷ ರೂ., ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ ಹಣ 205 ಲಕ್ಷ ರೂ, ಎಸ್‌ಎಫ್‌ಸಿ ಫಂಡ್ 45 ಲಕ್ಷ ರೂ, ಎಸ್‌ಎಫ್‌ಸಿ ವಿಶೇಷ ಅನುದಾನ 650 ಲಕ್ಷ ರೂ, 15ನೇ ಹಣಕಾಸು ಯೋಜನೆಯಡಿ ಅನುದಾನ 137 ಲಕ್ಷ ರೂ., ಸ್ವತ್ಛ ಭಾರತ ಯೋಜನೆ ಅನುದಾನ 26 ಲಕ್ಷ ರೂ., ನೀರು ಸರಬರಾಜು, ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಎಸ್‌ಎಫ್‌ಸಿ ಅನುದಾನದಿಂದ 234 ಲಕ್ಷ ರೂ. ಸೇರಿದಂತೆ ವಿವಿಧ ಮೂಲಗಳಿಂದ 11.35 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಒಟ್ಟು 11.29 ಕೋಟಿ ರೂ. ಖರ್ಚು ನಿರೀಕ್ಷಿಸಲಾಗಿದ್ದು, 2022-23ನೇ ಸಾಲಿನಲ್ಲಿ ಪುರಸಭೆ ಒಟ್ಟು 5.83 ಲಕ್ಷ ರೂ. ಉಳಿತಾಯ ನಿರೀಕ್ಷಿಸಿದ ಬಜೆಟ್ ಸಭೆಯಲ್ಲಿ ಮಂಡಿಸಲಾಯಿತು.
ಒಟ್ಟು 23 ಸದಸ್ಯರಲ್ಲಿ 20 ಸದಸ್ಯರ ಬೆಂಬಲ ಹಾಗೂ ಮೂವರು ಸದಸ್ಯರು ವಿರೋಧದ ನಡುವೆ 2022-23ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ನಾಗರತ್ನ ಲಕ್ಕುಂಡಿ, ಸ್ಥಾಯಿ ಸಮಿತಿ ಚೇರ್‌ಮನ್ ವಿನೋದ ಮದ್ದಾನಿ, ಸದಸ್ಯರಾದ ವಿಠ್ಠಲ ಕಾವಡೆ, ರಫೀಕ್ ಕಲ್ಬುರ್ಗಿ ಅಮರೇಶ ಕವಡಿಮಟ್ಟಿ, ಹನಮಂತ ಗೌಡರ, ಶ್ಯಾಮ ಮೇಡಿ, ಯಲ್ಲಪ್ಪ ಮನ್ನಿಕಟ್ಟಿ, ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ಕಾಶೀನಾಥ ಕಲಾಲ, ಪ್ರಶಾಂತ ಜವಳಿ, ಸುಮಿತ್ರಾ ಕೋಡಬಳಿ, ಶಿಲ್ಪಾ ಹಳ್ಳಿ, ರಾಜೇಶ್ವರಿ ಉಂಕಿ, ಜ್ಯೋತಿ ಅಲೂರ, ಜ್ಯೋತಿ ಗೊವಿನಕೊಪ್ಪ, ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ ಇದ್ದರು