ಹುಮನಾಬಾದ: ನಿವಾಸಿಗಳು ನಳಗಳಿಗೆ ಮೋಟಾರ್ ಬಳಸದೆ ನೀರು ತುಂಬಿಕೊಳ್ಳಬೇಕು. ಒಂದು ವೇಳೆ ಮೋಟಾರ್ ಬಳಸಿ ನೀರು ತುಂಬಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮೋಟಾರ್ ಜಪ್ತಿ ಮಾಡುತ್ತೇವೆಂದು ಪುರಸಭೆ ವತಿಯಿಂದ ಡಂಗುರ ಸಾರಿರುವುದು “ಪುರಸಭೆ ಆಡಳಿತ’ದ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ಸದಸ್ಯರಾದ ಅಪ್ಸರ್ ಮಿಯ್ನಾ, ರಮೇಶ ಕಲ್ಲೂರ್, ವೀರೇಶ ಸೀಗಿ, ಎಸ್.ಎ ಬಾಸಿದ್ ಸೇರಿದಂತೆ ಇತರೆ ಸದಸ್ಯರು ಮುಖ್ಯಾಧಿಕಾರಿ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಂದ ಆಯ್ಕೆಗೊಂಡ ಸದಸ್ಯರ ಗಮನಕ್ಕೆ ತರದೆ ಇಂತಹ ಆದೇಶ ಹೊರಡಿಸಿರುವುದು ಸರಿ ಅಲ್ಲ.
ಮುಖ್ಯಾಧಿಕಾರಿಗಳು ತುರ್ತು ಸಭೆ ಕರೆದು ಚರ್ಚಿಸಬೇಕಿತ್ತು. ಬಡಾವಣೆಗಳ ಜನರು ಛೀಮಾರಿ ಹಾಕುತ್ತಿದ್ದು, ನಮ್ಮ ಹಕ್ಕಿಗೆ ಧಕ್ಕೆ ಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಭಾಗದಲ್ಲಿ ಮೋಟಾರ್ ಬಳಸದಿದ್ದರೆ ನೀರು ಪೂರೈಕೆ ಸರಿಯಾಗಿ ಆಗಲ್ಲ. ನೀರಿಗಾಗಿ ಗಂಟೆಗಳ ಕಾಲ ಜನರು ಹೈರಾಣವಾಗಬೇಕಾ? ಜನರು ಮೇಲ್ಮಹಡಿಗೆ ನೀರನ್ನು ಹೇಗೆ ತೆಗೆದುಕೊಂಡು ಹೋಗಬೇಕು. ಎರಡ್ಮೂರು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತಿದ್ದು, ಎರಡು ದಿನಕ್ಕಾಗುವಷ್ಟು ನೀರನ್ನು ಕೊಡಗಳಿಂದ ತುಂಬಿಕೊಳ್ಳಲು ಸಾಧ್ಯವೇ? ಪಟ್ಟಣದ ಹಳೆ ಭಾಗದಲ್ಲಿ ಪುರಸಭೆ ನೀರಿನ ಮೂಲ ಬಿಟ್ಟರೆ ಬೇರೆಯಾವುದೇ ಮೂಲಗಳಿಲ್ಲ. ಇಂತಹ ಸಂದರ್ಭದಲ್ಲಿ ಪುರಸಭೆ ಜನರ ಸಂಕಷ್ಟ ಅರಿತು ಆದೇಶ ಹೊರಡಿಸಬೇಕು ಬಡಾವಣೆಗಳ ಜನರು ಹೇಳುತ್ತಿದ್ದಾರೆ.
ಪಟ್ಟಣದ ಕೆಲವು ಭಾಗದಲ್ಲಿ ನೀರು ಪೂರೈಸುವ ಕುರಿತು ದೂರು ಬಂದಿದ್ದು, ನಳಗಳಿಗೆ ಸಾರ್ವಜನಿಕರು ಮೋಟಾರ್ ಅಳವಡಿಸುವುದು ನಿಷೇಧಿಸಿ ಆದೇಶ ಮಾಡಲಾಗಿದೆ. ನಳದ ನೀರು ಸಂಪಿಗೆ ಬಿಟ್ಟುಕೊಂಡು ಬೇಕಾದರೆ ಮೋಟಾರ್ ಬಳಸಿಕೊಳ್ಳಲಿ. ಆದರೆ ನೇರವಾಗಿ ನಳಗಳಿಗೆ ಮೋಟಾರ್ ಬಳಸುವಂತಿಲ್ಲ. ಬೇಕಾದರೆ ಪರವಾನಗಿ ಪಡೆದು ಬಳಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ನಾಗಯ್ನಾ ಹಿರೇಮಠ, ತಹಶೀಲ್ದಾರ್, ಪ್ರಭಾರಿ ಮುಖ್ಯಾಧಿಕಾರಿ
ಕಳೆದ ಎರಡು ದಿನಗಳಿಂದ ಪಟ್ಟಣದ ವಿವಿಧೆಡೆಯಿಂದ ಕರೆಗಳು ಬರುತ್ತಿವೆ. ಪಟ್ಟಣದಲ್ಲಿ ಪುರಸಭೆಯಿಂದ ಡಂಗುರ ಸಾರುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಈ ಕುರಿತು ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಾ ಧಿಕಾರಿಗಳು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೆ ಆದೇಶ ಹೊರಡಿಸಿರುವುದು ಸರಿ ಅಲ್ಲ. ಈ ಕುರಿತು ಎಲ್ಲರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಕಸ್ತೂರಬಾಯಿ ಪಸನೂರ್, ಪುರಸಭೆ ಅಧ್ಯಕ್ಷ
*ದುರ್ಯೋಧನ ಹೂಗಾರ