Advertisement

ಪುರಸಭೆ ಸ್ವಚ್ಛತೆ ಕಾಪಾಡಿ ಎನ್ನುತ್ತೆ; ಪರಿಕರ ನೀಡಲ್ಲ 

11:50 AM Aug 30, 2017 | Team Udayavani |

ಎಚ್‌.ಡಿ.ಕೋಟೆ: ಕಸದಿಂದ ಮುಕ್ತಿಗೊಳಿಸಿ ಪಟ್ಟಣವನ್ನು ಸ್ವಚ್ಛವಾಗಿಡಿ ಎಂದು ಹೇಳುವ ಪುರಸಭೆ ಪೌರ ಕಾರ್ಮಿಕರ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ದಿನ ನಿತ್ಯ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸದೆ ಮೌನಕ್ಕೆ ಶರಣಾಗಿದೆ. 

Advertisement

ಹೌದು, ಕನಿಷ್ಠ ಸೌಲಭ್ಯಗಳನ್ನು ಒದಗಿಸದಿದ್ದರಂದ ಪೌರಕಾರ್ಮಿಕರು ಬರಿಗೈಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರ ಪರಿಶ್ರಮದ ಫ‌ಲವಾಗಿ ಅರಮನೆಗಳ ನಗರಿ ಮೈಸೂರು ಸತತ 2 ಬಾರಿ ದೇಶದಲ್ಲೇ ಸ್ವಚ್ಛ ನಗರ ಎಂಬ ಹಿರಿಮೆಗೆ ಪಾತ್ರವಾಗಿರುವುದು ಹೆಮ್ಮಯ ವಿಷಯ. ಆದರೆ, ಅಂತಹ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಎಚ್‌.ಡಿ.ಕೋಟೆಯ ಪೌರ ಕಾರ್ಮಿಕರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಎಚ್‌.ಡಿ.ಕೋಟೆ ಪುರಸಭೆ ಸ್ವಚ್ಛತಾ ವಿಭಾಗದಲ್ಲಿ 9 ಜನ ಕಾಯಂ ಸಿಬ್ಬಂದಿ ಸೇರಿದಂತೆ 13 ನೌಕರರು ಹೊರಗುತ್ತಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸ್ವಚ್ಛತಾ ಕಾರ್ಯಕ್ಕೆ ತೊಡಲು ಶೂ, ಕೈ ವಸ್ತ್ರ, ಮಾಸ್ಕ್, ಏಪ್ರಾನ್‌ ಇನ್ನಿತರ ಪರಿಕರಗಳನ್ನು ನೀಡಿಲ್ಲ. ಇದರಿಂದಾಗಿ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದು ಕೆಲ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
 
ಸಂಸದರು-ಶಾಸಕರ ಪರಿಶ್ರಮದಿಂದ ಪುರಸಭೆ ಆಯ್ತು: ಕಳೆದ ವರ್ಷ ಪಟ್ಟಣ ಪಂಚಾಯಿತಿಯಾಗಿದ್ದನ್ನು ಸಂಸದ ಆರ್‌.ಧೃವನಾರಾಯಣ್‌ ಮತ್ತು ಶಾಸಕ ಎಸ್‌.ಚಿಕ್ಕಮಾದು ಅವರ ಪರಿಶ್ರಮದ ಫ‌ಲವಾಗಿ ಸರ್ಕಾರ ಪುರಸಭೆಯಾಗಿ ಮೇಲ್ದರ್ಜೆಗೇರಿಸಿತ್ತು. ಇದರಿಂದಾಗಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ.

ಅಲ್ಲದೆ ಪುರಸಭೆ ಆದ ನಂತರ ಸ್ವಚ್ಛತಾ ವಿಭಾಗಕ್ಕೆ ಮೂವರು ಎಂಜಿನಿಯರ್‌ಗಳನ್ನು ಸರ್ಕಾರ ನೇಮಕ ಮಾಡಿದೆ. ಈ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಾಗಿ ಶ್ರಮಿಸದ ಪರಿಣಾಮ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ಅನೈರ್ಮಲ್ಯ ಕಾಡುತ್ತಿದ್ದು ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಇನ್ನಾದರೂ ಸಂಸದ ಆರ್‌.ಧ್ರುವನಾರಾಯಣ್‌, ಪೌರಾಡಳಿತ ಸಚಿವ ಈಶ್ವರಖಂಡ್ರೆ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.

Advertisement

ಎಲ್ಲವನ್ನೂ ನೀಡಿದ್ದೇವೆ
ಇತ್ತೀಚಿಗೆ ಹೊಸದಾಗಿ ಟೆಂಡರ್‌ ಕರೆದು ಪುರಸಭೆ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಾಯಂ ಮತ್ತು ಹೊರಗುತ್ತಿಗೆ ನೌಕರರೆಲ್ಲರಿಗೂ ಗ್ಲೌಸ್‌, ಮಾಸ್ಕ್, ಶೂ, ಏಪ್ರಾನ್‌ ಎಲ್ಲವನ್ನೂ ನೀಡಿದ್ದೇವೆ. ಎಲ್ಲಾ ಪೌರ ಕಾರ್ಮಿಕರು ಆರೋಗ್ಯ ದೃಷ್ಟಿಯಿಂದ ಕಡ್ಡಾಯವಾಗಿ ಧರಿಸುವಂತೆ ಸೂಚಿಸುತ್ತೇನೆಂದು ಪುರಸಭೆ ಮುಖ್ಯಾಧಿಕಾರಿ ಡಿ.ಎನ್‌.ವಿಜಯಕುಮಾರ್‌ ತಿಳಿಸಿದ್ದಾರೆ.

ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾರಿಗಾದರೂ ನೀಡದಿದ್ದರೆ ಅವರಿಗೆ ನೀಡಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸುತ್ತೇನೆ.
-ಮಂಜುಳಾ, ಪುರಸಭೆ ಅಧ್ಯಕ್ಷೆ 

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next