ಸವದತ್ತಿ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟ ಸಾರ್ವಜನಿಕರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದಲ್ಲಿ ನೀರಿನ ಸಮಸ್ಯೆ ಇಷ್ಟೊಂದೇಕೆ ಉಲ್ಬಣಿಸಿದೆ? ಮೊದಲಿದ್ದ ನೀರು ಪೂರೈಕೆ ವ್ಯವಸ್ಥೆ ಸದ್ಯಕ್ಕೆ ಸಾಲದು. ನೀರು ಪೂರೈಕೆ ವ್ಯತ್ಯಯದಿಂದ ಬೇಸತ್ತ ಜನತೆಗೆ ಉಗ್ರ ಹೋರಾಟವೊಂದೇ ದಾರಿಯಾಗಿದೆ. ನೀರಿನ ಸಮಸ್ಯೆಗೆ ಸದ್ಯ ತಾತ್ಕಾಲಿಕ ಪರಿಹಾರ ನೀಡಿ. ಇಲ್ಲವಾದರೆ ಪುರಸಭೆ ಎದುರಿಗೆ ಬರುವ ಬುಧವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜೊತೆಗೆ ಸದಸ್ಯರ ಮನೆ ಮುಂದೆ ಕೂಡ ಧರಣಿ ಹಮ್ಮಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಚರಂಡಿ ಶುದ್ಧೀಕರಣ ಘಟಕದ ಕಾಮಗಾರಿ ಅಪೂರ್ಣವಾದರೂ ಹಣ ಪಾವತಿಸಿದ್ದರ ಕುರಿತು ಪ್ರತಿಭಟನೆ ವೇಳೆಯೇ ದಾಖಲೆಗಳನ್ನು ನೀಡಿದಾಗ ಅಧಿಕಾರಿಗಳು ಮೌನಕ್ಕೆ ಜಾರಿದರು. ಕರ ಪಾವತಿಸಲು ಬಂದ ಹಿರಿಯ ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತೀರಿ. ಪುರಸಭೆ ವ್ಯಾಪ್ತಿಯಲ್ಲಿ ಅನ ಧಿಕೃತ ಕಟ್ಟಡಗಳು ತಲೆಯೆತ್ತುತ್ತಿವೆ. ಇವುಗಳ ಕುರಿತು ಪುರಸಭೆಯಿಂದ ಯಾವ ಕ್ರಮ ಜರುಗಿಸಿದ್ದೀರೆಂದು ಪ್ರಶ್ನಿಸಿದ ಸಾರ್ವಜನಿಕರು, ಪುರಸಭೆಯಲ್ಲಿ ನೀರಿನ ಜೊತೆಗೆ ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಅಧಿ ಕಾರಿಗಳ ಬೇಜವಾಬ್ದಾರಿ ಧೋರಣೆಗೆ ಜನತೆ ಬೇಸತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸಿ ಪ್ರತಿ ಬಾರಿ ಮನವಿ ಸಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಪುರಸಭೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀರು ಪೂರೈಕೆಯಾಗುವ ವಾರ್ಡಿಗೆ ವಿದ್ಯುತ್ ವ್ಯತ್ಯಯವಾದಲ್ಲಿ ಅಂದು ಆ ವಾರ್ಡಿಗೆ ನೀರೇ ಇಲ್ಲದಂತಾಗುತ್ತದೆ. ಧಾರವಾಡದಿಂದ ಬರುವ ವಿದ್ಯುತ್ ಲೆ„ನ್‌ನೊಂದಿಗೆ ಸಂಪರ್ಕ ಕಲ್ಪಿಸಲು ಆಗ್ರಹಿಸಿದರೂ ಕೆಇಬಿ ಅಧಿಕಾರಿಗಳು ಇವತ್ತಿಗೂ ಕೂಡ ಗಮನ ಹರಿಸುತ್ತಿಲ್ಲ. ಒಟ್ಟಾರೆ ಮೂರು ವಿದ್ಯುತ್ ಲೈನ್‌ಗಳಿದ್ದು ಇದೀಗ ಒಂದೇ ಲೈನ್ ನಿಂದ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದ್ದು ಇನ್ನುಳಿದ ಎರಡು ಲೈನ್‌ಗಳನ್ನು ಕಡಿತಗೊಳಿಸಿದ್ದೇಕೆಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಶಂಕರ ಇಜಂತಕರ, ಮಲ್ಲಿಕಾರ್ಜುನ ಬೀಳಗಿ, ಎಸ್.ಎಮ್. ಹಿರೇಮಠ, ಶ್ರೀನಿವಾಸ ಗದಗ ಎನ್.ಜಿ. ರಾಯನಗೌಡರ, ಬಿ.ಕೆ. ಯರಬಂಡಿ, ಪಿ.ಬಿ. ಗೊರವನಕೊಳ್ಳ, ಜೆ.ವಾಯ್. ವಡಕನ್ನವರ, ಗೋಪಾಲ ಪಾಸಲಕರ, ಅನೂಪ ಕಬ್ಬಿಣ, ಹೊನಗೌಡ ಪಾಟೀಲ, ವಿನೋದ ಚಿನಿವಾಲರ, ಟಿ.ಎಮ್. ಮಡಿವಾಳರ, ಕೆ.ಎಮ್. ಮಂಟೂರ, ಸುರೇಶ ತಿಡಗಿ, ಗುರು ಅಲಬಣ್ಣವರ, ಎಸ್. ಎಸ್. ಕಾಜಗಾರ ಇತರರಿದ್ದರು.