Advertisement
ಮುಂಜಾನೆ 11ರವರೆಗೆ ಶೇ.35% ಮತದಾನ : ಮುಂಜಾನೆ 7 ರಿಂದ ಶಾಂತಿಯುತವಾಗಿ ಚುರುಕಿನಿಂದ ಮತದಾನ ನಡೆಯುತ್ತಿದೆ. ಮುಂಜಾನೆ 7 ರಿಂದ 11 ಗಂಟೆವರೆಗೆ ಶೇ.35 ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾಧಿಕಾರಿ ವ್ಹಿ.ಸಿ.ಬೆಳಗಲ್ ತಿಳಿಸಿದ್ದಾರೆ.
14ನೇ ವಾರ್ಡಿನ ಉಪ ಚುನಾವಣೆಯ ಕಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಬಾಗವಾನ, ಬಿಜೆಪಿಯಿಂದ ಶ್ರೀಮಂತ ಹಳ್ಳಿ, ಪಕ್ಷೇತರ ಅಭ್ಯರ್ಥಿಗಳಾಗಿ ಬಸಪ್ಪ ಚಿಂಚಖಂಡಿ, ಮಹಾಂತೇಶ ಅವಟಗಿ, ರಮಜಾನ ಖಾಲೇಖಾನ(ಎಸ್‌ಡಿಪಿಆಯ್) ಸೇರಿದಂತೆ 5 ಅಭ್ಯರ್ಥಿಗಳು ಇದ್ದಾರೆ.
Related Articles
ಕಣದಲ್ಲಿ 5 ಜನ ಅಭ್ಯರ್ಥಿಗಳಿದ್ದರು ಸಹ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿಗಾಗಿ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ವಾರ್ಡಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮತಗಟ್ಟೆಯ ನಿಷೇಧಿತ ಪ್ರದೇಶದ ಹೊರಗೆ ನಿಂತಿರುವ ಅಭ್ಯರ್ಥಿಗಳು ಮತದಾನಕ್ಕೆ ಬರುತ್ತಿರುವ ಸಾರ್ವಜನಿಕರಿಗೆ ಕೈ ಮುಗಿಯುತ್ತಾ ಅಂತಿಮವಾಗಿ ಮತದಾರರ ಮನ ಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ.
Advertisement
ಕಾಂಗ್ರೆಸ್ ಹುಮ್ಮಸ್ಸು : ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್‌ರಜಾಕ್ ಬಾಗವಾನ ಅವರಿಗೆ ರಾಜಕೀಯ ಅನುಭವದ ಕೊರತೆಯ ನಡುವೆ 2018ರಲ್ಲಿ ಇದೇ ವಾರ್ಡಿನ ಸದಸ್ಯರಾಗಿ ಗೆದ್ದಿದ್ದ ಸಹೋದರ ಜಾವೇದ ಬಾಗವಾನ ಅವರ ಅಕಾಲಿನ ಸಾವಿನ ಅನುಕಂಪದ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವದು, ವಾರ್ಡಿನಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವದು ಮತ್ತು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಪಕ್ಷದ ಮುಖಂಡರು ಪ್ರದರ್ಶಿಸಿದ ಒಗ್ಗಟ್ಟು ತಮ್ಮ ಗೆಲುವಿಗೆ ಕೈ ಹಿಡಿಯಲಿವೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಬಿಜೆಪಿ ಲೆಕ್ಕಾಚಾರ :
ಬಿಜೆಪಿ ಅಭ್ಯರ್ಥಿ ಶ್ರೀಮಂತ ಹಳ್ಳಿಯವರಿಗೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಬೆಂಬಲ ಇರುವದು, ಪಕ್ಷದ ವರ್ಚಸ್ಸು, ಹಿಂದೆ ಉಪಾಧ್ಯಕ್ಷರಾಗಿದ್ದ ವೇಳೆ ತಾವು ಮಾಡಿದ ಸಾಮಾಜಿಕ ಕೆಲಸಗಳು, ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿರುವದು, ರಾಜಕೀಯ ಅನುಭವ, ಪಕ್ಷದ ಮುಖಂಡರು ಕೈಗೊಂಡ ಸಂಘಟಿತ ಪ್ರಯತ್ನವು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಪಕ್ಷೇತರರಿಂದ ಯಾರಿಗೆ ಲಾಭ? :
ಕಣದಲ್ಲಿ ಇರುವ ಮೂವರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಕಾಂಗ್ರೆಸ್ ಪೈಪೋಟಿ ನಡುವೆ ಗೆಲುವು ಸಾಧಿಸುವದು ಅಸಾಧ್ಯ. ಆದರೆ ಈ ಮೂವರು ಅಭ್ಯರ್ಥಿಗಳ ಒಟ್ಟು ಮತವಿಭಜನೆಯ ಲಾಭ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಸೋಲು ಗೆಲುವಿಗೆ ಕಾರಣವಾಗಲಿದೆ ಎಂಬುವದು ಮಾತ್ರ ಸತ್ಯ. ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ! :
ಪುರಸಭೆಯಲ್ಲಿನ ಅಧಿಕಾರ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿಗೆ ಮತ್ತು ಅಧಿಕಾರದ ಚುಕ್ಕಾಣೆ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಈ ವಾರ್ಡಿನ ಗೆಲುವು ಅನಿವಾರ್ಯವಾಗಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಹಣ, ಹೆಂಡ, ಬಾಡೂಟಕ್ಕಾಗಿ ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬಂದಿವೆ. ಕೊನೆಯ ಕ್ಷಣದಲ್ಲಿ ಮತದಾರ ಪ್ರಭುಗಳು ಯಾರಿಗೆ ಜೈ? ಅನ್ನುತ್ತಾರೆ ಎಂಬುವದೇ ಕುತೂಹಲದ ಸಂಗತಿ. 3ನೇ ಉಪ ಚುನಾವಣೆ :
2018ರ ಚುನಾವಣೆಯಲ್ಲಿ ಈ ವಾರ್ಡ ಕಾಂಗ್ರೆಸ್ ಪಾಲಾಗಿತ್ತು. ಅಲ್ಲದೇ 2018ರಲ್ಲಿ ನಡೆದ ಪುರಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ನಡೆಯುತ್ತಿರುವ ಸ್ಥಳೀಯ ಪುರಸಭೆಯ 3ನೇ ಉಪಚುನಾವಣೆ ಇದಾಗಿದ್ದು. ಹಿಂದೆ ವಾರ್ಡ ನಂಬರ 17 ಮತ್ತು 3ನೇ ವಾರ್ಡಿನ ಸದಸ್ಯರ ಅಕಾಲಿಕ ಮರಣದಿಂದಾಗಿ ಉಪಚುನಾವಣೆಗಳು ನಡೆದಿದ್ದವು. ಹಿಂದಿನ ಉಪಚುನಾವಣೆಗಳಲ್ಲಿ 17ನೇ ವಾರ್ಡಿನಲ್ಲಿ ಕಾಂಗ್ರೆಸ್, 3ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈಗ ನಡೆಯುತ್ತಿರುವ 14ನೇ ವಾರ್ಡಿನ ಉಪಚುನಾವಣೆಯಲ್ಲಿ ಯಾರಿಗೆ ವಿಜಯಮಾಲೆ ಎಂಬುದಕ್ಕೆ ಡಿ.30ರವರೆಗೆ ಕಾಯಬೇಕಾಗಿದೆ. ಇದನ್ನೂ ಓದಿ: ಜನವರಿ 14ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರ To ಮುಂಬೈ ಭಾರತ್ ನ್ಯಾಯ ಯಾತ್ರೆ