Advertisement
ಬಿಜೆಪಿಯಿಂದ ಎರಡು ಬಾರಿ ಸದಸ್ಯೆಯಾಗಿರುವ ಹಾಲಿ ಸದಸ್ಯೆ ಗೀತಾ ರವಿ ಶೇಟ್ ಅವರು ಒಳಕಾಡಿನಲ್ಲಿ ಬಿಜೆಪಿಯಿಂದ ಅವಕಾಶ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಂತೆಯೇ ಈ ಹಿಂದೆ (ಕಳೆದ ಬಾರಿ ಅಲ್ಲ) ನಗರಸಭಾ ಸದಸ್ಯರಾಗಿದ್ದ ಗಣಪತಿ ಶೆಟ್ಟಿಗಾರ್ ಅವರು ಕಾಂಗ್ರೆಸ್ ಜತೆ ಮುನಿಸಿಕೊಂಡು ಮೂಡಬೆಟ್ಟು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಅಂಬಲಪಾಡಿಯಲ್ಲಿ ಕಾಂಗ್ರೆಸ್ ಮುಂದಾಳು ಕೆ. ಸುರೇಂದ್ರ ಶೆಟ್ಟಿ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ. ಈಶ್ವರ ನಗರದಲ್ಲಿ ಬಿಜೆಪಿಯ ಜಯರಾಮ ಶೆಟ್ಟಿಗಾರ್, ಕಕ್ಕುಂಜೆಯಲ್ಲಿ ಬಿಜೆಪಿಯ ವತ್ಸಲಾ ನಾಗೇಶ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ನಡೆಸಿರುವ ಕಸರತ್ತು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಕಕ್ಕುಂಜೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಹಾಲಿ ಸದಸ್ಯೆ ಶೋಭಾ ಕಕ್ಕುಂಜೆ ಅವರನ್ನು ಮಾತ್ರ ಮನವೊಲಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಅಂಬಲಪಾಡಿಯಲ್ಲಿ ಸುರೇಂದ್ರ ಶೆಟ್ಟಿ ಅವರ ನಾಮಪತ್ರ ವಾಪಸ್ ಪಡೆದುಕೊಳ್ಳಲು ನಡೆಸಿದ ಕಾಂಗ್ರೆಸ್ ಯತ್ನ ಫಲ ನೀಡಿಲ್ಲ. ಬಿಜೆಪಿ ಕೂಡ ಬಂಡಾಯ ಶಮನಕ್ಕೆ ಒಂದು ಹಂತದ ಪ್ರಯತ್ನ ನಡೆಸಿ ವಿಫಲವಾಗಿದೆ. ಬಂಡಾಯ ಅಭ್ಯರ್ಥಿಗಳಿಂದ ಹೊಡೆತ ಬೀಳದು ಎಂಬುದು ಪಕ್ಷದ ಮುಖಂಡರ ಹೇಳಿಕೆ. ಗೆದ್ದೇ ಗೆಲ್ಲುವೆವು ಎಂಬ ವಿಶ್ವಾಸ ಬಂಡಾಯ ಅಭ್ಯರ್ಥಿಗಳದ್ದು.
Related Articles
ಪ್ರಸ್ತುತ ಸದಸ್ಯೆಯಾಗಿರುವವರ ಪೈಕಿ ಈ ಬಾರಿ ಪರ್ಕಳದ ಸುಮಿತ್ರಾ ನಾಯಕ್ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಬಿಜೆಪಿಯ ಮಹಿಳಾ ಅಭ್ಯರ್ಥಿಗಳು ಹೊಸಬರು. ನಿಟ್ಟೂರಿನಲ್ಲಿ ಈ ಬಾರಿ ಹಿಂದುಳಿದ ವರ್ಗ ‘ಎ’ ಮೀಸಲಾತಿ ನಿಗದಿಯಾಗಿರುವುದರಿಂದ ಇಲ್ಲಿ ಸದಸ್ಯೆಯಾಗಿದ್ದ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಅವರಿಗೆ ಅವಕಾಶ ತಪ್ಪಿ ಹೋಗಿದೆ. ಅವರ ಪತಿ ಬಾಲಕೃಷ್ಣ ಶೆಟ್ಟಿ ಅವರಿಗೆ ಕಕ್ಕುಂಜೆಯಲ್ಲಿ ಅವಕಾಶ ನೀಡಲಾಗಿದೆ. ಹಾಲಿ ಸದಸ್ಯ ಹರೀಶ್ ರಾಮ್ ಬನ್ನಂಜೆ ಅವರ ಪತ್ನಿ ಸವಿತಾ ಹರೀಶ್ ರಾಮ್ ಬನ್ನಂಜೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
Advertisement
ಇಂದಿರಾನಗರದಲ್ಲಿ ಹಾಲಿ ಕಾಂಗ್ರೆಸ್ ಸದಸ್ಯೆ ಹೇಮಲತಾ ಅವರ ಪತಿ ಹಿಲರಿ ಜತ್ತನ್ನ ಅವರಿಗೆ ಅವಕಾಶ ನೀಡಿದೆ. ಕಳೆದ ಬಾರಿ ಕರಂಬಳ್ಳಿ ವಾರ್ಡ್‌ನಿಂದ ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ಸೆಲಿನಾ ಕರ್ಕಡ ಅವರು ಮೂಡುಪೆರಂಪಳ್ಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಜ್ಜರಕಾಡಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಸುರೇಂದ್ರ ಆಚಾರ್ಯ ಅವರ ಪತ್ನಿ ಸುಮನಾ ಸುರೇಂದ್ರ ಆಚಾರ್ಯ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ನಗರಸಭೆಯ ಅಧ್ಯಕ್ಷೆ ಕಾಂಗ್ರೆಸ್‌ನ ಮೀನಾಕ್ಷಿ ಮಾಧವ ಕೊಡವೂರು ವಾರ್ಡ್‌ನಲ್ಲಿ, ಕಾಂಗ್ರೆಸ್‌ನ ಹಾಲಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಕಿನ್ನಿಮೂಲ್ಕಿ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ.
ಬಂಡಾಯ ಯಾರು?ಬಿಜೆಪಿ: ವಳಕಾಡು (ಗೀತಾ ರವಿ ಶೇಟ್), ಈಶ್ವರನಗರ (ಜಯರಾಮ ಶೆಟ್ಟಿಗಾರ್), ಶೆಟ್ಟಿಬೆಟ್ಟು (ವತ್ಸಲಾ ನಾಗೇಶ್).
ಕಾಂಗ್ರೆಸ್: ಅಂಬಲಪಾಡಿ (ಸುರೇಂದ್ರ ಶೆಟ್ಟಿ), ಮೂಡಬೆಟ್ಟು (ಗಣಪತಿ ಶೆಟ್ಟಿಗಾರ್). — ಸಂತೋಷ್ ಬೊಳ್ಳೆಟ್ಟು