Advertisement
ಮಣಿಪಾಲದ ಟೈಗರ್ ವೃತ್ತದಲ್ಲಿ ಪ್ರಯೋಗಾತ್ಮಕವಾಗಿ ಸಿಗ್ನಲ್ ಲೈಟ್ ಅನ್ನು ಮೂರು ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಅನಂತರ ಯಾವುದೇ ಪ್ರಗತಿ ಕಂಡಿಲ್ಲ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡ ಈ ಯೋಜನೆ ಹಲವು ತಾಂತ್ರಿಕ ಕಾರಣದಿಂದ ಆರಂಭವನ್ನೇ ಕಂಡಿಲ್ಲ.
ವಾಹನ ದಟ್ಟಣೆ ಇರುವ ಜಂಕ್ಷನ್‌ಗಳಲ್ಲಿ ಕೆಲವು ಸಮಯಗಳಲ್ಲಿ ನಿಯಂತ್ರಣಕ್ಕೆ ಪೊಲೀಸರು ಜಂಕ್ಷನ್‌ಗಳಲ್ಲಿ ಇರುವುದಿಲ್ಲ. ಆಗ ಬೇಕಾಬಿಟ್ಟಿಯಾಗಿ ವಾಹನ ಸವಾರರು ಓಡಾಡುತ್ತಿದ್ದಾರೆ. ಟ್ರಾಫಿಕ್ ಜಾಮ್ ಜತೆಗೆ ಸಣ್ಣಪುಟ್ಟ ಅಪಘಾತಗಳಿಗೂ ಎಡೆ ಮಾಡಿಕೊಡುತ್ತಿದೆ. ಇನ್ನು ಟ್ರಾಫಿಕ್ ನಿರ್ವಹಣೆಗೆ ಪೊಲೀಸರು ನಿಯೋಜನೆಗೊಂಡ ಸಂದರ್ಭ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ಸಾಮಾನ್ಯ ವಿಸಿಲ್ ಧ್ವನಿಯಲ್ಲಿ, ಕೈ ಸನ್ನೆಯಲ್ಲಿ ನಿರ್ವಹಿಸುತ್ತಿದ್ದು, ದಟ್ಟಣೆ ನಿಯಂತ್ರಣಕ್ಕೆ ಪರದಾಡುತ್ತಿರುತ್ತಾರೆ. ಬಿಸಿಲು, ಮಳೆಗೆ ಪೊಲೀಸರು ಮೈಯೊಡ್ಡಿ ಕೆಲಸ ನಿರ್ವಹಿಸಬೇಕಿದೆ. ಪೋಲ್‌ಗಳು ಸ್ವಾಗತವನ್ನಷ್ಟೇ ನೀಡುತ್ತಿವೆ
ಮಣಿಪಾಲದ ಟೈಗರ್ ಸರ್ಕಲ್, ಸಿಂಡಿಕೇಟ್ ವೃತ್ತ, ಕಲ್ಸಂಕದಲ್ಲಿ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಬೃಹದಾಕಾರದ ಪೋಲ್‌ಗಳನ್ನು ಅಳವಡಿಸಲಾಗಿದೆ. ಆದರೇ ಇವುಗಳು ಸ್ವಾಗತ ಕಮಾನುಗಳಾಗಿ, ಪೋಸ್ಟರ್, ಜಾಹೀರಾತಿಗೆ ಸೀಮಿತವಾದಂತಿದೆ.
ಅಂಬಾಗಿಲು, ಉದ್ಯಾವರ ಬಲಾಯಿಪಾದೆ, ಹಳೆ ಡಯಾನ ವೃತ್ತದಲ್ಲಿ ಯೋಜನೆಯ ಭಾಗವಾಗಿ ಪೋಲ್‌ಗಳನ್ನು ಅಳವಡಿಸಲು ಚಿಂತನೆ ನಡೆದಿತ್ತಾದರೂ ಸಿಗ್ನಲ್ ಅಳವಡಿಕೆಗಾಗಿ ನಿರ್ಮಿಸಿದ ಬೃಹತ್ ಕಂಬಗಳು ಅನಾಥಸ್ಥಿತಿಯಲ್ಲಿದ್ದು, ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಲಾಗಿತ್ತು.
Related Articles
ಬೆಳೆಯುತ್ತಿರುವ ನಗರಕ್ಕೆ ಮುಂದಿನ ದಿನಗಳಲ್ಲಿ ಗಂಭಿರವಾಗಿ ಕಾಡಬಹುದಾದ ಟ್ರಾಫಿಕ್ ಸಮಸ್ಯೆ ಅರಿತು ನಗರಸಭೆಯ ಹಿಂದಿನ ಆಡಳಿತ ಅವಧಿಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಯೋಜನೆಯಲ್ಲಿ ಸ್ಮಾರ್ಟ್ ಸಿಗ್ನಲ್ ಅಳವಡಿಸಲು ಟೆಂಡರ್ ಕರೆಯಲಾಗಿತ್ತು. ಮುಂಬಯಿ ಮೂಲದ ಖಾಸಗಿ ಕಂಪೆನಿ ಗುತ್ತಿಗೆ ಪಡೆದಿತ್ತು. ಕಲ್ಸಂಕ, ಮಣಿಪಾಲ ಹಾಗೂ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಸಿಗ್ನಲ್ ಕಂಬಗಳನ್ನು ಅಳವಡಿಸಿದೆ. ಆದರೆ ಟೆಂಡರ್ ತಾಂತ್ರಿಕ ಸಮಸ್ಯೆ, ಸಿಗ್ನಲ್ ಅಳವಡಿಕೆ ವ್ಯವಸ್ಥಿತವಾಗಿರದ ಬಗ್ಗೆ ಸಾರ್ವಜನಿಕ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
Advertisement
ವಿರೋಧ ವ್ಯಕ್ತವಾದದ್ದು ಯಾಕೆ?ಸ್ಮಾರ್ಟ್ ಸಿಗ್ನಲ್ ಯೋಜನೆ ಅನುಷ್ಠಾನದ ಬೇಡಿಕೆ ಇತ್ತಾದರೂ ಅದಕ್ಕೆ ಒಂದಷ್ಟು ವಿರೋಧಗಳು ವ್ಯಕ್ತವಾಗಿತ್ತು. ಮಣಿಪಾಲ ಪ್ರಾಯೋಗಿಕ ಯೋಜನೆ ಆರಂಭಿಸಿದಾದ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲುವ ಅವಧಿ ಹೆಚ್ಚಿದ್ದರಿಂದ ರಸ್ತೆಯಲ್ಲೆ ಹೆಚ್ಚು ಅವಧಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಜನ ಬೇಸತ್ತಿದ್ದರು. ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೀಗ ಕೆಲಸ ಸುಧಾರಣೆ ತಂದು ಟ್ರಾಫಿಕ್ ಸಿಗ್ನಲ್ ಯೋಜನೆಯನ್ನು ವ್ಯವಸ್ಥಿತವಾಗಿ ವಿಳಂಬವಿಲ್ಲದಂತೆ ಜಾರಿಗೊಳಿಸಬೇಕು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಕಲ್ಸಂಕ ಜಂಕ್ಷನಲ್ಲಂತೂ ನಿತ್ಯ ಕಿರಿಕಿರಿ
ಕಲ್ಸಂಕ ವೃತ್ತದಲ್ಲಿ ನಿತ್ಯ ಟ್ರಾಫಿಕ್ ಜಾಮ್ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೊಲೀಸರ ಸಿಗ್ನಲಿಗೂ ಕ್ಯಾರೆ ಎನ್ನದೇ ವಾಹನಗಳನ್ನು ಎಲ್ಲೆಂದರಲ್ಲಿ ನುಗ್ಗಿಸುವುದು ಸಾಮಾನ್ಯದ ದೃಶ್ಯವಾಗಿದೆ. ಸಣ್ಣಪುಟ್ಟ ಅಪಘಾತಗಳು ನಿರಂತರ ಎನ್ನುವಂತಾಗಿದೆ. ಪ್ರವಾಸಿ ವಾಹನಗಳ ಚಾಲಕರು ನಿಯಮ ಉಲ್ಲಂಸುತ್ತಿರುವುದು ಕಂಡು ಬರುತ್ತಿದೆ. ವಾರಾಂತ್ಯದಲ್ಲಿ ಇಲ್ಲಿ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಚರ್ಚಿಸಿ ನಿರ್ಧಾರ
ಸಿಗ್ನಲ್ ಪೋಲ್ ನಿರ್ಮಾಣ ಅವೈಜ್ಞಾನಿಕವಾಗಿದೆ. ಜಾಹಿರಾತಿನಂತಹ ವಾಣಿಜ್ಯಕ್ಕೆ ಅನುಕೂಲವಾಗುವಂತಿದೆ. ಪುಟ್‌ಪಾತ್ ಅನ್ನು ಪೋಲ್ ಕೆಲವಡೆ ಆಕ್ರಮಿಸಿಕೊಂಡಿದೆ. ಸುಧಾರಣೆ ತರಬೇಕೆಂಬ ಬೇಡಿಕೆ ಸಾರ್ವಜನಿಕರಿಂದಿದೆ. ಮುಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾವಕ್ಕೆ ತಂದು ಚರ್ಚಿಸಿ, ಶೀಘ್ರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು.
– ಪ್ರಭಾಕರ ಪೂಜಾರಿ, ನಗರಸಭೆ ಅಧ್ಯಕ್ಷ, ಉಡುಪಿ ಎಲ್ಲ ಕಡೆ ಆಧುನಿಕತೆ, ಹಿಂದುಳಿದ ಉಡುಪಿ
ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನಸಂಚಾರ, ವಾಹನ ಸಂಚಾರ ಅಧಿಕಗೊಳ್ಳುತ್ತಿದೆ. ಪ್ರತೀ ಜಂಕ್ಷನ್‌ನಲ್ಲಿ ಪೊಲೀಸರು ವಾಹನ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಬೆವರು ಹರಿಸಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ. ಇಷ್ಟೆಲ್ಲ ತ್ರಾಸ ಪಡುತ್ತಿರುವ ಮಧ್ಯೆ ಟ್ರಾಫಿಕ್ ನಿಯಂತ್ರಣಕ್ಕೆ ಎಲ್ಲ ನಗರಗಳಿಗೆ ಆಧುನಿಕತೆ ತಲುಪಿದ್ದರೂ ಉಡುಪಿ, ಮಣಿಪಾಲ ನಗರ ಟ್ರಾಫಿಕ್ ನಿರ್ವಹಹಣೆಯಲ್ಲಿ ಹಿಂದುಳಿದಿರುವುದು ವಿಶೇಷವಾಗಿದೆ. ಸ್ಮಾರ್ಟ್ ಸಿಗ್ನಲ್ ಹಾಕಿದರೆ ಪೊಲೀಸರ ಒತ್ತಡ ಅರ್ಧದಷ್ಟು ಕಡಿಮೆಯಾಗುವ ಜತೆಗೆ ಟ್ರಾಫ್ರಿಕ್ ಸಮಸ್ಯೆಗೂ ಸ್ವಯಂ ನಿಯಂತ್ರಣಕ್ಕೆ ಬರಲಿದೆ. -ಬಾಲಕೃಷ್ಣ ಭೀಮಗುಳಿ