Advertisement

ಕುಂದಾಪುರ, ಕಾರ್ಕಳ ಪುರಸಭೆ: ಶಾಂತಿಯುತ ಮತದಾನ

01:30 AM Sep 01, 2018 | Karthik A |

ಕುಂದಾಪುರ: ಕುಂದಾಪುರ ಪುರಸಭೆಗೆ ಮಳೆ ವಿರಾಮದ ನಡುವೆ ನಡೆದ ಶುಕ್ರವಾರದ ಮತದಾನ ಶಾಂತಿಯುತವಾಗಿತ್ತು. ಯುವಕರು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಕೆಲವೆಡೆ ಅನಾರೋಗ್ಯ ಪೀಡಿತರು ಕೂಡ ಮತಗಟ್ಟೆಗೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು. ಕುಂದಾಪುರ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು 23 ಇವಿಎಂಗಳನ್ನು ಅಳವಡಿಸಲಾಗಿತ್ತು. ಹೆಚ್ಚುವರಿ ಇವಿಎಂಗಳಿದ್ದರೂ ಎಲ್ಲೂ ಬಳಕೆಗೆ ಬೇಕಾಗಲಿಲ್ಲ. ಇವಿಎಂ ಸಮಸ್ಯೆ ದೊಡ್ಡಮಟ್ಟದಲ್ಲಿ ಎಲ್ಲಿಯೂ ನಡೆದಿಲ್ಲ. ಎಚ್‌ಎಂಎಂ ಶಾಲೆಯಲ್ಲಿ ಒಂದು ಸಂದರ್ಭದಲ್ಲಿ ಎಷ್ಟು ಬಾರಿ ನೀಲಿ ಬಟನ್‌ ಅದುಮಿದರೂ ಮತದಾನ ಆಗುತ್ತಿರಲಿಲ್ಲ. ಕೂಡಲೇ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಯಿತು.

Advertisement

23 ವಾರ್ಡ್‌ಗಳಲ್ಲಿ 23 ಮತಗಟ್ಟೆಗಳಲ್ಲಿ 11,292 ಪುರುಷ,12,010 ಮಹಿಳಾ ಮತದಾರರಿದ್ದು ಒಟ್ಟು 23,302 ಮತದಾರರು ಮತ ಚಲಾಯಿಸಬೇಕಿತ್ತು. ಆದರೆ ಮತದಾನದ ಕಡೆಗೆ ಅಂತಹ ಉತ್ಸಾಹ ಕಂಡು ಬಂದಿಲ್ಲ. ಸುಮಾರು 11.30ವರೆಗೆ ಶೇ.40ರಷ್ಟು ಮತದಾನ ನಡೆಯಿತು. ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಶೇ.57.97ರಷ್ಟು ಮತ ಚಲಾವಣೆಯಾಗಿತ್ತು. ನಂತರ ಅಂತಹ ಉತ್ಸಾಹ ಇಲ್ಲದೇ ನಿರುತ್ಸಾಹದ ಮತದಾನ ನಡೆಯಿತು. ಮಳೆ ಇಲ್ಲದ ಬಿಸಿಲಿನ ವಾತಾವರಣ ಮತದಾರರಿಗೆ ಖುಷಿ ಉಂಟು ಮಾಡಿತು. ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ಅಭ್ಯರ್ಥಿಗಳು ಅಂತಿಮ ಹಂತದ ಮತಯಾಚನೆ ನಡೆಸುತ್ತಿದ್ದುದು ಕಂಡು ಬಂತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿವಿಧ ಮತಗಟ್ಟೆಗಳಿಗೆ  ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಮತದಾರರ ಎಡಗೈ ಉಂಗುರದ ಬೆರಳಿಗೆ ಹಾಕಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನ ಬಂದಿತ್ತು. ಆದರೆ ಮಂಗಳೂರು ಟೈಲ್‌ ಫ್ಯಾಕ್ಟರಿ ವಾರ್ಡ್‌ನ ಮತಗಟ್ಟೆಯಲ್ಲಿ ಎಡಗೈ ತೋರು ಬೆರಳಿಗೆ ಶಾಯಿ ಹಾಕುತ್ತಿದ್ದರು. ಸಹಾಯಕ ಕಮಿಷನರ್‌ ಟಿ. ಭೂಬಾಲನ್‌, ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ಅವರು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.


ವ್ಹೀಲ್‌ ಚೇರ್‌ ಇಲ್ಲದೆ ಪರದಾಟ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿಯೂ ವ್ಹೀಲ್‌ಚೇರ್‌ನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಹೆಚ್ಚಿನ ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್‌ ಗಳು (ಗಾಲಿ ಕುರ್ಚಿ) ಇರಲಿಲ್ಲ. ಇದರಿಂದಾಗಿ ಕೆಲವು ಮಂದಿ ಹಿರಿಯ ನಾಗರಿಕರು ಹಾಗೂ ಅನಾರೋಗ್ಯಪೀಡಿತರಿಗೆ ಸಮಸ್ಯೆಯಾಯಿತು. ಚಿಕ್ಕನ್‌ಸಾಲ್‌ ಬಲಬವದಿ ವಾರ್ಡ್‌ನ ಶಾಲೆ ಮತಗಟ್ಟೆಯಲ್ಲಿ ಆಗಮಿಸಿದ ಅಂತಹ ಹಿರಿಯ ನಾಗಕರಿಗೆ ಮತಗಟ್ಟೆ ಅಧಿಕಾರಿಯೇ ಖುದ್ದು ನೆರವು ನೀಡುತ್ತಿದ್ದರು. ಎಚ್‌ಎಂಎಂ ಶಾಲೆಯಲ್ಲಿ ಅಂತಹ ಮತದಾರರನ್ನು ಹೊತ್ತೂಯ್ದು ಕರೆದೊಯ್ಯಲಾಗುತ್ತಿತ್ತು.


ಕಾರ್ಕಳ:
ಕಾರ್ಕಳ ಪುರಸಭೆಗೆ ಶುಕ್ರವಾರ ನಡೆದ ಚುನಾವಣೆ ಪ್ರಯುಕ್ತ ನಡೆದ ಮತದಾನ ಶಾಂತಿಯುತವಾಗಿ ನೆರವೇರಿದೆ. ಪುರಸಭೆಯ 23 ವಾರ್ಡ್‌ಗಳಿಗೆ 23 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 20,604 ಮಂದಿ ಮತದಾರರ ಪೈಕಿ 14,755 ಮಂದಿ ಚಲಾಯಿಸಿದ್ದಾರೆ. 10,725 ಮಹಿಳಾ ಮತದಾರರಲ್ಲಿ 7,788 ಹಾಗೂ 9,879 ಪುರುಷರಲ್ಲಿ 6,967 ಮತದಾನ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಬಿರುಸಿನ ಮತದಾನವಾಗಿದೆ. ಪೂರ್ವಾಹ್ನ 11 ಗಂಟೆಯ ವೇಳೆಗೆ 34 ಶೇ. ಮತದಾನವಾಗಿತ್ತು. ಅಪರಾಹ್ನ 3 ಗಂಟೆಯ ವೇಳೆಗೆ 58 ಶೇ. ಮತದಾನವಾಗಿತ್ತು. ಮಧ್ಯಾಹ್ನದ ವೇಳೆಗೆ ಕೊಂಚ ನಿಧಾನಗತಿಯಲ್ಲಿ ಮತದಾನವಾಗಿದ್ದು, ಅನಂತರ ಮತ್ತೆ ಬಿರುಸುಗೊಂಡಿದೆ. ಮತದಾನಕ್ಕಾಗಿ ಮತಗಟ್ಟೆಗೆ ಆಗಮಿಸಲು ಅಸಾಧ್ಯವಾದವರಿಗೆ ವೀಲ್‌ ಚಯರ್‌ ವ್ಯವಸ್ಥೆ ಮಾಡಲಾಗಿತ್ತು. ಹಲವು ಮಂದಿ ನಡೆಯಲು ಸಾಧ್ಯವಾಗದ ಹಿರಿಯರು, ದೈಹಿಕ ಅಸಮರ್ಥರು ಮತಗಟ್ಟೆ ಅಂಗಳಕ್ಕೆ ವಾಹನಗಳ ಮೂಲಕ ಆಗಮಿಸಿ ಅನಂತರ ವೀಲ್‌ ಚಯರ್‌ ಮೂಲಕ ತೆರಳಿ ಮತನದಾನ ಮಾಡಿದ್ದಾರೆ.

Advertisement

ಪೊಲೀಸ್‌ ಭದ್ರತೆ
ಮತದಾನ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿಯೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಸಿಬಂದಿ ನಿಯೋಜಿಸಲಾಗಿತ್ತು. ಮತಗಟ್ಟೆಗಳ ಸಮೀಪ ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸಲು ಸಿಬಂದಿ ನಿಯೋಜಸಲಾಗಿತ್ತು.

ಕೋಡಿ: ರಸ್ತೆ ಸಂಪರ್ಕವಿಲ್ಲದ ಮತಗಟ್ಟೆ


ಕುಂದಾಪುರ: ಪುರಸಭೆಯ ಕೋಡಿ ದಕ್ಷಿಣ ವಾರ್ಡಿನ ಸ. ಮಾದರಿ ಹಿ. ಪ್ರಾ. ಶಾಲೆ ಕೋಡಿಯಲ್ಲಿರುವ ಮತಗಟ್ಟೆಗೆ ನೇರವಾದ ರಸ್ತೆ ಸಂಪರ್ಕವಿಲ್ಲದ ಕಾರಣ ವೃದ್ಧ, ವಿಕಲ ಚೇತನ ಮತದಾರರಿಗೆ ಮತದಾನಕ್ಕೆ ಬರಲು ಪ್ರಯಾಸಪಟ್ಟರು. ಈ ವಾರ್ಡಿನಲ್ಲಿ ಅನೇಕ ಮಂದಿ ಹಿರಿಯ ಮತದಾರರಿದ್ದಾರೆ. ಅದಲ್ಲದೆ ವಿಕಲ ಚೇತನ ಮತದಾರರೂ ಇದ್ದಾರೆ. ಇವರೆಲ್ಲ ಮತದಾನಕ್ಕೆ ಈ ಮತಗಟ್ಟೆಗೆ ಬರಲು ಬೇರೆಯವರ ಕೈ ಹಿಡಿದುಕೊಂಡು ಬರಬೇಕಾಯಿತು. ಈ ಮತಗಟ್ಟೆಗೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಕನಿಷ್ಠ ಒಂದು ವೀಲ್‌ ಚೇಯರ್‌ ವ್ಯವಸ್ಥೆ ಮಾಡಬಹುದಿತ್ತು ಎನ್ನುವುದು ಇಲ್ಲಿನವರ ಅಭಿಪ್ರಾಯವಾಗಿತ್ತು. 

ಕೋಡಿ: ಹೆಚ್ಚುವರಿ ಭದ್ರತೆ, ಶಾಂತಿಯುತ ಮತದಾನ


ಕುಂದಾಪುರ:
ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ ಕೋಡಿ ಭಾಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ದಿನೇಶ್‌ ಕುಮಾರ್‌, ವೃತ್ತ ನಿರೀಕ್ಷಕ ಮಂಜಪ್ಪ ಭೇಟಿ ನೀಡಿದರು.

ಶಾಂತಿಯುತ ಮತದಾನ
ಕೋಡಿಯಲ್ಲಿ 3 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಕೋಡಿ ದಕ್ಷಿಣ ವಾರ್ಡ್‌ಗೆ ಸ. ಮಾದರಿ ಹಿ.ಪ್ರಾ. ಶಾಲೆ ಕೋಡಿ, ಕೋಡಿ ಮಧ್ಯ ವಾರ್ಡ್‌ ಗೆ ಸೋನ್ಸ್‌ ಅ. ಹಿ.ಪ್ರಾ. ಶಾಲೆ, ಕೋಡಿ ಉತ್ತರ ವಾರ್ಡ್‌ಗೆ ಪೋರ್ಟ್‌ ಲೈಟ್‌ಹೌಸ್‌ ವಸತಿಗೃಹದ ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಿದರು. 3 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next