Advertisement
ಬೆಳಗಾವಿ: ಎರಡು ವರ್ಷಗಳ ನಂತರ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಪಕ್ಷಗಳ ಚಿಹ್ನೆಯ ಮೇಲೆ ಅಭ್ಯರ್ಥಿಗಳ ಸ್ಪರ್ಧೆಯನ್ನು ಕಾಣಬಹುದೇ? ಇಲ್ಲವೇ ಮೊದಲಿನಂತೆ ಭಾಷಾ ಆಧಾರಿತ ಚುನಾವಣೆಯೇ ನಡೆಯಲಿದೆಯೇ? ಇಂತಹ ಒಂದು ಗಂಭೀರ ಚರ್ಚೆ ಈಗ ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಆರಂಭವಾಗಿದೆ.
Related Articles
Advertisement
ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೊಂಡು ವಾದದಿಂದ ಬೇಸತ್ತ ಅನೇಕ ಮರಾಠಿ ಭಾಷಿಕ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ಇನ್ನೊಂದು ಕಡೆ ಕಳೆದ ಆರು ದಶಕಗಳಿಂದ ಭಾಷೆ ಹಾಗೂ ಗಡಿ ವಿಷಯದ ಮೇಲೆಯೇ ರಾಜಕಾರಣ ಮಾಡುತ್ತ ಬಂದಿರುವ ಎಂಇಎಸ್‌ಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವದು ಎಳ್ಳಷ್ಟೂ ಬೇಕಾಗಿಲ್ಲ. ಕಾರಣ ಪಾಲಿಕೆಯಲ್ಲಿನ ಇದುವರೆಗಿನ ಆಡಳಿತ. ಮಹಾಪೌರ ಹಾಗೂ ಉಪಮಹಾಪೌರರ ಚುನಾವಣೆಯಲ್ಲಿ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯುವ ವಿಷಯದಲ್ಲಿ ಕೆಲವು ಕನ್ನಡ ಸದಸ್ಯರು ಎಂ ಇ ಎಸ್ ಜೊತೆ ಕೈಜೋಡಿಸಿದ ಉದಾಹರಣೆಗಳಿವೆ. ಆಗ ಯಾವ ಸದಸ್ಯರು ಯಾರ ಪರ ಇದ್ದಾರೆ ಎಂಬುದನ್ನು ಹೇಳಲು ಕಷ್ಟವಾಗಿತ್ತು. ಒಂದು ವೇಳೆ ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆದರೆ ಆಗ ಗೆದ್ದ ಸದಸ್ಯರಿಗೆ ಪಕ್ಷದ ಮೂಗುದಾರ ಇರುತ್ತದೆ. ಆಗ ಭಾಷಾ ಹೆಸರಿನಲ್ಲಿ ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬಹುದು ಎಂಬುದು ಎಲ್ಲರ ಲೆಕ್ಕಾಚಾರ. ಇದೇ ಕಾರಣದಿಂದ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ದುರ್ಬಲವಾಗಿದ್ದರೂ ಅದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮಹಾನಗರ ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿದ ವಿಷಯ, ನಂತರ ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರದರ್ಶನ ಎಂ ಇ ಎಸ್‌ದಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಈ ಎರಡೂ ವಿಷಯಗಳು ಎಂ ಇ ಎಸ್ ಮತ್ತು ಶಿವಸೇನೆಗೆ ಸ್ವಲ್ಪ ಬಲ ತಂದಿರುವದು ಸುಳ್ಳಲ್ಲ. ಕನ್ನಡ ಬಾವುಟ ಹಾರಿಸಿರುವದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಎಂ ಇ ಎಸ್ ಪಾಲಿಕೆಯ ಎದುರು ಭಗವಾಧ್ವಜ ಹಾರಿಸೋಣ ಎಂಬ ವಿಷಯದೊಂದಿಗೆ ಚುನಾವಣೆಗೆ ಹೋಗುತ್ತಿರುವದು ಆತಂಕ ತರುವ ಸಂಗತಿ. ಎಂ ಇ ಎಸ್ ಜೊತೆಗೆ ಶಿವಸೇನೆ ಸಹ ಈ ಬಾರಿ ಪ್ರತ್ಯೇಕವಾಗಿ ಚುನಾವಣೆಗೆ ಧುಮುಕುವುದು ಖಚಿತ. ಇದು ನಿಜವಾದರೆ ಚುನಾವಣೆಗೆ ಮತ್ತಷ್ಟು ರಂಗು ಬರಲಿದೆ.