ಇಂಡಿ: ಪುರಸಭೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು ಪುರಸಭೆ ಅ ಧಿಕಾರಿಗಳ ಮೇಲೆ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪುರಸಭೆ ಸದಸ್ಯರು ಮಂಗಳವಾರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪುರಸಭೆಯಿಂದ ಜೆಸಿಬಿ ಯಂತ್ರ ಖರೀದಿ, ಬ್ಲಿಚಿಂಗ್ ಪೌಡರ್ ಖರೀದಿ ಸೇರಿದಂತೆ ಅನೇಕ ವಿಷಯಗಳಲ್ಲಿ ಅವ್ಯವಹಾರವಾಗಿದ್ದು ಕೂಡಲೇ ತನಿಖೆ ನಡೆಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಸದಸ್ಯ ಅನಿಲಗೌಡ ಬಿರಾದಾರ ಹಾಗೂ ದೇವೆಂದ್ರ ಕುಂಬಾರ ಮಾತನಾಡಿ, ಬ್ಲೀಚಿಂಗ್ ಪೌಡರ್ ಖರೀದಿಗೆ ಸಾಮಾನ್ಯಸಭೆಯಲ್ಲಿ ಚರ್ಚಿಸಿದಂತೆ ಟೆಂಡರ್ ಆಗಿರುವುದಿಲ್ಲ. ಒಮ್ಮೆಲೆ ಎರಡು ದಿನಗಳ ಹಿಂದೆ 5 ಲಕ್ಷ ರೂ. ಬ್ಲಿಚಿಂಗ್ ಪೌಡರ್ ತಂದಿದ್ದಾರೆ. ಅದು ಎಷ್ಟು ಹಣದ ಖರೀದಿಯಾಗಿದೆ. ಅದಕ್ಕೆ ಸಂಬಂಧಿತ ರಸೀದಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಜೆಸಿಬಿ ಯಂತ್ರ ಖರೀದಿಗೆ 36 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆದರೆ ಅದಕ್ಕೆ 40 ಲಕ್ಷ ರೂ. ಸಂದಾಯವಾಗಿದೆ. ಈ ಹಣ ಯಾರ ಗಮನಕ್ಕೂ ತರದೇ ನೀಡಿದ್ದಾರೆ ಎಂದು ಆರೋಪಿಸಿದರು.
ಮುಕ್ತಿ ವಾಹನ ಒಂದೇ ಇದ್ದು ಇನ್ನೊಂದು ವಾಹನದ ಅವಶ್ಯಕತೆ ಇದೆ. ಈ ಕುರಿತು ಹಲವಾರು ಬಾರಿ ಚರ್ಚಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಸದಸ್ಯರಿಗೆ ಗೌರವದಿಂದ ಕಾಣುತ್ತಿಲ್ಲ. ಪ್ರತಿಯೊಂದಕ್ಕೂ ಶಾಸಕರ ಹೆಸರು ಬಳಸುತ್ತಾರೆ ಎಂದು ಆರೋಪಿಸಿದರು.
ಸಿಬ್ಬಂದಿ ಮತ್ತು ದಿನಗೂಲಿ ನೌಕರರ ಸಂಬಳ ತೆಗೆಯಲು ಸಾಮಾನ್ಯ ಸಭೆ ಠರಾವು ನೀಡಿದೆ. ಆದರೆ ಸಂಬಳ ತೆಗೆಯುತ್ತಿಲ್ಲ. ಇಂಡಿ ಪಟ್ಟಣಕ್ಕೆ 24×7 ನೀರು ಬರುತ್ತಿದ್ದು ನೀರು ಪೂರೈಕೆ ಇನ್ನಿತರ ಖರ್ಚಿಗಾಗಿ 56 ಲಕ್ಷ ರೂ. ಟೆಂಡರ್ ಕರೆದು 22, 23, 24ನೇ ವಾರ್ಡ್‌ಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪೂರ್ಣ ಮಾಡಬೇಕು. ಆದರೆ ಒಂದು ವರ್ಷ ಕಳೆದರೂ ಹಣ ಬಳಕೆ ಮಾಡುತ್ತಿಲ್ಲ. ಹಣ ತೆಗೆದಿದ್ದಾರೆ. ಯಾತಕ್ಕಾಗಿ ಖರ್ಚು ಮಾಡುತ್ತಾರೆ ಎಂಬುದಕ್ಕೆ ಉತ್ತರಿಸುವುದಿಲ್ಲ.
ಪುಟ್‌ಪಾತ್ ಮುಂದಿರುವ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಮುಖ್ಯಾ ಧಿಕಾರಿಗಳು ಕಿರುಕುಳ ನೀಡುತ್ತಿದ್ದು ಕೇಳಿದರೆ ಕಂದಾಯ ಉಪ ವಿಭಾಗಾಧಿ ಕಾರಿಗಳ ಹೆಸರು ಹೇಳುತ್ತಾರೆ. ಎಸಿಯವರಿಗೆ ಕೇಳಿದರೆ ತಾವು ಹೇಳಿರುವುದಿಲ್ಲ ಎನ್ನುತ್ತಾರೆ. ಪುರಸಭೆ ಅಭಿಯಂತರರು ಸರಿಯಾಗಿ ಕಚೇರಿಗೆ ಬರುವದಿಲ್ಲ. ಹೀಗಾಗಿ ಕಟ್ಟಡ ಪರವಾನಿಗೆ ಪಡೆಯುವರಿಗೆ ತೊಂದರೆಯಾಗುತ್ತಿದೆ ಎಂದರು.
ಇಂಡಿ ಪಟ್ಟಣ ಗ್ರೇಡ್ -1 ಪುರಸಭೆ ಇದ್ದು 50,000 ಜನಸಂಖ್ಯೆ ಹೊಂದಿದೆ. ಮುಖ್ಯಾಧಿಕಾರಿಗಳು ಎರಡು ದಿನ ಮೈಸೂರಿನಲ್ಲಿ, ಎರಡು ದಿನ ವಿಜಯಪುರದಲ್ಲಿದ್ದು ಒಂದು ದಿನ ಮಾತ್ರ ಪುರಸಭೆಯಲ್ಲಿರುತ್ತಾರೆ ಎಂದು ಆರೋಪಿಸಿದರು. ಮುಖ್ಯಾಧಿಕಾರಿಗಳ ವರ್ಗಾವಣೆಯಾಗದ ಹೊರತು ಧರಣಿ ಹಿಂತೆಗೆದುಕೊಳ್ಳುವದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು. ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಬುದ್ದುಗೌಡ ಪಾಟೀಲ, ಯಲ್ಲಪ್ಪ ಹದರಿ, ತಿಪ್ಪಣ್ಣ ಉಟಗಿ, ಸೈಫನ್ ಪವಾರ, ಪಿಂಟು ರಾಠೊಡ ಮತ್ತಿತರರು ಮಾತನಾಡಿದರು.