Advertisement

ಮಹಾನಗರ ಪಾಲಿಕೆ ಚುನಾವಣೆ: ಯಾದಿ ಬೆನ್ನಲ್ಲೇ ಅಸಮಾಧಾನ

01:41 PM Aug 23, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನ 78 ಅಭ್ಯರ್ಥಿಗಳ ಹೆಸರು ಘೋಷಣೆಯಾದ ಬೆನ್ನಲ್ಲೇ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಮುಖಂಡರ ಸ್ವಹಿತಾಸಕ್ತಿ, ಪಕ್ಷಕ್ಕೆ ದುಡಿದವರ ಕಡೆಗಣನೆ, ಪತ್ನಿ- ಮಕ್ಕಳು ಹಾಗೂ ಸಂಬಂಧಿಗಳಿಗೆ ಟಿಕೆಟ್‌ ನೀಡಿಕೆ ಆರೋಪ ಕೇಳಿಬಂದಿದೆ.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನಾಯಕರು ಈ ಮೌಲ್ಯ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಲ ಕಾಂಗ್ರೆಸ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯ ನಿರ್ಣಾಯಕವಾಗಿದ್ದರೂ ಸಮಾಜದ ನಾಯಕರನ್ನು ಟಿಕೆಟ್‌ ನೀಡಿಕೆಯಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಎಲ್ಲೆಲ್ಲಿ ಅಸಮಾಧಾನ?: 82ನೇ ವಾರ್ಡ್‌ ನ ಮೋಹನ ಅಸುಂಡಿ ಅವರು ಎರಡು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ವಾರ್ಡ್‌ ಮಹಿಳೆಗೆ ಮೀಸಲಾಗಿದ್ದರಿಂದ ತಮ್ಮ ಪತ್ನಿಗೆ ಟಿಕೆಟ್‌ ನೀಡುವಂತೆ ಕೇಳಿದ್ದರೂ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಾರ್ಡ್‌ 71ರಲ್ಲಿ ನಿಕಟಪೂರ್ವ ಸದಸ್ಯ ವಾಲ್ಮೀಕಿ ಸಮುದಾಯದ ಗಣೇಶ ಟಗರಗುಂಟಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಪುತ್ರ ಮಹಮ್ಮದ ಅಹ್ಮದ ಹಳ್ಳೂರ ಅವರಿಗೆ ಮಣೆ ಹಾಕಲಾಗಿದ್ದು, ಪುತ್ರ ವ್ಯಾಮೋಹದ ಮಾತುಗಳು ಕೇಳಿಬಂದಿವೆ. ಈ ವಾರ್ಡ್‌ನಲ್ಲಿ ಏಳೆಂಟು ಜನರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಬ್ದುಲ್‌ ಸಮ್ಮದ್‌ ಜಮಖಾನೆ ಅವರನ್ನು ಬಿಟ್ಟರೆ ಅಲ್ತಾಫ್‌ ಹಳ್ಳೂರ ಪುತ್ರ, ಗಣೇಶ ಟಗರಗುಂಟಿ ಸೇರಿದಂತೆ ಉಳಿದವರೆಲ್ಲರೂ ಬೇರೆ ವಾರ್ಡ್‌ನವರೇ ಎಂಬುದು ವಿಶೇಷ. ಇನ್ನೊಂದೆಡೆ ವೀರಾಪುರ ಓಣಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ ಮುಸ್ಲಿಂ ಸಮುದಾಯದವರನ್ನೂ ನಿರ್ಲಕ್ಷಿಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ವಾರ್ಡ್‌ 79ರಲ್ಲಿ ಕಾಂಗ್ರೆಸ್‌ನಿಂದ ಎರಡು ಬಾರಿ ಸೋಲು ಅನುಭವಿಸಿದ್ದ ಬಾಬಾಜಾನ್‌ ಮುಧೋಳ, ರಾಜ್ಯ ಸೇವಾದಳದ ಜಂಟಿ ಕಾರ್ಯದರ್ಶಿ ಅಬ್ದುಲ್‌ ಸಮದ್‌ ಗುಲಬರ್ಗಾ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಇವರೆಲ್ಲರನ್ನೂ ಕಡೆಗಣಿಸಿ ಕೆಜೆಪಿಯಿಂದ ಬಂದ ಅಭ್ಯರ್ಥಿಗೆ ಮಣೆ ಹಾಕಲಾಗಿದೆ. ಇದರಿಂದ ಸ್ಥಳೀಯರಲ್ಲೂ ಅಸಮಾಧಾನ ಹೊಗೆಯಾಡುತ್ತಿದೆ. ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಕೂಡಾ ಬೇರೆ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡಲಾಗಿದ್ದು, ಗುಂಪುಗಾರಿಕೆಯಿಂದ ಪಕ್ಷದಲ್ಲಿ ಬಹುತೇಕರಿಗೆ ಅನ್ಯಾಯವಾಗಿದೆ ಎಂಬ ಮಾತು ಕೇಳಿಬಂದಿದೆ. ಇದು ಮುಂಬರುವ ಚುನಾವಣೆಯಲ್ಲಿ ಹೇಗೆಲ್ಲಾ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next