Advertisement

ಪುರಸಭಾ ಅಧಿಕಾರಿಗಳಿಗೆ ವ್ಯಾಪಾರಿಗಳಿಂದ ತರಾಟೆ

11:06 AM Aug 25, 2018 | |

ಮೂಡಬಿದಿರೆ: ಮಾರುಕಟ್ಟೆ ಸಹಿತ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಚೀಲ ಬಳಕೆ ನಿಷೇಧದ ಬಗ್ಗೆ ತೀವ್ರ ಆಂದೋಲನ ಕಳೆದ ಮೂರು ನಾಲ್ಕು ವಾರಗಳಿಂದ ನಡೆಯುತ್ತಿರುವಂತೆಯೇ ಈಗ ವಾರದ ಸಂತೆಯ ದಿನವಾದ ಶುಕ್ರವಾರ ಎರಡೆರಡು ಬಾರಿ ಪ್ಲಾಸ್ಟಿಕ್‌ ಚೀಲ ಬಳಕೆ ಮತ್ತು ಮಾರಾಟದ ಪ್ರಕರಣಗಳನ್ನು ಪತ್ತೆ ಹಚ್ಚಿ ಎಚ್ಚರಿಸಲು ತೆರಳಿದ್ದ ಪುರಸಭಾ ಅಧಿಕಾರಿಗಳನ್ನು ತರಕಾರಿ ವ್ಯಾಪಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

Advertisement

ಮುಂಜಾನೆ ಪರಿಸರ ಎಂಜಿನಿಯರ್‌ ಶಿಲ್ಪಾ ಎಸ್‌. ಹಾಗೂ ಸಿಬಂದಿ ಒಂದು ಸುತ್ತು ಪರಿಶೀಲನೆ ನಡೆಸಿ, ಹೆಚ್ಚಿನವರು ಬಟ್ಟೆ ಚೀಲ ಬಳಕೆ ಮಾಡುತ್ತಿರುವುದು ಕಂಡಿದೆ. ತೊಂದರೆ ಇಲ್ಲ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಕೆಲವರು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು, ಕೆಲವರು ಚೀಲಗಳನ್ನು ಬಳಸುತ್ತಿದ್ದುದು ಕಂಡು ಬಂದಿತು. ಸಂಜೆ ವೇಳೆ ಮತ್ತೆ ಪುರಸಭಾ ಟೀಂ ಬಂದು ಪರಿಶೀಲನೆ ನಡೆಸುತ್ತ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಹಿಡಿದುಕೊಂಡಿದ್ದ ಬಳಕೆದಾರರಿಗೆ, ಸಾಮಗ್ರಿ ತುಂಬಿಸಿ ಕೊಡುತ್ತಿದ್ದ ವ್ಯಾಪಾರಿಗಳಿಗೆ ಸಾಂಕೇತಿಕ ದಂಡ ವಿಧಿಸತೊಡಗಿದಾಗ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸತೊಡಗಿದರು.

ಬೆಳಗ್ಗೆ ಕಾಗದದಲ್ಲಿ ವಸ್ತುಗಳನ್ನು ಕಟ್ಟಿಕೊಡುತ್ತಿದ್ದ ವ್ಯಾಪಾರಿ ಸಂಜೆ ಪ್ಲಾಸ್ಟಿಕ್‌ ಚೀಲದಲ್ಲಿ ಸಾಮಗ್ರಿ ಕಟ್ಟಿ ಕೊಡತೊಡಗಿದ್ದನ್ನು ಶಿಲ್ಪಾ ಪ್ರಶ್ನಿಸಿ, ದಂಡ ವಿಧಿಸಲು ಮುಂದಾದರು. ಆಗ ಆ ವ್ಯಾಪಾರಿ ಕೊಂಚ ಚರ್ಚೆಗಿಳಿದಂತೆ ಉಳಿದ ತರಕಾರಿ ವ್ಯಾಪಾರಿಗಳೂ ಅಲ್ಲಿ ಜಮಾಯಿಸಿ ವ್ಯಾಪಾರಿ ಪರಮಾತನಾಡತೊಡಗಿದರು. 

ಮೀನು , ಮಾಂಸ ಮಾರುವವರು ಪ್ಲಾಸ್ಟಿಕ್‌ ಚೀಲ ಬಳಸಬಹುದಾದರೆ ನಾವೇಕೆ ಬಳಸಬಾರದು. ಕಾನೂನು ಅವರಿಗೊಂದು ನಮಗೊಂದಾ? ಎಂದು ಪ್ರಶ್ನಿಸಿದ ವ್ಯಾಪರಿಗಳು, ಬಂದ್‌ ಮಾಡುವುದಾದರೆ ಪ್ಲಾಸ್ಟಿಕ್‌ ಫ್ಯಾಕ್ಟರಿ ಬಂದ್‌ ಮಾಡಿಸಿ, ಆಗ ನಾವೂ ಎಡ್ಜಸ್ಟ್‌ ಆಗುತ್ತೇವೆ ಎಂದು ಹೇಳಿದರು.

ಆಗ ಶಿಲ್ಪಾ ಮಾತನಾಡಿ, ಇದು ಕೌನ್ಸಿಲ್‌ ನಿರ್ಣಯ, ನಾವು ಆ ನಿರ್ಣಯವನ್ನು ಜಾರಿ ಮಾಡಲು ಬಂದವರಷ್ಟೇ ಎಂದು ಸ್ಪಷ್ಟಪಡಿಸಿದರು. ಮಹಿಳಾ ಮತ್ತು ಪುರುಷ ಪೊಲೀಸರಿದ್ದರೂ ಚರ್ಚೆ, ವಾಕ್ಸಮರ ಜೋರಾಗಿ ನಡೆದು ಕೊನೆಗೆ ಸ್ವತಃ ಪಿಎಸ್‌ಐ ದೇಜಪ್ಪ ಅವರೇ ಸ್ಥಳಕ್ಕೆ ಬರಬೇಕಾಯಿತು.

Advertisement

ಗ್ರಾಹಕರು ಒಪ್ಪುತ್ತಿಲ್ಲ
ನಾವು 50 ಮೈಕ್ರೋನ್‌ಗಿಂತ ಮೇಲ್ಪಟ್ಟ ಪ್ಲಾಸ್ಟಿಕ್‌ ಚೀಲ ಬಳಸಿ ಎಂದು ಸೂಚಿಸಿದ್ದೇವೆ. ಆದರೆ, ವ್ಯಾಪಾರಿಗಳು 50 ಮೈಕ್ರೋನ್‌ ಮೇಲ್ಪಟ್ಟ ಪ್ಲಾಸ್ಟಿಕ್‌ ಚೀಲವನ್ನು ಬಳಸಲೂ ಕಷ್ಟ, ಗ್ರಾಹಕರೂ ಒಪ್ಪುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದ ಶಿಲ್ಪಾ, ಅವರು ಮುಂದೆ ಇನ್ನಷ್ಟು ಅಂಗಡಿಗಳತ್ತ ಪರಿಶೀಲನೆಗಾಗಿ ತೆರಳಿದರು. ಈ ಪರಿಶೀಲನೆಯ ವೇಳೆ ಪುರಸಭಾ ಮುಖ್ಯಾಧಿಕಾರಿ, ಪುರಸಭಾ ಸದಸ್ಯರಾರೂ ಕಾಣಲಿಲ್ಲ.

ಮಾದರಿಯಾದ ಮಾಜಿ ಕೌನ್ಸಿಲರ್‌
ಸಂತೆಗೆ ಬಂದಿದ್ದ ಮಾಜಿ ಕೌನ್ಸಿಲರ್‌ ಡಯಾನಾ ಸೆರಾವೊ ಅವರು ಬಟ್ಟೆಯ ಚೀಲ ಹಿಡಿದುಕೊಂಡಿದ್ದರು ಮತ್ತು ತಮ್ಮದೊಂದು ತೋಳಿಲ್ಲದ ಟೀ ಶರ್ಟ್ನ್ನೇ ಒಂದು ಬದಿಯಲ್ಲಿ ಹೊಲಿದು ಕ್ಯಾರಿಬ್ಯಾಗ್‌ನಂತೆ ಮಾರ್ಪಡಿಸಿ ಬಳಸುತ್ತಿರುವುದನ್ನು ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next