Advertisement

ನಗರಸಭೆ ಆಡಳಿತಕ್ಕಿದೆ  ‘ಡಂಪಿಂಗ್‌’ನಿಗ್ರಹದ ಸವಾಲು

10:46 AM Nov 28, 2018 | Team Udayavani |

ಪುತ್ತೂರು: ಪುತ್ತೂರು ನಗರ ಸ್ಥಳೀಯಾಡಳಿತಕ್ಕೆ ತ್ಯಾಜ್ಯ ನಿರ್ವಹಣೆ ದಶಕಗಳಿಂದ ಸವಾಲಾಗಿರುವ ಸಮಸ್ಯೆ. ಪ್ರಸ್ತುತ ಅಧಿಕಾರಕ್ಕೆ ಬರುವ ನೂತನ ನಗರಸಭಾ ಆಡಳಿತದ ಪಾಲಿಗೂ ಇದು ಪ್ರಥಮ ಆದ್ಯತೆಯ ಸವಾಲಾಗಿದೆ.

Advertisement

ಸುಮಾರು 30 ವರ್ಷಗಳ ಹಿಂದೆ ಬನ್ನೂರು ಸಮೀಪದ ನೆಕ್ಕಿಲುವಿನಲ್ಲಿ ಸ್ಥಾಪನೆಯಾದ ಲ್ಯಾಂಡ್‌μಲ್‌ ಸೈಟ್‌, ಕ್ರಮೇಣ ಸಮಸ್ಯೆಯ ಆಗರವಾಗಿದೆ. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳು ಬಿದ್ದಿರುವ ಎರೆಹುಳ ಗೊಬ್ಬರ ತಯಾರಿ ವ್ಯವಸ್ಥೆ, ಪರಿಸರದಲ್ಲಿ ಸೃಷ್ಟಿಸಿದ ವಾಸನೆ, ಸ್ಥಳೀಯರಿಗೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ, ಆಗಾಗ ಸ್ಥಳೀಯರಲ್ಲಿ ಕಟ್ಟೆಯೊಡೆಯುವ ಆಕ್ರೋಶ – ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದುಬಂದಿದೆ.

ಬೆಂಕಿ ಬಿದ್ದ ಬಳಿಕ
2017ರಲ್ಲಿ ಈ ಡಂಪಿಂಗ್‌ಯಾರ್ಡ್‌ ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ 3 ವಾರಗಳ ಕಾಲ ಹೊಗೆಯಾಡಿದ್ದು, ಇಡೀ ಕಸದ ಬೆಟ್ಟವನ್ನೇ ಸುಟ್ಟು ಕರಕಲಾಗಿಸಿತ್ತು. ಇದರಿಂದ ಸಾಕಷ್ಟು ಭಾರ ತಗ್ಗಿದರೂ ಪರಿಸರದಲ್ಲಿ ಕಾಣಿಸಿಕೊಂಡ ದಟ್ಟ ಧೂಮ ವಿವಿಧ ರೀತಿಯ ಅನಾರೋಗ್ಯಕ್ಕೆ ಕಾರಣವಾಗಿತ್ತು. ಖುದ್ದು ಜಿಲ್ಲಾಧಿಕಾರಿಯವರು ಭೇಟಿ ನೀಡಿ ನಿಗಾವಹಿಸಲೆಂದೇ ಸಹಾಯಕ ಕಮಿಷನರ್‌ ಅಧ್ಯಕ್ಷತೆಯ ಸರ್ವೇಕ್ಷಣ ಸಮಿತಿ ರಚಿಸಿದ್ದರು.

ಡಂಪಿಂಗ್‌ ಯಾರ್ಡ್‌ ಸಮಸ್ಯೆಯ ಕುರಿತು ಆ ಭಾಗದ ಸದಸ್ಯ ರಾಮಣ್ಣ ಗೌಡ ಹಲಂಗ ಪದೇ ಪದೇ ಸಭೆಯಲ್ಲಿ ಪ್ರಸ್ತಾವಿಸಿದ್ದರು. ನಗರಸಭೆಯ ಕಲಾಪವನ್ನು ಡಂಪಿಂಗ್‌ ಯಾರ್ಡ್‌ನಲ್ಲೇ ನಡೆಸಬೇಕು ಎಂದೂ ಆಗ್ರಹಿಸಿದ್ದರು. ಈ ಸಮಸ್ಯೆಯ ಪರಿಣಾಮ ಜನಾಭಿಪ್ರಾಯ ಅರ್ಥ ಮಾಡಿಕೊಂಡ ಬಿಜೆಪಿ ನಗರಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ಬದಲಾಯಿಸಿತ್ತು. ಐದು ವರ್ಷಗಳಲ್ಲಿ ವಿಪಕ್ಷದಲ್ಲಿ ಕುಳಿತು ಡಂಪಿಂಗ್‌ ಯಾರ್ಡ್‌ನ ಸಮಸ್ಯೆಗೆ ಆಡಳಿತವೇ ಕಾರಣ ಎಂದು ಬೊಟ್ಟು ಮಾಡುತ್ತಿದ್ದ ಬಿಜೆಪಿ ಈಗ ಅದನ್ನು ನಿರ್ವಹಿಸಬೇಕಿದೆ.

4.50 ಕೋ.ರೂ. ಯೋಜನೆ ಸಿದ್ಧ
ಡಂಪಿಂಗ್‌ ಯಾರ್ಡ್‌ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ 4.50 ಕೋಟಿ ರೂ. ವೆಚ್ಚದ ಮೆಗಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕಳೆದ ವರ್ಷ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಮೂಲಕ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದ್ದು, ನಗರಸಭೆ ಸದಸ್ಯರ ಸಭೆ 8 ತಿಂಗಳ ಹಿಂದೆ ಅಂಗೀಕರಿಸಿತ್ತು. ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯ ಪೌರಾಡಳಿತ ಇಲಾಖೆಯ ನಿರ್ದೇಶಕರು ಮಂಜೂರಾತಿಯನ್ನೂ ನೀಡಿದ್ದಾರೆ. ಅದನ್ನು ಜಾರಿಗೊಳಿಸುವ ಹೊಣೆ ಹೊಸ ಆಡಳಿತದ ಮುಂದಿದೆ.

Advertisement

ಈ ಮೊತ್ತದ ಶೇ. 35 ಕೇಂದ್ರ ಸರಕಾರ (1.57 ಕೋಟಿ ರೂ.), ಶೇ. 23.30 (1.04 ಕೋಟಿ ರೂ.) ರಾಜ್ಯ ಸರಕಾರ, ಶೇ. 41.70 (1.87 ಕೋಟಿ ರೂ.) ನಗರಸಭೆ ಭರಿಸಬೇಕಾಗುತ್ತದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 119.13 ಲಕ್ಷ ರೂ., ಸಂಸ್ಕರಣೆ ಮತ್ತು ನಿರ್ವಹಣೆಗೆ 330.25 ಲಕ್ಷ ರೂ. ನಿಗದಿ ಮಾಡಲಾಗಿದೆ.

ಸ್ಥಳಾಂತರ ಬೇಡಿಕೆ ಈಡೇರುತ್ತಿಲ್ಲ
1989ರಲ್ಲಿ ನಿರ್ಮಾಣವಾದ ಬನ್ನೂರು ಡಂಪಿಂಗ್‌ ಯಾರ್ಡ್‌ 7 ಎಕ್ರೆ ವಿಸ್ತೀರ್ಣ ಹೊಂದಿದೆ. ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ನಡೆಯದ ಹಿನ್ನೆಲೆಯಲ್ಲಿ ಉಂಟಾದ ಹಲವು ರೀತಿಯ ಸಮಸ್ಯೆಗಳ ಬಳಿಕ ಯಾರ್ಡ್‌ ಅನ್ನು ಸ್ಥಳಾಂತರಿಸಲು ನಾಗರಿಕರು ಹಲವು ಸುತ್ತಿನ ಆಗ್ರಹ, ಹೋರಾಟ ಮಾಡಿದ್ದರು. 2 ವರ್ಷಗಳ ಹಿಂದೆ ಗ್ರಾಮಾಂತರದಲ್ಲಿ ಹೊಸ ಸ್ಥಳ ಪರಿಶೀಲಿಸಲಾಗಿತ್ತಾದರೂ ಅಲ್ಲಿನ ಜನರ ವಿರೋಧದಿಂದಾಗಿ ಕೈ ಬಿಡಲಾಯಿತು. ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಜಾಗವನ್ನು ಗುರುತಿಸುವ ಪ್ರಯತ್ನವೂ ಕೈಗೂಡಿಲ್ಲ.

ಕಾರ್ಯರೂಪಕ್ಕೆ ತರಬೇಕಿದೆ
ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆ ಅಂಗೀಕಾರಗೊಂಡಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಹೊಸದಾಗಿ ಅಧಿಕಾರಕ್ಕೆ ಬರುವ ನಗರಸಭೆ ಆಡಳಿತ ಇದನ್ನು ಕಾರ್ಯರೂಪಕ್ಕೆ ತರಬೇಕಿದೆ.
-ರೂಪಾ ಟಿ. ಶೆಟ್ಟಿ ಪೌರಾಯುಕ್ತರು,
ಪುತ್ತೂರು ನಗರಸಭೆ 

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next