ಶಿವಮೊಗ್ಗ: ನಗರದಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರದ ವೇಳೆ ಸಿಬಂದಿ ನಿರ್ಲಕ್ಷ್ಯ ತೋರಿದ್ದು, ತಡರಾತ್ರಿ ಸ್ಥಳೀಯರ ಪ್ರತಿಭಟನೆ ಬಳಿಕ ಎರಡನೇ ಬಾರಿ ಬೆಂಕಿ ನೀಡಿ ದಹಿಸಿದ ಘಟನೆ ಸಂಭವಿಸಿದೆ. ಈ ಮಧ್ಯೆ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಇಲ್ಲಿನ ಕಸ್ತೂರ್ಬಾ ರಸ್ತೆಯ ನಿವಾಸಿಯೊಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದರು. ಶುಕ್ರವಾರ ರಾತ್ರಿ ಎಂಟು ಗಂಟೆ ವೇಳೆಗೆ ಪಾಲಿಕೆ ಸಿಬಂದಿ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಚಿತಾಗಾರಕ್ಕೆ ತಂದಿದ್ದಾರೆ. ಚಿತಾಗಾರಕ್ಕೆ ಬೀಗ ಹಾಕಿದ್ದ ಕಾರಣ ಪಾಲಿಕೆ ಸಿಬಂದಿ ಬೀಗ ಒಡೆದು ಮೃತದೇಹಕ್ಕೆ ಬೆಂಕಿ ಹಚ್ಚಿ ಪೂರ್ಣ ಸುಡುವವರೆಗೆ ಕಾಯದೇ ಸ್ಥಳದಿಂದ ತೆರಳಿದ್ದಾರೆ.
ಮೃತದೇಹ ಫ್ರೀಜರ್‌ನಲ್ಲಿದ್ದ ಕಾರಣ ಬೆಂಕಿ ಆರಿ ಹೋಗಿದ್ದು, ನಾಯಿಗಳು ಶವ ಎಳೆಯಲು ಮುಂದಾಗಿದ್ದವು. ಶ್ಮಶಾನದ ಕಾವಲುಗಾರ ವಿಷಯವನ್ನು ಸ್ಥಳೀಯರ ಗಮನಕ್ಕೆ ತಂದಿದ್ದು, ಸ್ಥಳೀಯರು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ. ತಡರಾತ್ರಿ 1.30ರ ಸುಮಾರಿಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಂತ್ಯಸಂಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಪಿಪಿಇ ಕಿಟ್ ಎಸೆದರು
ಈ ವೇಳೆ ಸಿಬಂದಿ ಧರಿಸಿದ್ದ ಪಿಪಿಇ ಕಿಟ್‌ಗಳನ್ನು ಅಲ್ಲೇ ಎಸೆದು ಹೋಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಥಳಿಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.