ಬೆಂಗಳೂರು: “ಸಮಸ್ಯೆ ಹೇಳಬೇಡಿ, ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳುತ್ತಿರಿ ಎಂದು ಹೇಳಿ’ ಎಂದು ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಮೊದಲ ದಿನವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಬೆಳಗ್ಗೆ 6.30 ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹೆಬ್ಟಾಳ ಜಂಕ್ಷನ್ ಮಾನ್ಯತಾ ಟೆಕ್‌ಪಾರ್ಕ್‌ನ ವ್ಯಾಲಿ ಹಾಗೂ ಹೆಣ್ಣೂರು ರೈಲ್ವೆ ಬ್ರಿಡ್ಜ್ ಸಮೀಪದ ರಾಜಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಕೆರೆ, ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ “ಮಳೆ ಹಾನಿ ಹೇಗೆ ಆಯಿತು ಎಂದು ನಾನು ಕೇಳುತ್ತಿಲ್ಲ. ಇದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳುತ್ತೀರಿ ಎಂದು ಹೇಳಿ. ಇದಕ್ಕೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಿ’ ಎಂದು ನಿರ್ದೇಶಿಸಿದರು. “ಮೂರು ಇಲಾಖೆಗಳು ಒಂದೆಡೆ ಕುಳಿತು ಸಮಸ್ಯೆಗಳಿಗೆ ಏಕರೂಪ ಪರಿಹಾರ ತೆಗೆದುಕೊಳ್ಳಿ. ಪರಸ್ಪರ ದೂರುವ ಪ್ರವೃತ್ತಿ ಕೈಬಿಡಿ ಅಂತಿಮವಾಗಿ ನಮಗೆ ಸಮಸ್ಯೆಗೆ ಪರಿಹಾರವಾಗಬೇಕು. ಈ ನಿಟ್ಟಿನಲ್ಲಿ ಪಾಲಿಕೆಯ ಕೆರೆ ವಿಭಾಗ, ರಾಜಕಾಲುವೆ ಹಾಗೂ ಜಲಮಂಡಳಿಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಎಂದು ಸೂಚಿಸಿದರು.
ಹೆಬ್ಟಾಳ ವ್ಯಾಲಿ(ನಾಲೆ) ತಪಾಸಣೆ: ನಗರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಮಾನ್ಯತಾ ಟೆಕ್‌ಪಾರ್ಕ್ ಸುತ್ತಮುತ್ತಲಿನ ಪ್ರದೇಶ ಜಲಾವೃತ್ತವಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪರಿಶೀಲನೆ ನಡೆಸಿದರು. ಇಲ್ಲಿನ ಸಮಸ್ಯೆಯ ಬಗ್ಗೆ ವಿವರಿಸಿದ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು, ಮಾನ್ಯತಾ ಟೆಕ್‌ಪಾರ್ಕ್ ಬಳಿ ಹೆಬ್ಟಾಳ ಕೆರೆ ಹಾಗೂ ರಾಚೇನಹಳ್ಳಿ ಕೆರೆಯ ನೀರು ಹೆಬ್ಟಾಳ ವ್ಯಾಲಿ ಮೂಲಕ ಹರಿದು ಹೋಗುತ್ತದೆ. ಮಳೆ ಹೆಚ್ಚು ಸುರಿದಾಗ ಸುತ್ತಲ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ಅಲ್ಲದೆ ನಾಲೆಯ ಮೇಲೆ ಚಾವಣಿ ಅಳವಡಿಸಿದ್ದು, ಹೂಳು ತೆಗೆಯಲು ಸಮಸ್ಯೆ ಆಗುತ್ತಿದೆ ಎಂದು ವಿವರಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ನಾಲೆ ಮೇಲೆ ಎಂಬೆಸ್ಸಿ ಗ್ರೂಫ್ನಿಂದ ಅಳವಡಿಸಿರುವ ಮೇಲ್ಚಾವಣಿಯನ್ನು ಎಂಬೆಸ್ಸಿ ಗ್ರೂಫ್ನವರೇ ಸೂಕ್ತವಾಗಿ ಮತ್ತು ತಾಂತ್ರಿಕವಾಗಿ ತೆರವುಗೊಳಿಸಲು ಮರುವಿನ್ಯಾಸಗೊಳಿ ಸಬೇಕು. ಈ ನಿಟ್ಟಿನಲ್ಲಿ ಎಂಬೆಸ್ಸಿಯವರು ಒಂದು ವಾರದಲ್ಲಿ ಕ್ರಿಯಾಯೋಜನೆ ರೂಪಿಸ ುವಂತೆ ಆಡಳಿತಾಧಿಕಾರಿ ನಿರ್ದೇಶನ ನೀಡಿದರು. ಎಂಬೆಸ್ಸಿಯಿಂದ ಮರುವಿನ್ಯಾಸ ವಿಳಂಬವಾದರೆ, ಪಾಲಿಕೆಯಿಂದಲೇ ಚಾವಣಿ ಮರುವಿನ್ಯಾಸಗೊಳಿಸಿ ಇದರ ದುಪ್ಪಟ್ಟು ದಂಡ ವಿಧಿಸಲು ಸೂಚನೆ ನೀಡಿದರು.
ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ ಬಳಿ ಮಳೆಯಾದರೆ ಈ ಭಾಗದಲ್ಲಿ ಮಳೆ ನೀರು ಎರಡು ಮೂರು ಗಂಟೆ ನೀರು ನಿಲ್ಲುತ್ತದೆ ಎಂದು ಇಲ್ಲಿನ ಸ್ಥಳೀಯರು ದೂರಿದರು. ಇದಕ್ಕೆ ವಿವರಣೆ ನೀಡಿದ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣಾ , ಮಳೆಯಾದರೆ ಅಮೃತಹಳ್ಳಿ ಕೆರೆಯಿಂದ ರಾಚೇಚನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಕೊಳಚೆ ನೀರು ರಾಜಕಾಲುವೆ ಮಾರ್ಗವಾಗಿ ಬರುವುದರಿಂದ ನೇರವಾಗಿ ಕೆರೆಗೆ ಬಿಡಲು ಸಾಧ್ಯವಿಲ್ಲ. ಇದು ರಸ್ತೆಗೆ ಹರಿಯುವುದರಿಂದ ರಸ್ತೆ ಭಾಗ ಜಲಾವೃತವಾಗುತ್ತದೆ. ಇದಕ್ಕೆ ಪ್ರತ್ಯೇಕ (ಡೈವರ್ಷನ್)ಲೈನ್ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ರಾಚೇನಹಳ್ಳಿ ಕೆರೆಗೆ ಮಳೆ ನೀರು ಸೇರುವ ರಾಜಕಾಲುವೆ ಮಾರ್ಗವೂ ಕಿರಿದಾಗಿದ್ದು, ಸಮಸ್ಯೆ ಆಗುತ್ತಿದೆ. ಅಲ್ಲದೆ, ಸುಮಾರು 650 ಮೀ. ಡೈವರ್ಷನ್ ಲೈನ್ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ಜಂಕ್ಷನ್ ಗ್ರೇಡ್ ಸೆಪರೇಟರ್ ತಪಾಸಣೆ: ಹೆಗ್ಡೆ ನಗರ ರಾಷ್ಟ್ರೋತ್ಥಾನ ಜಂಕ್ಷನ್ ನಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿ ತಪಾಸಣೆ ನಡೆಸಿದ ಗೌರವ್ ಗುಪ್ತಾ ಅವರು, ಸುತ್ತಮುತ್ತಲಿನ ತ್ಯಾಜ್ಯವನ್ನು ಕೂಡಲೆ ತೆರವುಗೊಳಿಸಿ, ನವೆಂಬರ್ ಅಂತ್ಯಕ್ಕೆ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ವಿಶೇಷ ಆಯುಕ್ತರಾದ ಮನೋಜ್ ಜೈನ್, ಮಂಜುನಾಥ್, ರವೀಂದ್ರ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್, ವಲಯ ಜಂಟಿ ಆಯುಕ್ತರಾದ ಅಶೋಕ್, ವೆಂಕಟಾ ಚಲಪತಿ, ರಾಜಕಾಲುವೆ ಮುಖ್ಯ ಎಂಜಿನಿಯರ್ ಪ್ರಹ್ಲಾದ್, ಯೋಜನೆ ಮುಖ್ಯ ಎಂಜಿನಿಯರ್ ರಮೇಶ್, ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣಾ ಇತರ ಅಧಿಕಾರಿಗಳಿದ್ದರು.