ಮುಂಬಯಿ: ಮುಂಬೈನ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿ, ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಮುಂಬಯಿಯಲ್ಲಿ ನಡೆದಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ನಗರದ ಕೋಟೆ ಪ್ರದೇಶದ ಹುಕ್ಕಾ ಪಾರ್ಲರ್ ನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು, ಮಂಗಳವಾರ ನಡೆದ ಈ ದಾಳಿಯಲ್ಲಿ 4,400 ನಗದು ಮತ್ತು 13,500 ಮೌಲ್ಯದ ಒಂಬತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ದಾಳಿ ನಡೆಸಿದ್ದು, ಬುಧವಾರ ಬೆಳಗಿನ ಜಾವ 5 ಗಂಟೆಯವರೆಗೆ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
“ದಾಳಿಯ ಸಮಯದಲ್ಲಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಮತ್ತು ಇತರರು ಜಂಟಿಯಾಗಿ ಹುಕ್ಕಾಗಳನ್ನು ಸೇದುತ್ತಿದ್ದರು. ಅವರು ಹುಕ್ಕಾ ಸೇದುತ್ತಿರುವ ವಿಡಿಯೋ ಕೂಡ ನಮ್ಮ ಬಳಿ ಇದೆ. ನಾವು ಫಾರೂಕಿ ಮತ್ತು ಇತರರನ್ನು ಬಂಧಿಸಿದ್ದೇವೆ. ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
2021 ರಲ್ಲಿ ಮುನಾವರ್ ಫಾರೂಕಿ ಅವರನ್ನು ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿತ್ತು. ಆ ಬಳಿಕ ಅವರನ್ನು ಬಂಧಿಸಲಾಗಿತ್ತು.
ಈ ವೇಳೆ ಮುನಾವರ್ ಅವರ ಹಾಸ್ಯ ಕಾರ್ಯಕ್ರಮಗಳಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ 2022 ರಲ್ಲಿ ಅವರು ʼಲಾಕ್ ಅಪ್ʼ ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ಅಲ್ಲಿ ವಿಜೇತರಾಗಿ, ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು, ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಬಿಗ್ ಬಾಸ್ ನಲ್ಲೂ ವಿಜೇತರಾಗಿ ಹೊರಹೊಮ್ಮಿದರು.