ಮುಂಬಯಿ: ಕಳೆದ ಒಂದು ದಶಕದಿಂದ ಮುಂಬಯಿ ಮಹಾನಗರದಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳು ಕನ್ನಡಿಗ ಮಕ್ಕಳಿಗೆ ಯಕ್ಷಗಾನ ನೃತ್ಯ ತರಬೇತಿ ನೀಡಿ, ನಗರದ ಪ್ರತಿಷ್ಠಿತ ಯಕ್ಷಗಾನ ನೃತ್ಯ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದ ಭ್ರಾಮರಿ ಯಕ್ಷ ನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್ ಮುಂಬಯಿ ವತಿಯಿಂದ 2019-2020ನೇ ಸಾಲಿನ ಯಕ್ಷಗಾನ ನೃತ್ಯ ತರಬೇತಿ ಶಿಬಿರವು ಪ್ರಾರಂಭಗೊಳ್ಳಲಿದೆ.
ರಂಗ ಕಲಾವಿದ, ನಿರ್ದೇಶಕ ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ಮತ್ತು ಮಹಾನಗರದ ಹಿರಿಯ ಯಕ್ಷಗಾನ ಮೇರು ಕಲಾವಿದ ಕಟೀಲು ಸದಾನಂದ ಶೆಟ್ಟಿ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ತನ್ನ 2019-2020ರ ಸಾಲಿನ ಯಕ್ಷಗಾನ ನೃತ್ಯ ತರಬೇತಿ ಶಿಬಿರಗಳನ್ನು ನೆರೂಲ್, ಡೊಂಬಿವಲಿ, ದಹಿಸರ್, ಸಾಕಿನಾಕಾ, ಖಾರ್ ಹಾಗೂ ಮೀರಾ ರೋಡ್ ಪ್ರದೇಶದಲ್ಲಿ ಜೂನ್ ತಿಂಗಳ ಮೊದಲ ವಾರದಿಂದ ಪ್ರಾರಂಭಗೊಳ್ಳಲಿದೆ.
ಗುರುಗಳಾದ ಕಟೀಲು ಸದಾನಂದ ಶೆಟ್ಟಿ ಇವರ ಮುಂದಾಳತ್ವದಲ್ಲಿ ಉಜಿರೆ ನಾರಾಯಣ ಹಾಸ್ಯಗಾರ ಮತ್ತು ರಾಜೇಶ್ ಮೊಯ್ಲಿ ಕಲ್ಯಾ ಇವರ ಸಹಕಾರದಿಂದ ಜೂ. 2ರಂದು ನೆರುಲ್ ಒಂದನೇ ವಿಭಾಗ, ಜೂ. 3ರಂದು ಡೊಂಬಿವಲಿ ವಿಭಾಗ, ಜೂ. 6ರಂದು ಖಾರ್ ವಿಭಾಗ, ಜೂ. 7ರಂದು ನೆರೂಲ್ ಎರಡನೇ ವಿಭಾಗ, ಜೂ. 8 ರಂದು ದಹಿಸರ್ ವಿಭಾಗ, ಜೂ. 9ರಂದು ಸಾಕಿನಾಕಾ ಮತ್ತು ಮೀರಾರೋಡ್ ವಿಭಾಗಗಳಲ್ಲಿ ಯಕ್ಷಗಾನ ನೃತ್ಯ ತರಬೇತಿ ಕೇಂದ್ರಗಳು ಉದ್ಘಾಟನೆಗೊಳ್ಳಲಿದೆ.
ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಸ್ಥೆಯು ವಿಶೇಷವಾಗಿ ಆರಂಭಗೊಳ್ಳುವ ಯಕ್ಷಗಾನ ನೃತ್ಯ ಶಿಬಿರ ಕೇಂದ್ರಗಳಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ, ವೇಷ ಭೂಷಣಗಳನ್ನು ಕಟ್ಟುವ ಕ್ರಮ, ಸಾಂಪ್ರದಾಯಿಕ ಯಕ್ಷಗಾನ ಕ್ರಮಗಳ ಬಗ್ಗೆ ಮಾಹಿತಿ, ಪುರಾಣ ಕಥಾ ಕಮ್ಮಟ ಇತ್ಯಾದಿಗಳನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಗುರುಗಳಾದ ಕಟೀಲು ಸದಾನಂದ ಶೆಟ್ಟಿ (9987727798 ) ಇವರನ್ನು ಸಂಪರ್ಕಿಸಬಹುದು. ಯಕ್ಷಗಾನ ನೃತ್ಯ ತರಬೇತಿ ಶಿಬಿರದ ಸದುಪಯೋಗವನ್ನು ಆಯಾಯ ಪರಿಸರದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕೆಂದು ಸಂಸ್ಥೆಯ ಟ್ರಸ್ಟಿಗಳಾದ ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು, ಯಕ್ಷಗುರು ಕಟೀಲು ಸದಾನಂದ ಶೆಟ್ಟಿ, ಗೌರವ ಅಧ್ಯಕ್ಷರಾದ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಅಧ್ಯಕ್ಷೆ ಸುಶೀಲಾ ಸಿ. ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.