ಮುಂಬಯಿ: ಇತ್ತೀಚೆಗೆ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅನಗತ್ಯ ಲಿಂಕ್ ಕ್ಲಿಕ್ಕಿಸಿ ಮೋಸಕ್ಕೆ ಒಳಗಾಗುತ್ತೇವೆ. ಇಂಥದ್ದೇ ಒಂದು ಘಟನೆ ಮುಂಬಯಿಯಲ್ಲಿ ನಡೆದಿದೆ.
ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುತ್ತಿರುವ 65 ವರ್ಷದ ಮಹಿಳೆಯೊಬ್ಬರು ಕರೆಂಟ್ ಬಿಲ್ ಪಾವತಿಸಲು ಹೋಗಿ 7 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಕೆಲ ದಿನಗಳ ಹಿಂದೆ ಮಹಿಳೆಯ ಗಂಡನ ಮೊಬೈಲ್ ಗೆ ಪಾವತಿಯಾಗದ ವಿದ್ಯುತ್ ಬಿಲ್ ನ್ನು ಬೇಗನೇ ಪಾವತಿಸಿ ಎಂದು ಎಸ್ ಎಂಎಸ್ ವೊಂದು ಬಂದಿದೆ. ಸರಿಯಾದ ಸಮಯಕ್ಕೆ ಬಿಲ್ ಪಾವತಿಸದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಎಂದು ಮತ್ತೆ ಮೆಸೇಜ್ ಬಂದಿದೆ. ಮಹಿಳೆ ವಿದ್ಯುತ್ ವಿಭಾಗವೆಂದು ಎಸ್ ಎಂಎಸ್ ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ವ್ಯಕ್ತಿಯೊಬ್ಬ ಕಾಲ್ ರಿಸೀವ್ ಮಾಡಿ ವಿದ್ಯುತ್ ವಿಭಾಗದ ಸಿಬ್ಬಂದು ಎಂದು ಮಾತನಾಡಿ, ಆ್ಯಪ್ ವೊಂದು ಡೌನ್ಲೋಡ್ ಮಾಡಿ ಎಂದಿದ್ದಾರೆ.
ಆ್ಯಪ್ ಡೌನ್ಲೋಡ್ ಮಾಡಿದ ಬಳಿಕ ವ್ಯಕ್ತಿ ಮಹಿಳೆಗೆ ಹಲವು ಸೂಚನೆಗಳನ್ನು ಕೊಟ್ಟು ಪಾಸ್ ವರ್ಡ್ , ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಇದಾದ ಕೆಲವೇ ಸಮಯದ ಬಳಿಕ ಮಹಿಳೆಗೆ ಬ್ಯಾಂಕ್ ನಿಂದ ಹಣ ಕಡಿತವಾದ ಮೂರು ಮೆಸೇಜ್ ಗಳು ಬಂದಿದೆ.
4,62,959, ರೂ 1,39,900, ಮತ್ತು ರೂ 89,000. ಒಟ್ಟು 6,91,859 ರೂ. ಹಂತ ಹಂತವಾಗಿ ಡಿಬೀಟ್ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಡಿಬೀಟ್ ಆದುದ್ದರಿಂದ ಬ್ಯಾಂಕ್ ಅಧಿಕಾರಿಗಳು ಮಹಿಳೆಯನ್ನು ಸಂಪರ್ಕಿಸಿ ಇದರ ಬಗ್ಗೆ ಹೇಳಿದ್ಧಾರೆ. ಈ ವಿಷಯ ತಿಳಿದ ಮಹಿಳೆ ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ.
ಮಹಿಳೆಯ ಪುತ್ರಿ ಈ ಕುರಿತು ಅಂಧೇರಿ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.