Advertisement

ಮುಂಬಯಿ ವಿವಿ ಕನ್ನಡ  ವಿಭಾಗ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ ಉದ್ಘಾಟನೆ

12:19 PM Aug 30, 2018 | Team Udayavani |

ಮುಂಬಯಿ: ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ನಿರ್ಮಾಣವಾಗಿದ್ದು ಅದನ್ನು ಅನ್ಯ ಭಾಷಿಕರಿಗೆ ಪರಿಚಯಿಸುವ ಕೆಲಸ ಇನ್ನಷ್ಟು  ನಡೆಯಬೇಕು. ಅನುವಾದದ ಮೂಲಕ ಸಾಮರಸ್ಯ ಸಾಧ್ಯವಾಗುತ್ತದೆ. ಅಪರ್ಣಾ ನಾಯ್ಗಾಂವ್ಕರ್‌ ಅವರು ಕನ್ನಡ ಕಾದಂಬರಿಯೊಂದನ್ನು ಮರಾಠಿಗೆ ಅನುವಾದಿಸಿರುವುದು ಪ್ರಶಂಸನೀಯ. ಈ ಮೂಲಕ ಅವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂಬುದಾಗಿ ಅಕ್ಷಯ ಪತ್ರಿಕೆಯ ಸಂಪಾದಕ, ಪತ್ರಕರ್ತ, ಲೇಖಕ ಡಾ| ಈಶ್ವರ ಅಲೆವೂರು ಅವರು ಅಭಿಪ್ರಾಯಪಟ್ಟರು.

Advertisement

ಕನ್ನಡ ವಿಭಾಗ ಮುಂಬಯಿ ವಿವಿ ಇತ್ತೀಚೆಗೆ ಆಯೋಜಿಸಿದ್ದ ಕೃತಿ ಬಿಡುಗಡೆ, ಕನ್ನಡ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸಿನ ಉದ್ಘಾಟನ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಅಪರ್ಣಾ ನಾಯಾYಂವ್‌ಕರ್‌ ಅನುವಾದಿಸಿದ ಘಾಚರ್‌ ಘೋಚರ್‌ ಕೃತಿಯನ್ನು ಬಿಡುಗಡೆಗೆಳಿಸಿ ಮಾತನಾಡಿ,  ಕನ್ನಡ ವಿಭಾಗ ಸಾಂಸ್ಕೃತಿಕ ಕೇಂದ್ರ ವಾಗಿ ಪ್ರಸಿದ್ಧಿಯನ್ನು ಪಡೆಯುತ್ತಾ ಬಂದಿದೆ. ಕನ್ನಡ ವಿಮರ್ಶೆಗೆ ದೊಡ್ಡ ಪರಂಪರೆ ಇದೆ. ವಿಮರ್ಶೆಯ ಕುರಿತು ಅಧ್ಯಯನ ಮಾಡಿ ಎಂ.ಫಿಲ್‌. ಪದವಿ ಪಡೆದ ರೂಪಾ ಸಂಗೊಳಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅಬುಧಾಬಿಯ ಸಂಘಟಕ, ಲೇಖಕ ಮನೋಹರ ತೋನ್ಸೆ ಅವರು ಮಾತನಾಡಿ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ನಿಜವಾದ ಅರ್ಥದಲ್ಲಿ ಕನ್ನಡವನ್ನು ಪೋಷಿಸಿ ಬೆಳೆಸುತ್ತದೆ. ವಿಭಾಗಕ್ಕೆ ಭೇಟಿ ನೀಡುವುದೇ ಕನ್ನಡ ಸಾರಸ್ವತ ಲೋಕಕ್ಕೆ ಪ್ರವೇಶದ ಅನುಭವವನ್ನು ಕೊಡುತ್ತದೆ. ಮರಾಠಿ ಮಹಿಳೆಯೊಬ್ಬರು ಕನ್ನಡ ಕೃತಿಯೊಂದನ್ನು ಅನುವಾದಿಸಿ ಪ್ರಕಟಿಸಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದು ನುಡಿದರು. ಇನ್ನೋರ್ವ ಮುಖ್ಯ ಅತಿಥಿ ಸಂಘಟಕ, ಕನ್ನಡ ಸೇನಾನಿ ಎಸ್‌. ಕೆ. ಸುಂದರ್‌ ಅವರು ಮಾತನಾಡಿ, ಕನ್ನಡ ವಿಭಾಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿದೆ. ಕನ್ನಡ ವಿಭಾಗಕ್ಕೆ ಈಗ ಸುವರ್ಣಯುಗ ಎಂಬುದಾಗಿ ಹೇಳಿ ಹರ್ಷ ವ್ಯಕ್ತಪಡಿಸಿದರು.

ಅನುವಾದಕರಾದ ಅಪರ್ಣಾ ನಾಯ್ಗಾಂವ್ಕರ್‌ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಬ್ಯಾಂಕ್‌ ಉದ್ಯೋಗ ಮಾಡಿ ನಿವೃತ್ತಿಯ ನಂತರ ಕನ್ನಡ ವಿಭಾಗಕ್ಕೆ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿರುವ ಒಳ್ಳೆಯ ಸಾಹಿತ್ಯವನ್ನು ಓದುತ್ತಾ ಬಂದೆ. ಇದೀಗ ವಿವೇಕ್‌ ಶ್ಯಾನುಭಾಗ್‌ ಅವರ ಉತ್ತಮ ಕೃತಿಗಳಲ್ಲಿ ಒಂದಾದ ಘಾಚಾರ್‌ ಘೋಚರ್‌ ಕಾದಂಬರಿಯನ್ನು ಅನುವಾದಿಸಿ ಖುಷಿ ಪಟ್ಟಿದ್ದೇನೆ ಎಂದು ತಮ್ಮ ಅನುವಾದ ಕಾರ್ಯದಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.

ಡಾ| ಜಿ. ಎನ್‌. ಉಪಾಧ್ಯ  ಕೃತಿಕಾರರಾದ ಅಪರ್ಣಾ ಅವರನ್ನು  ಗ್ರಂಥ ಗೌರವದೊಂದಿಗೆ ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸರ್ಟಿಫಿಕೇಟ್‌ ಹಾಗೂ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಸ್‌.  ಸತ್ಯಮೂರ್ತಿ ಹಾಗೂ ಸರೋಜಿನಿ  ಅವರು ಮಾರ್ಗದರ್ಶನವನ್ನು ನೀಡಿದರು. ಸಂಚಾಲಕರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಕನ್ನಡ ಕಲಿಕೆಯ ವಿಧಿ-ವಿಧಾನಗಳ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

Advertisement

ಇತ್ತೀಚೆಗೆ ಬಿಡುಗಡೆಯಾದ ಗೀತಾ ಮಂಜುನಾಥ್‌ ಅವರ ಕಲಾಸೌರಭ ಸರೋಜಾ ಶ್ರೀನಾಥ್‌ ಕೃತಿಯ ಕುರಿತಾಗಿ ಡಾ| ಕೆ. ಗೋವಿಂದ ಭಟ್‌ ಮಾತನಾಡಿದರು.  ಕಲಾವಿದ ಜಯ ಸಾಲ್ಯಾನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಅಪರ್ಣಾ ನಾಯ್ಗಾಂವ್ಕರ್‌  ಅವರ ಬಂಧುಗಳಾದ ಮುಂಬಯಿ ವಿಶ್ವವಿದ್ಯಾಲಯ ಫಿಲಾಸಫಿ ವಿಭಾಗದ ಡಾ| ಪ್ರಿಯಾ ಎಂ. ವೈದ್ಯ, ಮೃನ್ಮು ರಾನಡೆ, ಗುಣ್‌ ನಾಯ್ಗಾಂವ್ಕರ್‌, ಆದಿತ್ಯ ನಾಯ್ಗಾಂವ್ಕರ್‌, ಕನ್ನಡ ವಿಭಾಗದ  ವಿದ್ಯಾರ್ಥಿಗಳಾದ ಸೂರಪ್ಪ ಕುಂದರ್‌, ಲಕ್ಷ್ಮೀ  ಪೂಜಾರಿ, ದಿನಕರ್‌ ಎನ್‌. ಚಂದನ್‌, ಗೀತಾ ಮಂಜುನಾಥ್‌, ಶಿವರಾಜ್‌ ಎಂ. ಜಿ., ಪಾರ್ವತಿ ಪೂಜಾರಿ, ಜಮೀಲಾ ವಿಪ್ಪರಗಿ, ಪೇತ್ರಿ ವಿಶ್ವನಾಥ ಶೆಟ್ಟಿ, ಜೀವಿಕಾ ಶೆಟ್ಟಿ, ರತ್ನಾಕರ ರಾವ್‌, ಸಂತೋಷ್‌ ಪೆಡ್ಣೇಕರ್‌, ಹೇಮಾ ಅಮೀನ್‌, ಡಾ| ಪ್ರತಿಮಾ, ಗಿರಿಧರ್‌ ಮೊದಲಾದವರು ಉಪಸ್ಥಿತರಿದ್ದರು. ಸಂಶೋಧನ ಸಹಾಯಕರಾದ ಸುಶೀಲಾ ದೇವಾಡಿಗ ಅವರು ಸ್ವಾಗತ ಗೀತೆಯನ್ನು ಹಾಡಿದರು. ಸಂಶೋಧನ ಸಹಾಯಕರಾದ ವೈ. ವಿ. ಮಧುಸೂದನ್‌ ರಾವ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಶೋಧನ ಸಹಾಯಕರಾದ ಕುಮುದಾ ಆಳ್ವ ವಂದಿಸಿದರು.

ಕನ್ನಡದ ಸಾಹಿತಿ ವಿವೇಕ ಶ್ಯಾನುಭಾಗ್‌ ಅವರ ಕಾದಂಬರಿಯನ್ನು ಅಪರ್ಣಾ ನಾಯಾYಂವ್‌ಕರ್‌ ಅವರು ಮರಾಠಿಗೆ ಅನುವಾದ ಮಾಡಿ ನಾವೆಲ್ಲ ಸಂಭ್ರಮ ಪಡುವಂತೆ ಮಾಡಿದ್ದಾರೆ. ಮೀನಾ ವಾಂಗೀಕರ್‌, ಉಮಾ ಕುಲಕರ್ಣಿ ಮೊದಲಾದವರ ಸಾಲಿಗೆ ಈಗ ಅಪರ್ಣಾ ನಾಯಾYಂವ್‌ಕರ್‌ ಸಹ ಸೇರಿದ್ದಾರೆ. ಮರಾಠಿಯಲ್ಲಿ ನೂರಾರು ಕೃತಿಗಳು ಕನ್ನಡಕ್ಕೆ ಬಂದಿವೆ. ಆದರೆ ಕೆಲವೇ ಕೆಲವು ಕನ್ನಡ ಕೃತಿಗಳು ಮರಾಠಿಗೆ ಹೋಗಿವೆ. ಹೀಗಿರುವಾಗ ಕನ್ನಡ ವಿಭಾಗದ ಮೂಲಕ ಕನ್ನಡ ಕಲಿತು ಕನ್ನಡದ ಒಳ್ಳೆಯ ಕಾದಂಬರಿಯೊಂದನ್ನು ಮರಾಠಿಗೆ ಅನುವಾದಿಸಿ ನಾವೆಲ್ಲ ಪುಳಕಗೊಳ್ಳುವಂತೆ ಅಪರ್ಣಾ ಅವರು ಮಾಡಿದ್ದಾರೆ. ಇದು ಕನ್ನಡ ಮರಾಠಿ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ .
-ಡಾ| ಜಿ. ಎನ್‌. ಉಪಾಧ್ಯ,  ಪ್ರಾಧ್ಯಾಪಕ, ಮುಖ್ಯಸ್ಥರು : ಕನ್ನಡ ವಿಭಾಗ ಮುಂಬಯಿ ವಿವಿ

Advertisement

Udayavani is now on Telegram. Click here to join our channel and stay updated with the latest news.

Next