ಮುಂಬಯಿ, ಜೂ. 19: ಮುಂಬಯಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕೆ ಹೆಚ್ಚಳವಾದರೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆಗಳು ಇವೆ. ಜುಲೈ ಅಂತ್ಯದ ವೇಳೆಗೆ ನಿಗಮವು 20,000 ಹಾಸಿಗೆಗಳನ್ನು ಮತ್ತು ತೀವ್ರ ನಿಗಾ ಘಟಕಕ್ಕೆ 2,000ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಲಿದ್ದೇವೆ ಎಂದು ಮನಪಾ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಇಂದು ಸುಮಾರು 60,000 ಕೋವಿಡ್ ರೋಗಿಗಳಿದ್ದರೂ, ಆಸ್ಪತ್ರೆಗೆ ದಾಖಲಾಗಬೇಕಾದವರ ಸಂಖ್ಯೆ ಕಡಿಮೆ. ಅಂಕಿಅಂಶಗಳ ಪ್ರಕಾರ, ಮಹಾನಗರ ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ 11,548 ಹಾಸಿಗೆಗಳು ಲಭ್ಯವಿದ್ದು, 9545 ರೋಗಿಗಳನ್ನು ದಾಖಲಿಸಲಾಗಿದೆ. ಸುಮಾರು 1500 ಹಾಸಿಗೆಗಳು ಖಾಲಿ ಇವೆ. ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂಬ ದೂರು ಇತ್ತು. ಆದರೆ ಇಂದು ನಮ್ಮಲ್ಲಿ ಐಸಿಯುನಲ್ಲಿ 1163 ಹಾಸಿಗೆಗಳಿವೆ, ಅದರಲ್ಲಿ 21 ಹಾಸಿಗೆಗಳು ಖಾಲಿ ಇವೆ. ಆಮ್ಲಜನಕ ವ್ಯವಸ್ಥೆಯೊಂದಿಗೆ 5612 ಹಾಸಿಗೆಗಳಿವೆ. ಇದರಲ್ಲಿ 1297 ಹಾಸಿಗೆಗಳು ಖಾಲಿಯಾಗಿವೆ.
ಜಂಬೋ ಬೆಡ್ ನೆಟ್‌ವರ್ಕ್ ನಿರ್ಮಾಣ : ಮುಂಬಯಿಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಪರಿಗಣಿಸಿ, ಜುಲೈ ಅಂತ್ಯದ ವೇಳೆಗೆ ಮುಂಬಯಿಯ ವಿವಿಧ ಸ್ಥಳಗಳಲ್ಲಿ 20,000 ಹಾಸಿಗೆಗಳನ್ನು ವ್ಯವಸ್ಥೆ ಮಾಡುತ್ತಿದ್ದೇವೆ. ಪ್ರಸ್ತುತ ಐಸಿಯುನಲ್ಲಿ 1163 ಖಾಸಗಿ ಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಹಾಸಿಗೆಗಳ ಸಂಖ್ಯೆ ದ್ವಿಗುಣಗೊಳ್ಳಲಿವೆ. ಪ್ರಸಕ್ತ ಮುಂಬಯಿಯಲ್ಲಿ ರೋಗಿಗಳ ಬೆಳವಣಿಗೆಯ ಪ್ರಮಾಣವನ್ನು ನೋಡಿದರೆ ಮುಂದಿನ 29 ದಿನ ದಿನಗಳ ಬಗ್ಗೆ ಗಮನಹರಿಸಿ ನಾವು ಜಂಬೋ ಬೆಡ್ ನೆಟ್‌ವರ್ಕ್ ನ ನಿರ್ಮಿಸುತ್ತಿದ್ದೇವೆ. ಆದರೆ ಇದರ ಅಗತ್ಯ ಏನು ಎಂದು ಟೀಕಿಸುವವರು ಇದ್ದಾರೆ ಎಂದು ಆಯುಕ್ತ ಚಾಹೆಲ್ ಹೇಳಿದರು.
ಇನ್ನು ಮುಂದೆ ಮುಂಬಯಿಯಲ್ಲಿ ಯಾವುದೇ ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲ ಅಥವಾ ಹಾಸಿಗೆ ಪಡೆಯಲು ಅಲೆಯಬೇಕಾಗುತ್ತದೆ ಎನ್ನುವ ಚಿತ್ರಣ ಕಾಣಿಸುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಹೊರತಾಗಿ, ಜೂನ್ 30 ರೊಳಗೆ 15,000 ಹಾಸಿಗೆಗಳು ಮತ್ತು ಜುಲೈ ಅಂತ್ಯದ ವೇಳೆಗೆ ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ 20,000 ಹಾಸಿಗೆಗಳು ಸಿದ್ಧವಾಗಲಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಗೋರೆಗಾಂವ್ ನಲ್ಲಿ 3000 ಹಾಸಿಗೆಗಳು, ಬಿಕೆಯಲ್ಲಿ 2000 ಹಾಸಿಗೆಗಳು, ಡೊಮ್ ಮತ್ತು ರೇಸ್‌ಕೋರ್ಸ್ ನಲ್ಲಿ 1400 ಹಾಸಿಗೆಗಳು, ಮುಲುಂಡ್‌ನಲ್ಲಿ 2000 ಹಾಸಿಗೆಗಳು ಮತ್ತು ದಹಿಸರ್‌ನಲ್ಲಿ 2000 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ವಾರದಿಂದ ಎಲ್ಲ ಪರೀಕ್ಷೆಗಳ ವರದಿಗಳು ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ವಾರ್ಡ್‌ನ ನಿಯಂತ್ರಣ ಕೊಠಡಿಗೆ ಬರುತ್ತವೆ. ಅಲ್ಲಿಂದ ರೋಗಿಯನ್ನು ಸಂಪರ್ಕಿಸಲಾಗುತ್ತದೆ ಮತ್ತು ಮನಪಾದ ಆ್ಯಂಬುಲೆನ್ಸ್‌ನಿಂದ ರೋಗಿಯನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮುಂಬಯಿಯ ಎಲ್ಲ ಕೋವಿಡ್ ಸೋಂಕಿತರನ್ನು ಮಧ್ಯಾಹ್ನ 12ರ ವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕಾಗಿ ಎಲ್ಲ ಪ್ರಯೋಗಾಲಯಗಳು ತಮ್ಮ ಪರೀಕ್ಷಾ ವರದಿಗಳನ್ನು ಮೊದಲು ಮನಪಾಕ್ಕೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.
ಮನಪಾದ 24 ವಾರ್ಡ್‌ಗಳ ನಿಯಂತ್ರಣ ಕೊಠಡಿಯಲ್ಲಿರುವ ವೈದ್ಯರು ಮಾಹಿತಿಯನ್ನು ಪಡೆದು ಸಂಬಂಧಪಟ್ಟ ರೋಗಿಯನ್ನು ಮನೆಯಲ್ಲಿ ಅಥವಾ ಪುರಸಭೆಯ ಸಂಪರ್ಕ ತಡೆ ಕೇಂದ್ರಕ್ಕೆ ಸೇರಿಸಿಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ರೋಗಿಯು ಪಾಸಿಟಿವ್ ಹೊಂದಿದ್ದು, ಜ್ವರ ಮತ್ತು ಕೊಮೊರ್ಬಿಡಿಟಿಗಳನ್ನು ಹೊಂದಿದ್ದರೆ, ಅವರನ್ನು ಖಾಸಗಿ ಅಥವಾ ಮಹಾನಗರ ಪಾಲಿಕೆಯ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ಸಮರ್ಪಕ ಸಿಬಂದಿ ಮತ್ತು 10 ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಈಗ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂದು ಯಾರಿಂದಲೂ ದೂರ ಬರುವುದಿಲ್ಲ ಎಂದು ಆಯುಕ್ತ ಇಕ್ಬಾಲ್ ಸಿಂಗ್ ಚಾಹೆಲ್ ಹೇಳಿದ್ದಾರೆ.