ನವದೆಹಲಿ:2008ರ ಮುಂಬೈ ಭಯೋತ್ಪಾದನಾ ದಾಳಿ ನಡೆಸಿರುವುದೇ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಮಹಮ್ಮುದ್ ಅಲಿ ದುರ್ರಾನಿ ಸೋಮವಾರ ಆರೋಪಿಸಿದ್ದಾರೆ.
ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಎಂದು ಆರೋಪಿಸಿದ ದುರ್ರಾನಿ, ಈ ದಾಳಿ ಹಿಂದೆ ಪಾಕ್ ಸರ್ಕಾರದ ಕೈವಾಡ ಇಲ್ಲ ಎಂದು ಹೇಳಿದರು.
ಇಂದು ಭಯೋತ್ಪಾದನೆ ಎಂಬುದು ಜಾಗತಿಕ ಬೆದರಿಕೆಯಾಗಿದೆ. ಹಾಗಾಗಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದೇಶೀಯವಾಗಿ, ಪ್ರಾದೇಶಿಕವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ.
2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದವರು ಪಾಕ್ ಮೂಲದವರು. ಇದೊಂದು ಗಡಿಭಯೋತ್ಪಾದನೆಯ ಕೃತ್ಯ ಎಂದು ವಿಶ್ಲೇಷಿಸಿದ ದುರ್ರಾನಿ, ನಾನಿದನ್ನು ಒಪ್ಪಿಕೊಳ್ಳಲು ದ್ವೇಷಿಸುತ್ತೇನೆ, ಆದರೆ ಇದು ಸತ್ಯ ಎಂದು ಹೇಳಿದರು.
ದುರ್ರಾನಿ ಅವರು ನವದೆಹಲಿಯಲ್ಲಿನ ಡಿಫೆನ್ಸ್ ಅಂಡ್ ಸ್ಟಡೀಸ್ ಅಂಡ್ ಅನಾಲಿಸೀಸ್ ಸಂಸ್ಥೆ ಆಯೋಜಿಸಿದ್ದ 19ನೇ ಏಶಿಯನ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.